Over 35 sheep die after consuming poisonous fodder.
ಪಟ್ಟನಾಯಕನಹಳ್ಳಿ: ಶಿರಾ ತಾಲೂಕು ಗೌಡಗೆರೆ ಹೋಬಳಿಯ ಮಾರನಗೆರೆ ಗೊಲ್ಲರಹಟ್ಟಿಯಲ್ಲಿ ಸೋಮವಾರ ವಿಷಪೂರಿತ ಮೇವು ತಿಂದು 35ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ.
ಕುರಿಗಾಹಿ ಉಮೇಶ್ 80ಕ್ಕೂ ಹೆಚ್ಚು ಕುರಿ ಸಾಕಿದ್ದು, ಎಂದಿನಂತೆ ಕುರಿಗಳನ್ನು ಮೇಯಿಸಲು ಜಮೀನಿಗೆ ಹೊಡೆದುಕೊಂಡು ಹೋಗಿದ್ದರು. ಈ ವೇಳೆ ಕೆಲವು ಕುರಿಗಳು ಕೆಮಿಕಲ್ ಬಳಸಿದ್ದ ಕರ್ಬುಜ, ಕಲ್ಲಂಗಡಿ, ಸೌತೆಕಾಯಿ ಬೆಳೆಯುವ ಜಾಗಕ್ಕೆ ತೆರಳಿ ಮೇವು ತಿಂದಿವೆ. ಇದನ್ನು ಗಮನಿಸಿದ ಉಮೇಶ್ ತಕ್ಷಣ ಬೇರಡೆ ಹೊಡೆದುಕೊಂಡು ಹೋಗಿದ್ದಾರೆ. ಆದರೂ ಆ ಸ್ಥಳದಲ್ಲಿ ಮೇವು ತಿಂದಿದ್ದ 35ಕ್ಕೂ ಹೆಚ್ಚು ಕುರಿಗಳು ಒಂದೊಂದಾಗೆ ಉಸಿರುಚೆಲ್ಲಿವೆ. ಉಮೇಶ್ ನೀಡಿದ ಮಾಹಿತಿಯಿಂದ ಸ್ಥಳಕ್ಕೆ ಬಂದ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ ಸಂಪತ್ ಕುಮಾರ್ ಮೇವು ಪರಿಶೀಲಿಸಿ, ಲ್ಯಾಬ್ಗೆ ಕೊಂಡೊಯ್ದು ಪರಿಶೀಲಿಸಿದಾಗ ವಿಷಪೂರಿತ ಮೇವು ಎಂಬುದು ತಿಳಿದು ಬಂದಿದೆ. ಉಳಿದ ಕುರಿಗಳಿಗೆ ಚಿಕಿತ್ಸೆ ನೀಡಿದ್ದು, ಆರೋಗ್ಯವಾಗಿವೆ.
ಕುರಿಗಳ ಸಾವಿನ ಕಾರಣ ಪತ್ತೆ ಹಚ್ಚಿ, ಉಳಿದ ಕುರಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಂಪತ್ ಕುಮಾರ್ ಮತ್ತು ಪಶು ವೈದ್ಯಾಧಿಕಾರಿ ಡಾ.ರಮೇಶ್ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಚಿದಾನಂದ ಎಂ.ಗೌಡ ತಿಳಿಸಿದರು.
ತಾವರೆಕೆರೆ ಗ್ರಾಪಂ ಮಾಜಿ ಸದಸ್ಯ ಮಾರನಗೆರೆ ಮಧುಸೂದನ್, ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್ ಬಾಬು, ಮಹಾಲಿಂಗಪ್ಪ, ಗ್ರಾಪಂ ಮಾಜಿ ಉಪಾಧ್ಯಕ್ಷ ಸ್ನೇಹಪ್ರಿಯ ಶಿವು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಇದ್ದರು.