ಮಲ್ಲಿಕಾರ್ಜುನಯ್ಯ 
ತುಮಕೂರು

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನೇಣಿಗೆ ಶರಣು

ಪ್ರಮುಖ ಮುಖ್ಯಾಂಶಗಳು

  • ಮೇಲಾಧಿಕಾರಿ ಕಿರುಕುಳಕ್ಕೆ ಬೇಸತ್ತು
  • ಪಾವಗಡದ ಕಚೇರಿಯಲ್ಲಿ ಘಟನೆ
  • ಡೆತ್​ನೋಟ್​ನಲ್ಲಿ ಜೆಡಿ ಕೃಷ್ಣಪ್ಪ ಹೆಸರು ಉಲ್ಲೇಖ
ಪಾವಗಡ (ತುಮಕೂರು): ಮೇಲಾಧಿಕಾರಿಯ ಕಿರುಕುಳದಿಂದ ನೊಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯ(60) ಶುಕ್ರವಾರ ರಾತ್ರಿ ಕಚೇರಿಯಲ್ಲೇ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಆತ್ಮಹತ್ಯೆಗು ಮುನ್ನ ವಿಡಿಯೋ ಮಾಡಿ ಸಿಬ್ಬಂದಿ ಕಳುಹಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಕಳೆದ 3 ವರ್ಷದಿಂದ ಪಾವಗಡ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ (ಗ್ರೇಡ್​-1) ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನಯ್ಯ ಸೇವಾ ಅವಧಿ ಮಾರ್ಚ್​ 31ರಂದು ಕೊನೆಗೊಳ್ಳಲಿತ್ತು. ನಿವೃತ್ತಿಗೆ 10 ದಿನ ಮುನ್ನ ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಿದ್ದ ಮಲ್ಲಿಕಾರ್ಜುನಯ್ಯ ಸಂಜೆವರೆಗೂ ಕಚೇರಿಯಲ್ಲೇ ಕೆಲಸ ನಿರ್ವಹಿಸಿ ಎಲ್ಲಾ ಸಿಬ್ಬಂದಿ ಮನೆಗೆ ತೆರಳಿದ ಬಳಿಕ ಕಚೇರಿಯ ಸಭಾಂಗಣದಲ್ಲೇ
ನೇಣುಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಎಷ್ಟು ಹೊತ್ತಾದರು ಮನೆಗೆ ಬಾರದೇ ಇದ್ದಾಗ ಕುಟುಂಬಸ್ಥರು ಹಾಗೂ ಕಚೇರಿಯ ಇತರೆ ಸಿಬ್ಬಂದಿ ಎಲ್ಲೆಡೆ ಹುಡುಕಿ ಕೊನೆಗೆ ಕಚೇರಿಯಲ್ಲಿ ನೋಡಿದಾಗ ರಾತ್ರಿ 10.30ರಲ್ಲಿ ಘಟನೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗು ಮುನ್ನ ಸಹಾಯಕ ನಿರ್ದೆಹಕ ಮಲ್ಲಿಕಾರ್ಜುನ್​ ವಿಡಿಯೋ ಮಾಡಿದ್ದು, ವಿಡಿಯೋದಲ್ಲಿ ಇಲಾಖೆಯ ಮೇಲಾಧಿಕಾರಿಗಳ ಕಿರುಕಳದಿಂದ ಪ್ರಾಣ ಕಳೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಈ ವಿಡಿಯೋವನ್ನು ಸಿಬ್ಬಂದಿಗೆ ವ್ಯಾಟ್ಸ್​ ಆ್ಯಪ್​ ಕಳುಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಪಾವಗಡ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್​ ಅಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಗಿಲುಮುಟ್ಟಿದ ಆಕ್ರಂದನ: ಮೂಲತ: ಪಾವಗಡ ತಾಲೂಕಿನ ಗುಂಡರ್ಲಹಳ್ಳಿ ನಿವಾಸಿ ಮಲ್ಲಿಕಾರ್ಜುನಯ್ಯ ಈ ಆತ್ಮಹತ್ಯೆ ನಿರ್ಧಾರ ಕುಟುಂಬವನ್ನು ದು:ಖದ ಮಡುವಿಗೆ ನೂಕಿದೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು ಮಗನ ಮೃತದೇಹದ ಮುಂದೆ ತಾಯಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಮರಣೋತ್ತರ ಪರೀೆ ಬಳಿಕ ಮಲ್ಲಿಕಾರ್ಜುನಯ್ಯ ಪಾರ್ಥೀವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು ಶನಿವಾರ ಸಂಜೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯ ಶುಕ್ರವಾರ ಸಂಜೆ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಪತ್ನಿ ಕೊಟ್ಟ ದೂರಿನ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ವಿರುದ್ಧ ಬಿಎನ್​ಎಸ್​ 106ರ ಅಡಿ ದೂರು ದಾಖಲಿಸಿಕೊಂಡು, ಎ್​ಐಆರ್​ ಮಾಡಲಾಗಿದೆ. ಮಲ್ಲಿಕಾರ್ಜುನಯ್ಯ ಬರೆದ ಡೆತ್​ನೋಟ್​ ಹಾಗೂ ಆತ್ಮಹತ್ಯೆಗು ಮುನ್ನ ಮಾಡಿರುವ ವಿಡಿಯೋ ಸಹ ಸಿಕ್ಕಿದೆ.
ಕೆ.ವಿ.ಅಶೋಕ್​
ಜಿಲ್ಲಾ ಪೊಲೀಸ್​ ಅಧೀಕ್ಷಕ