ಚಿಕ್ಕನಾಯಕನಹಳ್ಳಿ ತಾಲೂಕಿನ ಹೋಯ್ಸಳಕಟ್ಟೆಯಲ್ಲಿ ದಾನಿಗಳ ನೆರವಿನಿಂದ ಸ್ಥಳೀಯರೇ ಆರಂಭಿಸಿರುವ ನರ್ಸರಿ
- ಚಿ.ನಾ.ಹಳ್ಳಿ ತಾಲೂಕಿನಲ್ಲಿ 20 ಕೇಂದ್ರದಲ್ಲಿ ಆರಂಭ
- ಮುಂದಿನ ಶೈಕ್ಷಣಿಕ ವರ್ಷದಿಂದಲೇ ಎಲ್ ಕೆಜಿ, ಯುಕೆಜಿ
- ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣದ ಗುರಿ
ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿರುವ 387 ಅಂಗನವಾಡಿಗಳ ಪೈಕಿ ಈಗಾಗಲೇ 20 ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸುವ ಮೂಲಕ ಬಡವರ ಮಕ್ಕಳಿಗೆ ಗುಣಮಟ್ಟದ ಕಲಿಕೆಗೆ ವೇದಿಕೆ ನಿರ್ಮಿಸಿಕೊಡಲಾಗಿದೆ. ಕಳೆದ ವರ್ಷ 20 ಅಂಗನವಾಡಿ ಕೇಂದ್ರಗಳಲ್ಲಿ 287 ಮಕ್ಕಳು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ದಾಖಲಾಗಿದ್ದಾರೆ.
ವಿಧಾನ ಪರಿಷತ್ನಲ್ಲಿ ಸದಸ್ಯ ರಮೇಶ್ಬಾಬು ಕೇಳಿರುವ ಪ್ರಶ್ನೆಗೆ ಸರ್ಕಾರದ ಪರವಾಗಿ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ನೀಡಿರುವ ಮಾಹಿತಿಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದು ವಾಸ್ತವಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪೂರ್ವಪ್ರಾಥಮಿಕ ಶಾಲೆಯನ್ನು ಆರಂಭಿಸಿಯೇ ಇಲ್ಲ ಎಂದು ಖಚಿತಪಡಿಸಿದ್ದಾರೆ.
ಪ್ರಸ್ತುತ ಪರಿಶಿಷ್ಟ ಸಮುದಾಯದ 47 , 27 ಎಸ್ಟಿ, 6 ಅಲ್ಪಸಂಖ್ಯಾತ ಹಾಗೂ ಸಾಮಾನ್ಯ ವರ್ಗದ 283 ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ 363 ಕಾರ್ಯಕರ್ತೆಯರು ಹಾಗೂ 319 ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದು ಇನ್ನೂ 24 ಕೇಂದ್ರಗಳಲ್ಲಿ ಕಾರ್ಯಕರ್ತೆ ಹಾಗೂ 68 ಸಹಾಯಕಿ ಹುದ್ದೆಗಳು ಖಾಲಿ ಉಳಿದಿವೆ.
ತಾಲೂಕಿನಲ್ಲಿ ಶೇ.5ರಷ್ಟು ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವಪ್ರಾಥಮಿಕ ಶಾಲೆ ಆರಂಭಿಸಲು ಸರ್ಕಾರ ನಿರ್ಧರಿಸಿದ್ದು ಚಿಕ್ಕನಾಯಕನಹಳ್ಳಿ ಎ ಕೇಂದ್ರದಲ್ಲಿ 12 ಮಕ್ಕಳು, ಹಳ್ಳಿಕಾರರ ಬೀದಿ ಕೇಂದ್ರದಲ್ಲಿ 12, ದಬ್ಬಗುಂಟೆ ಎ 14, ದಬ್ಬಗುಂಟೆ ಬಿ 19, ಹೋಯ್ಸಳಕಟ್ಟೆ ಎ 9, ಹೋಯ್ಸಳಕಟ್ಟೆ ಬಿ 12, ಸಾಸಲು ಎ 10, ಸಾಸಲು ಬಿ 11, ಶೆಟ್ಟಿಕೆರೆ ಎ 10, ಶೆಟ್ಟಿಕೆರೆ ಬಿ 8, ಕಾತ್ರಿಕೆಹಾಳ್ಎ 11, ಕಾತ್ರಿಕೆಹಾಳ್ ಬಿ 9, ಬರಗೇಹಳ್ಳಿಎ 18, ಬರಗೇಹಳ್ಳಿ ಬಿ 21, ಹಂದನಕೆರೆ ಸಿ 14, ಹಂದನಕೆರೆ ಬಿ 22, ಜೋಗಿಹಳ್ಳಿ 8, ಮಲ್ಲಾಳ 28, ತಮ್ಮಡಿಹಳ್ಳಿ ಗೊಲ್ಲರಹಟ್ಟಿ ಎ 16, ತಮ್ಮಡಿಹಳ್ಳಿ ಗೊಲ್ಲರಹಟ್ಟಿ ಬಿ 14ಮಕ್ಕಳು ಕಲಿಯಲಿದ್ದಾರೆ.
ಪ್ರಸ್ತುತ ಗ್ರಾಮೀಣ ಮಟ್ಟದಲ್ಲಿಯೂ ಕಾನ್ವೆಂಟ್ ಮೋಹ ಹೆಚ್ಚಾಗಿದ್ದು ಜನರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಚಿಕ್ಕಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ನರ್ಸರಿ ಆರಂಭಿಸಿ ಮಕ್ಕಳು, ಪಾಲಕರನ್ನು ಆಕರ್ಷಿಸುವ ಯೋಜನೆಗೆ ಅಧಿಕಾರಿಗಳ ಸಹಕಾರ ಇಲ್ಲದಂತಾಗಿದೆ.
ಮೂರು ವರ್ಷದಲ್ಲಿ 6 ದಿನ ಮಾತ್ರ ಭೇಟಿ!
ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಜಿಲ್ಲಾದ್ಯಂತ ಸರ್ಕಾರಿ ಶಾಲೆ, ಹಾಸ್ಟೆಲ್ಗಳಿಗೆ ಭೇಟಿ ನೀಡಿ ಸಂಚಲನ ಸೃಷ್ಠಿಸುತ್ತಿದ್ದರೂ ಇತರೆ ಇಲಾಖೆ ಜಿಲ್ಲಾ ಮುಖ್ಯಸ್ಥರು ಕೇಂದ್ರ ಸ್ಥಾನಗಳನ್ನು ಬಿಟ್ಟು ಅಲ್ಲಾಡುತ್ತಿಲ್ಲ ಎಂಬ ದೂರುಗಳಿವೆ. ಅಂಗನವಾಡಿ ಕೇಂದ್ರಗಳ ಉಸ್ತುವಾರಿ ನೋಡಿಕೊಳ್ಳುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕಳೆದ 3 ವರ್ಷದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೇವಲ 6 ದಿನ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ದಾರಿಯಲ್ಲಿ ಸಿಕ್ಕ 37 ಅಂಗನನಾಡಿ ಅಷ್ಟೇ ನೋಡಲು ಸಾಧ್ಯವಾಗಿದೆ.
ಜಿಲ್ಲೆಯೆಲ್ಲೆಡೆಯೂ ಇದೇ ಪರಿಸ್ಥಿತಿಯಿದ್ದು ಜಿಲ್ಲಾ ಕೇಂದ್ರದಲ್ಲಿರುವ ಅಧಿಕಾರಿಗಳು ಇಲಾಖೆಯ ಅನುದಾನ ಖರ್ಚು ಮಾಡಲಷ್ಟೇ ಸೀಮಿತವಾಗಿದ್ದು ಸರ್ಕಾರದ ಮಹತ್ವಾಕಾಂ ಕಾರ್ಯಕ್ರಮಗಳು ಕೆಲಹಂತದಲ್ಲಿ ಯಾವಮಟ್ಟಿಗೆ ಅನುಷ್ಟಾನವಾಗುತ್ತಿವೆ ಎಂಬ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಆಯಾ ಗ್ರಾಮಗಳಲ್ಲಿಯೇ ವಾಸವಾಗಿರುವ ಸ್ಥಳಿಯರನ್ನು ಇಲಾಖೆ ಮಾರ್ಗಸೂಚಿಯನ್ವಯ ಆಯ್ಕೆ ಮಾಡಲಾಗುತ್ತದೆ. ಮದುವೆ, ಪತಿಯ ಮರಣ ಹಾಗೂ ಕೌಟುಂಬಿಕ ಸಮಸ್ಯೆ ಮತ್ತು ಇತರೆ ಕಾರಣಗಳಿಂದಾಗಿ ಬೇರೆ ತಾಲೂಕಿಗೆ ನಿಯಮಾನುಸಾರ ಸ್ಥಾನಪಲ್ಲಟವನ್ನು ಜಿಲ್ಲಾಮಟ್ಟದ ಸಮಿತಿ ಅಥವಾ ಪ್ರಧಾನ ಕಛೇರಿಯ ಆದೇಶದ ಮೇರೆಗೆ ಮಾಡಲಾಗುತ್ತದೆ.
ಆರಂಭದಲ್ಲಿ ಆಯಾ ತಾಲೂಕಿಗೆ ನೇಮಕವಾಗಿ ಮದುವೆಯ ನಂತರ ಬೇರೆ ತಾಲೂಕಿನಲ್ಲಿರುವ ಪತಿಯ ಮನೆಯಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಪ್ರತಿ ದಿನ ಪ್ರಯಾಣಿಸಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.