ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸಚಿವ ಕೃಷ್ಣಭೈರೇಗೌಡ ರಾಷ್ಟ್ರ, ನಾಡ ಧ್ವಜಾರೋಹಣ ನೆರವೇರಿಸಿದರು. ಜಿ.ಬಿ.ಜ್ಯೋತಿಗಣೇಶ್​, ಶುಭಕಲ್ಯಾಣ್​, ಬಿ.ವಿ.ಅಶ್ವಿಜ, ಕೆ.ವಿ.ಅಶೋಕ್​ ಮತ್ತಿತರರು ಇದ್ದರು.  
ತುಮಕೂರು

ಹಿಂದಿ ಹೇರಿಕೆಯು ದೇಶದ ಐಕ್ಯತೆಗೆ ಮಾರಕ

ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಕಳವಳ

ತುಮಕೂರು: ಕೇಂದ್ರ ಸರ್ಕಾರದ ಒತ್ತಾಯಪೂರ್ವಕ ಹಿಂದಿ ಹೇರಿಕೆಯು ದೇಶದ ಐಕ್ಯತೆಗೆ ಮಾರಕವಾಗಿದೆ. ಒಂದು ಭಾಷೆಯನ್ನು ತುಳಿದು ಮತ್ತೊಂದು ಭಾಷೆ ಹೇರುವುದನ್ನು ನಾವು ಪ್ರತಿರೋಧಿಸಬೇಕು ಎಂದು ಗ್ರೇಟರ್​ ಬೆಂಗಳೂರು ಅಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಕರೆನೀಡಿದರು.

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತದ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತ ಮತ್ತಷ್ಟು ಐಕ್ಯವಾಗಿ, ಗಟ್ಟಿಯಾಗಿರಬೇಕೆಂದರೆ ಎಲ್ಲಾ ಭಾಷೆ, ಸಂಸತಿಯನ್ನು ಗೌರವಿಸಬೇಕು. ಹಿಂದಿ ಭಾಷೆ ಹೇರುವ ಪ್ರಯತ್ನವಾಗುತ್ತಿದೆ. ಇಂದು ಕನ್ನಡ ಭಾಷೆಗೆ ಅಳಿವು&ಉಳಿವಿನ ಪ್ರಶ್ನೆ ಎದುರಾಗಿದ್ದು ಎಲ್ಲರೂ ಒಗ್ಗಟ್ಟಾಗಬೇಕಿದೆ ಎಂದರು.

ನಮ್ಮ ಮನೆ-ಮನ ಕನ್ನಡವಾಗಬೇಕು. ನಮ್ಮ ಆಲೋಚನೆಗಳೂ ಕನ್ನಡವಾಗಿರಬೇಕು. ಬರೆದಂತೆ ಓದುವ, ಓದುವಂತೆ ಬರೆಯುವ ಅದ್ಭುತ ಭಾಷೆ ಈ ಕನ್ನಡ. ಹಿರಿಯ ತತ್ವಜ್ಞಾನಿ ವಿನೋಬ ಭಾವೆಯವರು ಕನ್ನಡ ಲಿಪಿಯನ್ನು ವಿಶ್ವ ಲಿಪಿಗಳ ರಾಣಿಯೆಂದು ಹೊಗಳಿರುವುದು ನಮ್ಮೆಲ್ಲರ ಹೆಮ್ಮೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ನಾವೆಲ್ಲ ಒಗ್ಗೂಡಿ ಕೈಜೋಡಿಸಬೇಕು ಎಂದು ಹೇಳಿದರು.

ರಾಜ್ಯೋತ್ಸವ ನಿತ್ಯೋತ್ಸವವಾಗಲಿ!: ಕರ್ನಾಟಕ ಏಕೀಕರಣಗೊಂಡ ನವೆಂಬರ್​ 1ರ ಕನ್ನಡ ರಾಜ್ಯೋತ್ಸವ ಸಂಭ್ರಮವು ನವೆಂಬರ್​ ಮಾಹೆಗೆ ಮಾತ್ರ ಸೀಮಿತವಾಗದೆ ನಿತ್ಯೋತ್ಸವವಾಗಬೇಕು. ಸಾವಿರಾರು ವರ್ಷದಿಂದ ತನ್ನದೇ ಆದ ಭೌಗೋಳಿಕ, ಸಾಂಸ್ಕತಿಕ, ಸಾಂಪ್ರದಾಯಿಕ ಹಿನ್ನೆಲೆಯನ್ನು ಕನ್ನಡ ನಾಡು ಹೊಂದಿದೆ. ಅಮೋಘವರ್ಷ ಕವಿರಾಜ ಮಾರ್ಗ ಕೃತಿಯೊಂದಿಗೆ ಸ್ಪಷ್ಟ ರೂಪ ಪಡೆದ ನಮ್ಮ ಕನ್ನಡ ಭಾಷೆ ಹಂತ-ಹಂತವಾಗಿ ಸಮೃದ್ಧ ಸಾಹಿತ್ಯದಿಂದ ಬೆಳೆದು ಬಂದು ಪ್ರಪಂಚದ ಪ್ರಮುಖ ಸಾಂಸ್ಕತಿಕ ಘಟಕಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂಬ ಕೃಷ್ಣಭೈರೇಗೌಡರ ನಿರರ್ಗಗಳ ಭಾಷಣ ತುಮಕೂರಿಗರನ್ನು ತಲೆದೂಗುವಂತೆ ಮಾಡಿತು.

ರಾಜ್ಯದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸುವ ಜತೆ-ಜತೆಗೆ ಕನ್ನಡ ಭಾಷೆ, ಸಂಸತಿಯ ಬೆಳವಣಿಗೆಗೆ ಪೂರಕವಾದ ಕೆಲಸ ಮಾಡುತ್ತಿದೆ ಎಂದರು.

ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್​ ಅಧ್ಯಕ್ಷತೆವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್​. ಸಿದ್ದಲಿಂಗಪ್ಪ, ಜಿಲ್ಲಾಧಿಕಾರಿ ಶುಭ ಕಲ್ಯಾಣ್​, ಜಿಲ್ಲಾ ಪೊಲೀಸ್​ ಅಧೀಕ್ಷಕ ಕೆ.ವಿ. ಅಶೋಕ್​, ಜಿಪಂ ಸಿಇಒ ಬಿ.ವಿ. ಅಶ್ವಿಜ, ಪಾಲಿಕೆ ಆಯುಕ್ತೆ ಬಿ.ಶುಭ, ಅಪರ ಜಿಲ್ಲಾಧಿಕಾರಿ ಡಾ.ಎನ್​. ತಿಪ್ಪೇಸ್ವಾಮಿ, ತಹಸೀಲ್ದಾರ್​ ರಾಜೇಶ್ವರಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ ಕು. ಮಿರ್ಜಿ ಉಪಸ್ಥಿತರಿದ್ದರು.

ಕನ್ನಡ ಬಾವುಟಕ್ಕೆ ಸ್ಥಾನಮಾನ

ಕನ್ನಡ ನಾಡ ಧ್ವಜ ಭಾಷೆ ನಾಡಿನ ಹಾಗೂ ನಮ್ಮ ಭಾಷೆಯ ಅಸ್ಮಿತೆಯ ಸಂಕೇತ. ನಾಡಗೀತೆಗಿರುವಂತೆ ಹಳದಿ-ಕೆಂಪು ಬಣ್ಣದ ಕನ್ನಡ ಬಾವುಟಕ್ಕೂ ಅಧಿಕೃತ ಸ್ಥಾನಮಾನ ದೊರೆಯಬೇಕು. ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗೆ ಕೇಂದ್ರದಿಂದ ಸಕಾರಾತ್ಮಕವಾಗಿ ಸ್ಪಂದನೆ ಸಿಗಲಿದೆ ಎಂಬ ಭರವಸೆ ಇದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

ಭಾರತ ಬಹು ಭಾಷಾ ಸಂಸ್ಕತಿಯ ಒಕ್ಕೂಟ. ಯಾವುದೇ ಒಂದು ಭಾಷೆ, ಸಂಸ್ಕತಿ, ರೀತಿ-ನೀತಿಗೆ ಸೀಮಿತವಾಗಿಲ್ಲ. ಎಲ್ಲಾ ಭಾಷೆ, ಸಂಸತಿಗೆ ಸಮಾನವಾದ ಗೌರವ ಸಿಗುವಂತಾಗಬೇಕು. ಆಗ ಮಾತ್ರ ಭಾರತದ ಐಕ್ಯತೆ ಸುಭದ್ರವಾಗುತ್ತದೆ. ಯಾವುದೇ ಭಾಷೆ, ಸಂಸ್ಕತಿಯನ್ನು ತುಳಿಯುವ ಕೆಲಸ ಮಾಡಿದರೆ ದೇಶದ ಐಕ್ಯತೆಯನ್ನು ಕುಂದಿಸಿದಂತಾಗುತ್ತದೆ ಎಂದು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಅನ್ನ, ಅಕ್ಷರ ದಾಸೋಹ ಸ್ಮರಣೆ

ಕಲ್ಪತರು ನಾಡಾದ ಈ ಜಿಲ್ಲೆಯು ರೈತರಿಗೆ ಮಾತ್ರ ಬದುಕು ಕೊಟ್ಟಿಲ್ಲ. ಸಾಹಿತ್ಯ ಲೋಕ, ರಂಗಭೂಮಿ, ಸಾಂಸ್ಕತಿಕ ಲೋಕಕ್ಕೆ ದೊಡ್ಡ ಕೊಡುಗೆಯನ್ನೇ ಕೊಟ್ಟಿದೆ ಎಂದರಲ್ಲದೆ, ದೇಶ-ವಿದೇಶಗಳಿಗೆ ಅಕ್ಷರ, ಅನ್ನ, ಆಶ್ರಯ ದಾಸೋಹ ನೀಡಿದ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಆದರ್ಶಗಳು ಜಗತ್ತಿನ ಎಲ್ಲಾ ಕಡೆ ಜೀವಂತವಾಗಿದೆ. ಸಾಲುಮರದ ತಿಮ್ಮಕ್ಕ ಅವರ ಪರಿಸರ ಪ್ರೇಮ ಇತರರಿಗೆ ಸ್ಫೂರ್ತಿಯಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ ಸ್ಮರಿಸಿದರು.

ತಾಯಿಭುವನೇಶ್ವರಿ ಮೆರವಣಿಗೆ

ಇದಕ್ಕೂ ಮುನ್ನ ಬೆಳಗ್ಗೆ 7.45ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದವರೆಗೆ ವಿವಿಧ ಇಲಾಖೆಗಳ ಸ್ತಬ್ದಚಿತ್ರ ಹಾಗೂ ಜನಪದ ಕಲಾತಂಡದೊಂದಿಗೆ ತಾಯಿ ಭುವನೇಶ್ವರಿ ಭಾವಚಿತ್ರವನ್ನು ಅಲಂಕೃತ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಯಿತು.

ಸಾಂಸ್ಕತಿಕ ಕಲರವ

ಬಟವಾಡಿಯ ಸೆಂಟ್​ ಮೆರೀಸ್​ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ "ಕನ್ನಡ ನಾಡಿನ ರನ್ನದ ರತುನ ಕೇಳೋ ಕತೆಯನ್ನ', ಕ್ಯಾತ್ಸಂದ್ರ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಱದೇಶಕ್ಕೆ ಯೋಧ ನಾಡಿಗೆ ರೈತ ಬಿ.ಹೆಚ್​. ರಸ್ತೆ ಶ್ರೀ ಸಿದ್ಧಗಂಗಾ ಪ್ರೌಢಶಾಲೆಯು ಜನುಮ ನೀಡುತ್ತಾಳೆ ನಮ್ಮ ತಾಯಿ ಹಾಗೂ ವಿಜಯ ಪಿಯು ಕಾಲೇಜಿನ ವಿದ್ಯಾರ್ಥಿಗಳು ಹಚ್ಚೇವು ಕನ್ನಡ ದೀಪ ಹಾಡಿನ ನೃತ್ಯ ಗಮನ ಸೆಳೆದವು.

ಪಥಸಂಚಲನ ಕನ್ನಿಕಾ ಶಾಲೆಗೆ ಪ್ರಥಮ

ಪಥಸಂಚಲನದಲ್ಲಿ ಕನ್ನಿಕಾ ಆಂಗ್ಲಶಾಲೆ ಹಾಗೂ ಬಾಪೂಜಿ ಸಂಯುಕ್ತ ಪದವಿಪೂರ್ವ ಕಾಲೇಜಿಗೆ ಪ್ರಥಮ, ದ್ವೀತಿಯ ಸ್ಥಾನಗಳಿಸಿದವು. ಪೊಲೀಸ್​ ವಿಭಾಗದಲ್ಲಿ 12ನೇ ಪಡೆ ಕೆಎಸ್​ಆರ್​ಪಿ ರಾಜ್ಯ ಮೀಸಲು ಪೊಲೀಸ್​ ತಂಡಕ್ಕೆ ಪ್ರಥಮ ಹಾಗೂ ಡಿಎಆರ್​ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್​ ತಂಡಕ್ಕೆ ದ್ವೀತಿಯ ಬಹುಮಾನ ಪಡೆದವು. ಎನ್​ಸಿಸಿ ವಿಭಾಗದಲ್ಲಿ ಸವೋರ್ದಯ ಕಾಲೇಜಿನ ಬಾಲಕರ ತಂಡ ಹಾಗೂ ಸಿದ್ಧಗಂಗಾ ಕಾಲೇಜಿನ ಬಾಲಕರ ತಂಡಕ್ಕೆ ಕ್ರಮವಾಗಿ ಪ್ರಥಮ ಹಾಗೂ ದ್ವೀತಿಯ ಬಹುಮಾನ ಕೊಡಮಾಡಲಾಯಿತು. ಸ್ಕೌಟ್ಸ್​ ಮತ್ತು ಗೈಡ್ಸ್​ ವಿಭಾಗದಲ್ಲಿ ಆರ್ಯನ್​ ಪ್ರೌಢಶಾಲೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಮುದ್ರಿತ ಭಾಷಣ ಪಕ್ಕಕ್ಕಿಟ್ಟ ಸಚಿವರು

ನಾಡಹಬ್ಬಗಳಲ್ಲಿ ಮುದ್ರಿತ ಭಾಷಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮೊರೆ ಹೋಗುವುದು ಸರ್ವೇ ಸಾಮಾನ್ಯ. ಜೆ.ಸಿ.ಮಾಧುಸ್ವಾಮಿ ಬಳಿಕ ಮುದ್ರಿತ ಭಾಷಣ ಪಕ್ಕಕ್ಕಿಟ್ಟು ಸಚಿವ ಕೃಷ್ಣಬೈರೇಗೌಡರ ನಿರರ್ಗಗಳ ಭಾಷಣ ತುಮಕೂರಿಗರನ್ನು ಆಕರ್ಷಿಸಿತು. ಇನ್ನೂ ಸುದ್ದಿಗೋಷ್ಠಿ ಬಳಿಕ ಗೌರವಿಸಲು ಮುಂದಾದ ಜಿಲ್ಲಾಡಳಿತದ ಸನ್ಮಾನವನ್ನು ನಿರಾಕರಿಸಿ ಸಚಿವರು ತಮ್ಮ ನಿಯೋಜಿತ ಕಾರ್ಯವನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿ ಬೆಂಗಳೂರಿನತ್ತ ತೆರಳಿದರು.

ೋಟೋ ಕ್ಯಾಪ್ಷನ್​:

ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸಚಿವ ಕೃಷ್ಣಭೈರೇಗೌಡ ರಾಷ್ಟ್ರ, ನಾಡ ಧ್ವಜಾರೋಹಣ ನೆರವೇರಿಸಿದರು. ಜಿ.ಬಿ.ಜ್ಯೋತಿಗಣೇಶ್​, ಶುಭಕಲ್ಯಾಣ್​, ಬಿ.ವಿ.ಅಶ್ವಿಜ, ಕೆ.ವಿ.ಅಶೋಕ್​ ಮತ್ತಿತರರು ಇದ್ದರು.