ದೇವರಾಯನದುರ್ಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಿದ್ದಗಂಗಾ ಚಾರಣ ತಂಡ (ಸ್ಯಾಟ್ ) ವತಿಯಿಂದ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಕ್ಲೀನ್ ಡ್ರೈವ್ ಗೆ ಯೋಗೀಶ್ ಶರ್ಮ ಚಾಲನೆ ನೀಡಿದರು. ಎಂ.ನಾರಾಯಣಸ್ವಾಮಿ, ರೂಪ, ಹಾಫ್ಜ್ ಹುಸೇನ್ ಮತ್ತಿತರರು ಇದ್ದರು.
- ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛತಾ ಆಂದೋಲನ
- 5.2 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ
- 800ಕ್ಕು ಹೆಚ್ಚು ಜನರು ಈ ಯಜ್ಞದಲ್ಲಿ ಭಾಗಿ
ತುಮಕೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ದೇವರಾಯನದುರ್ಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಕ್ಲೀನ್ ಡ್ರೈವ್ನಲ್ಲಿ 5.2 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಾಯಿತು.
ಪ್ಲಾಸ್ಟಿಕ್ ಪೀಡಿತ ಸ್ಥಳ ದೇವರಾಯನದುರ್ಗ ಮೀಸಲು ಅರಣ್ಯಪ್ರದೇಶದಲ್ಲಿ ಸಿದ್ದಗಂಗಾ ಚಾರಣ ತಂಡದ ಪ್ಲಾಸ್ಟಿಕ್ ಕ್ಲೀನ್ ಡ್ರೈವ್ನಲ್ಲಿ 800ಕ್ಕು ಹೆಚ್ಚು ಜನ ಸ್ವಯಂಪ್ರೇರಿತರಾಗಿ ಭಾಗಿಯಾಗಿದ್ದರು. ಸಿದ್ದಗಂಗಾ ವೃತ್ತದಿಂದ ದೇವರಾಯನದುರ್ಗದ ಬೆಟ್ಟದ ಮೇಲ್ಭಾಗದವರೆಗೆ ರಸ್ತೆ ಅಕ್ಕಪಕ್ಕದಲ್ಲಿ ಎಸೆಯಲಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಯಜ್ಞ ಯುದ್ಧೋಪಾದಿಯಲ್ಲಿ ಸಾಗಿತು. 17 ಸ್ಥಳಗಳಲ್ಲಿ 27 ತಂಡಗಳಾಗಿ ವಿಭಜಿಸಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಪರಿಸರ ರಕ್ಷಣಾ ಕಾರ್ಯಕ್ಕೆ ಕೊಡುಗೆ ನೀಡಲಾಯಿತು.
ಸ್ಯಾಟ್ ಸಂಕಲ್ಪ: ಸಿದ್ದಗಂಗಾ ಚಾರಣ ತಂಡವು 6ನೇ ವರ್ಷದ ವಿಶ್ವ ಪರಿಸರ ದಿನಾಚರಣೆ ಹಮ್ಮಿಕೊಂಡಿದ್ದು ಇದರ ಭಾಗವಾಗಿ 2022, 2024 ಇದೀಗ 2026ರಲ್ಲಿ ದೇವರಾಯನದುರ್ಗದ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಕ್ಲೀನ್ ಡ್ರೈವ್ ಹಮ್ಮಿಕೊಳ್ಳಲಾಗಿದೆ. ಸ್ಯಾಟ್ನ ಸೇವಾಮಿತ್ರರು, 150 ಸಿಐಎಸ್ಎಫ್ ಸ್ವಯಂಸೇವಕರು ಸ್ವಚ್ಛತಾ ಆಂದೋಲನದ ನೇತೃತ್ವವಹಿಸಿದ್ದರು. ಈ ಸ್ವಚ್ಛತಾ ಕಾರ್ಯದಲ್ಲಿ ಯಾವುದೇ ವಯೋಮಿತಿ ಇರಲಿಲ್ಲ.
ಸಣ್ಣಮಕ್ಕಳಿಂದ ಹಿಡಿದು ಹಿರಿಯರು ಕೂಡ ಪರಿಸರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. 800ಕ್ಕು ಹೆಚ್ಚು ಚೀಲಗಳಲ್ಲಿ ಸಂಗ್ರಹಿಸಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು 4 ಟ್ರಾಕ್ಟರ್ಗಳ್ಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಯಿತು. ಸಿಐಎಸ್ಎಫ್ ಡೆಪ್ಯುಟಿ ಕಮಾಂಡೆಂಟ್ ಯೋಗೀಶ್ ಶರ್ಮ, ಕೆಎಸ್ಆರ್ಪಿಯ ಎಂ.ನಾರಾಯಣಸ್ವಾಮಿ, ಎಸ್ಎಂಸಿಆರ್ಐನ ರೂಪ, ನಿವೃತ್ತ ಎಸ್ಪಿ ಹಾಫ್ಜ್ ಹುಸೇನ್ ಉಪಸ್ಥಿತರಿದ್ದರು.