- ಪೊಲೀಸ್ ಇಲಾಖೆ ಮೇಲೆ ಮಾಮೂಲಿ ಆರೋಪ
- ರೈಲ್ವೆ ಅಧಿಕಾರಿಗಳ ವಿರುದ್ಧ ಪ್ರಕರಣಕ್ಕೆ ಟಿಬಿಜೆ ಗರಂ
- ಸಣ್ಣ ನೀರಾವರಿ ಕೆರೆಗಳಲ್ಲಿ ಹೂಳು ತೆಗೆಯಲು ಸಮ್ಮತಿ
ತುಮಕೂರು: ಕೃಷಿ ಜಮೀನುಗಳಿಗೆ ಕೆರೆಯ ಹೂಳುಮಣ್ಣು ಹೊಡೆದುಕೊಳ್ಳಲು ಅಡ್ಡಿಯಾಗಿದ್ದ ನಿಯಮಕ್ಕೆ ಸಡಿಲಿಕೆ ಮಾಡಲಾಗಿದ್ದು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳಿಂದ ಕೃಷಿ ಜಮೀನುಗಳಿಗೆ ಮಣ್ಣು ಹೊಡೆದುಕೊಳ್ಳಲು ಸರ್ಕಾರ ಅನುಮತಿ ನೀಡಿದೆ.
ಕೆರೆಗಳ ಮೂಲ ಸ್ವರೂಪ ಉಳಿಸುವ ಉದ್ದೇಶದಿಂದ ಕೆರೆಯ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ಮಾತ್ರ ಹೂಳು ಮತ್ತು ಮಣ್ಣು ಹೊಡೆದುಕೊಳ್ಳಲು ಈವರೆಗೂ ಅನುಮತಿ ನೀಡಲಾಗಿತ್ತು. ಮೇ.11ರಂದು ಸಣ್ಣ ನೀರಾವರಿ ಇಲಾಖೆ ಹೊರಡಿಸಿರುವ ನೂತನ ಸುತ್ತೋಲೆಯಲ್ಲಿ ಎಲ್ಲಾ ರೈತರಿಗೂ ಮಣ್ಣು ಹೊಡೆದುಕೊಳ್ಳಲು ಅನುಮತಿ ಸಿಕ್ಕಿದೆ.
ರೈತರು ಕೃಷಿ ಜಮೀನುಗಳಿಗೆ ಬಳ್ಳಸಿಕೊಳ್ಳಲು ಕೆರೆಗಳಲ್ಲಿ ಶೇಖರಣೆಯಾಗುವ ಹೂಳು ಬಳಸಿಕೊಳ್ಳಲು ಅನುತಿ ಕೋರಿ ಆರ್ಟಿಸಿ ಹಾಗೂ ಅಗತ್ಯವಾದ ಹೂಳಿನ ಪ್ರಮಾಣದ ವಿವರಗಳೊಂದಿಗೆ ಆಯಾ ಉಪವಿಭಾಗದ ಕಚೇರಿಗೆ ಲಿಖಿತವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.
ರೈತರು ಆಯಾ ಎಇಇಗೆ ಅರ್ಜಿ ಸಲ್ಲಿಸಿದರೆ ಸಂಬಂಧಿಸಿದ ಇಂಜಿನಿಯರ್ ಕೆರೆಯಲ್ಲಿ ಶೇಖರಣೆಗೊಂಡಿರುವ ಹೂಳಿನ ಪರಿಮಾಣವನ್ನು ಅಂದಾಜಿಸಿ ಕೆರೆಯ ಮೂಲಸ್ವರೂಪಕ್ಕೆ ದಕ್ಕೆಯಾಗದಂತೆ ಗ್ರಾಪಂ ಪಿಡಿಒ ಮೇಲುಸ್ತುವಾರಿಯಲ್ಲಿ ವೈಜ್ಞಾನಿಕವಾಗಿ ಬಳಸಿಕೊಳ್ಳಲು ಸಬ್ ಡಿವಿಜನ್ಗಳಲ್ಲಿಯೇ ಅನುಮತಿ ನೀಡಲು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕೆರೆಗಳಲ್ಲಿ ಮಣ್ಣು ಹೊಡೆಯುವು ರೈತರಿಗೆ ಅಧಿಕಾರಿಗಳು ತೊಂದರೆ ನೀಡುತ್ತಿರುವ ಬಗ್ಗೆ ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ದಿಶಾ ಸಭೆಯಲ್ಲಿಯೂ ಸುಧೀರ್ ಚರ್ಚೆ ನಡೆಯಿತು. ಶಾಸಕರಾದ ಟಿ.ಬಿ.ಜಯಚಂದ್ರ, ಬಿ.ಸುರೇಶ್ಗೌಡ, ಎಂ.ಟಿ.ಕೃಷ್ಣಪ್ಪ ಗಣಿ ಮತ್ತು ಭೂವಿಜ್ಞಾನ, ಪೊಲೀಸ್ ಹಾಗೂ ಕಂದಾಯ ಇಲಾಖೆ ವಿರುದ್ಧ ಗಂಭೀರ ಆರೋಪ ಮಾಡಿದರು.
ಕೆರೆಯ ಹೂಳೆತ್ತುವ ಅಥವಾ ಸರ್ಕಾರಿ ಯೋಜನೆಗಳಿಗೆ ಕೆರೆಯ ಅಂಗಳದ ಮಣ್ಣು ಬಳಸಿಕೊಳ್ಳುವ ಸಂಬಂಧ ಜಿಲ್ಲಾಧಿಕಾರಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕು, ಸರ್ಕಾರದ ಮಾರ್ಗಸೂಚಿ ಓದಿಕೊಂಡು ರೈತರಿಗೆ ಅನುಕೂಲಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ಗೆ ಕೇಂದ್ರ ಸಚಿವ ವಿ.ಸೋಮಣ್ಣ ಸೂಚಿಸಿದರು.
ಕೆರೆಯ ಅಂಗಳದ ಮಣ್ಣನ್ನು ರೈತರು ಮೊದಲಿನಿಂದಲೂ ತೋಟಗಳಿಗೆ ಬಳಸಿಕೊಳ್ಳುವ ವಾಡಿಕೆಯಿದೆ. ಅದಕ್ಕೆ ಕಾನೂನಿನಲ್ಲಿ ಅವಕಾಶವೂ ಇದೆ. ಅಲ್ಲದೆ, ಕೆರೆಯ ಅಂಗಳದ ಮಣ್ಣನ್ನು ಇತರೆ ಉದ್ದೇಶಗಳಿಗೂ ಬಳಸಿಕೊಳ್ಳಲಾಗುತ್ತಿದೆ. ಆದರೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಈ ಪ್ರಕ್ರಿಯೆಗೆ ಅಡ್ಡಿಯಾಗಿದ್ದು, ಸರ್ಕಾರಿ ಉದ್ದೇಶಕ್ಕೆ ಎಂದು ಹೇಳಿದರೂ ಬಿಡದೆ ರೈಲ್ವೆ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಟಿ.ಬಿ.ಜಯಚಂದ್ರ ಆಕ್ರೋಶ ಹೊರಹಾಕಿದರು.
ಕೆರೆಯಲ್ಲಿ ರೈತರು ಮಣ್ಣು ಹೊಡೆದುಕೊಳ್ಳುವ ಲಾರಿಗಳಿಂದ ಪೊಲೀಸರು 20 ಸಾವಿರ ಮಾಮೂಲಿ ಫಿಕ್ಸ್ ಮಾಡಿಕೊಂಡಿದ್ದಾರೆ, ಕಂದಾಯ, ಗಣಿ ಇಲಾಖೆ ಅಧಿಕಾರಿಗಳು ಲಾಂತರ ರೂ.ಗೆ ಬೇಡಿಕೆ ಇಟ್ಟು ವಾಹನಗಳನ್ನು ವಶಪಡಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ. ಸರ್ಕಾರವೇ ಅಧಿಕಾರಿಗಳನ್ನು ಮುಂದೆಬಿಟ್ಟು ದಂಧೆ ನಡೆಸುತ್ತಿದೆ.
ಹೂಳು ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದ್ದರೂ ಯಾರಾದರೂ ದೂರು ನೀಡಿದರೆ ಸಾಕು ತಹಸೀಲ್ದಾರ್ಗಳು ಕೆರೆಗಳಿಗೆ ಜೀಪು ತೆಗೆದುಕೊಂಡು ಹೋಗಿ ಕೇಸು ದಾಖಲಿಸಿ ಪ್ರಚಾರ ಪಡೆಯುತ್ತಿದ್ದಾರೆ. ರೈತರಿಗೆ ತೊಂದರೆ ಕೊಟ್ಟರೆ ಸಹಿಸುವುದಿಲ್ಲ. ಅಧಿಕಾರಿಗಳು ಮೊದಲು ಕಾನೂನು ಓದು ತಿಳಿದುಕೊಳ್ಳಲಿ.