ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಮೇವು ವಿತರಣಾ ಕೇಂದ್ರಕ್ಕೆ ತುಮಕೂರು ವಿವಿಯ ತಂಡ ಭೇಟಿ ನೀಡಿ ಪರಿಶೀಲಿಸಿತು. ಶ್ರೀ ರಾಮಕೃಷ್ಣ ಸೇವಾಶ್ರಮದ ಪೀಠಾಧ್ಯಕ್ಷ ಜಪಾನಂದ ಸ್ವಾಮೀಜಿ, ತುಮಕೂರು ವಿವಿ ಕುಲಪತಿ ಪ್ರೊ.ಎಂ ವೆಂಕಟೇಶ್ವರಲು, ಡಾ.ಪರಶುರಾಮ್​, ಡಾ.ಗುಂಡೇಗೌಡ, ಅನ್ನಪೂರ್ಣೇಶ್ವರಿ ಇತರರು ಇದ್ದರು. 
ತುಮಕೂರು

ಸ್ವಾಮಿ ಜಪಾನಂದರ ಗೋ ಸೇವೆಗೆ ಪ್ರಶಂಸೆ

ಪ್ರಮುಖ ಮುಖ್ಯಾಂಶಗಳು

  • ಸ್ವಾಮಿ ಜಪಾನಂದರ ಗೋ ಸೇವೆಗೆ ಪ್ರಶಂಸೆ
ವಿಜಯವಾಣಿ ಸುದ್ದಿಜಾಲ ಪಾವಗಡ
ಬಿರು ಬೇಸಿಗೆಗೆ ಮೇವಿಲ್ಲದೆ ನರಳಾಡುತ್ತಿರುವ 8 ಸಾವಿರ ಗೋವುಗಳಿಗೆ ಪ್ರತಿನಿತ್ಯ ಬರಪರಿಹಾರ ಯೋಜನೆಯಡಿ ಮೇವು ಕೇಂದ್ರಗಳ ಮೂಲಕ ಮೇವು, ಹಿಂಡಿ, ಪೌಷ್ಟಿಕಾಂಶವುಳ್ಳ ಆಹಾರ ವಿತರಿಸುತ್ತಿರುವ ಶ್ರೀ ರಾಮಕೃಷ್ಣ ಸೇವಾಶ್ರಮದ ಪೀಠಾಧ್ಯಕ್ಷ ಜಪಾನಂದ ಸ್ವಾಮೀಜಿ ಅವರ ಗೋಸೇವೆ ರಾಜ್ಯಕ್ಕೆ ಮಾದರಿ ಎಂದು ತುಮಕೂರು ವಿವಿ ಕುಲಪತಿ ಪ್ರೊ.ಎಂ ವೆಂಕಟೇಶ್ವರಲು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಶ್ರೀ ರಾಮಕೃಷ್ಣ ಸೇವಾಶ್ರಮದ ಮೇವು ವಿತರಣಾ ಕೇಂದ್ರಕ್ಕೆ ತುಮಕೂರು ವಿವಿಯ ತಂಡ ಭೇಟಿ ನೀಡಿ, ಕೇಂದ್ರಕ್ಕೆ ಬಂದಿದ್ದ ನೂರಾರು ರೈತರಿಗೆ ಪ್ರತ್ಯಕ್ಷವಾಗಿ ಮೇವು ವಿತರಿಸಿ ಮಾತನಾಡಿ, ಜಪಾನಂದ ಜೀ ಅವರ ಕಾರ್ಯ ಯೋಜನೆಗಳನ್ನು ನಾವು ವೀಕ್ಷಿಸಿದ್ದೇವೆ. ಈ ಬಾರಿ ಬರಗಾಲ ಪರಿಹಾರ ಯೋಜನೆ ವೀಕ್ಷಿಸಲು ಸಾಧ್ಯವಾಗಿದೆ. ಶ್ರೀಗಳು ರಾಜ್ಯದ 5 ಜಿಲ್ಲೆಗಳಲ್ಲಿ ಮೇವಿಲ್ಲದೆ ನರಳುತ್ತಿರುವ ದೇವರ ಹಸುಗಳಿಗೆ, ಮಠಗಳ ಹಸುಗಳಿಗೆ ಹಾಗೂ ಚಳ್ಳಕೆರೆ ತಾಲೂಕಿನ ಅಜ್ಜನಯ್ಯನ ಹಟ್ಟಿ, ಮುತ್ತಗಾನಹಟ್ಟಿಯಲ್ಲಿ ಮೇವಿಲ್ಲದೆ ನರಳುತ್ತಿರುವ ಮೂಕ ಪ್ರಾಣಿಗಳ ಜೀವ ಉಳಿಸಲು ಯೋಜನೆ ಕೈಗೊಂಡು ಪ್ರತಿನಿತ್ಯ ಹತ್ತಕ್ಕೂ ಹೆಚ್ಚು ಟ್ರಾ$್ಯಕ್ಟರ್​ಗಳಲ್ಲಿ ಮೇವನ್ನು ವಿತರಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದರು.
ಆಂಧ್ರಪ್ರದೇಶದ ಕಣೇಕಲ್​ ವಿಭಾಗದಿಂದ ಮೇವನ್ನು ಖರೀದಿಸುತ್ತಿರುವ ಶ್ರೀಗಳು, ನಿತ್ಯ ಇಷ್ಟೊಂದು ಸಂಖ್ಯೆಯ ರಾಸುಗಳಿಗೆ ಇನ್ಫೋಸಿಸ್​ ಫೌಂಡೇಷನ್​ ಸುಧಾಮೂರ್ತಿ ಹಾಗೂ ಅನೇಕ ದಾನಿಗಳ ಸಹಕಾರದಿಂದ ಯಾವುದೇ ಸರ್ಕಾರಿ ಧನ ಸಹಾಯವಿಲ್ಲದೆ ನಿರಂತರವಾಗಿ ಮೇವು ವಿತರಿಸುತ್ತಿರುವುದು ಶ್ಲಾಘನೀಯ ಎಂದರು.
8 ಸಾವಿರ ರಾಸುಗಳಿಗೆ ಮೇವು: ಆಶ್ರಮದಿಂದ 28 ವರ್ಷಗಳಿಂದ ಪ್ರತಿವರ್ಷ ಬರ ಪರಿಹಾರ ಯೋಜನೆಯಲ್ಲಿ ಮೇವು ವಿತರಿಸಲಾಗುತ್ತಿತ್ತು. ಈ ಬಾರಿ ರಾಜ್ಯದ 5 ಜಿಲ್ಲೆಯ ಮೇವಿಲ್ಲದ ಬಸವಳಿದ ಮೂಕ ಪ್ರಾಣಿಗಳ ಜೀವ ಉಳಿಸಲು ರೈತರು, ಗೋಪಾಲಕರು ಪಡುತ್ತಿರುವ ಕಷ್ಟವನ್ನರಿತು ಜನವರಿಯಿಂದ ಇಲ್ಲಿಯವರೆಗೆ 8 ಸಾವಿರಕ್ಕೂ ಹೆಚ್ಚು ಮೂಕ ಪ್ರಾಣಿಗಳಿಗೆ ಮೇವು ವಿತರಿಸಲಾಗುತ್ತಿದೆ. ರೈತರು, ಗೋ ಪಾಲಕರು 40ರಿಂದ 50 ಕಿ.ಮೀ. ದೂರದಿಂದ ಬಂದು ಮೇವು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಭೇಟಿ ನೀಡಿದ ತಂಡಕ್ಕೆ ಶ್ರೀ ಜಪಾನಂದ ಸ್ವಾಮೀಜಿ ವಿವರಿಸಿದರು.
ಮೂಕವಿಸ್ಮಿತಗೊಂಡ ತಂಡ: ನಂತರ ತುಮಕೂರು ವಿವಿ ತಂಡ ಚಳ್ಳಕೆರೆಯ ಮುತ್ತಿಗಾನಹಟ್ಟಿ ಮತ್ತು ಅಜ್ಜಯ್ಯನಗುಡಿಯ ಹಟ್ಟಿಗೆ ಭೇಟಿ ನೀಡಿ 400ಕ್ಕೂ ಹೆಚ್ಚು ಅತ್ಯಂತ ಕೃಶವಾದ ಅನಾರೋಗ್ಯದಿಂದ ಬಳಲುತ್ತಿರುವ ಗೋವುಗಳಿಗೆ ಸ್ವತ@ ಹಿಂಡಿ ಮತ್ತು ಪೌಷ್ಟಿಕಾಂಶವುಳ್ಳ ಆಹಾರ ವಿತರಿಸಿತು. ಗೋವುಗಳು ಸ್ವಾಮೀಜಿ ಬರುವಿಕೆಯನ್ನೇ ಕಾತರದಿಂದ ಕಾದಿರುವಂತಿತ್ತು. ದೂರದ ಬೆಟ್ಟಗುಡ್ಡಗಳ ಹಾಗೂ ಕಣಿವೆಗಳಿಂದ ಸ್ವಾಮೀಜಿ ಅವರ ಕೂಗಿಗೆ ಹಸುಗಳು ಓಡಿ ಬರುವುದನ್ನು ಕಂಡು ವಿವಿ ತಂಡ ಅಚ್ಚರಿಗೊಂಡಿತು.
ತುಮಕೂರು ವಿಶ್ವವಿದ್ಯಾಲಯದ ಡಾ.ಪರಶುರಾಮ್​, ಡಾ.ಗುಂಡೇಗೌಡ, ಅನ್ನಪೂರ್ಣೇಶ್ವರಿ, ಆಹಾರ ವಿತರಣಾ ಸಮಿತಿಸದಸ್ಯರಾದ ಆರ್​.ಎಲ್​.ರಮೇಶ್​ ಬಾಬು, ಬಿ.ಆರ್​.ನಟರಾಜ ಶೆಟ್ಟಿ ಹಾಗೂ ಪ್ರಸನ್ನಕುಮಾರ್​, ಮೃದುಲ್​ ಸೇರಿದಂತೆ ಹಿರಿಯ ವಿದ್ಯಾರ್ಥಿಗಳ ತಂಡ, ಎನ್ನೆಸ್ಸೆಸ್​ ಸದಸ್ಯರು ಇದ್ದರು.