Opposition to sewage treatment plant 
ತುಮಕೂರು

ಮಲತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ವಿರೋಧ

ಶಿರಾ: ಜನಾಭಿಪ್ರಾಯ ಪಡೆಯದೇ ಏಕಾಏಕಿ ಮಲತ್ಯಾಜ್ಯ ಸಂಸ್ಕರಣಾ ಘಟಕದ ಕಾಮಗಾರಿ ಆರಂಭಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಅಧಿಕಾರಿಗಳನ್ನು ನಾದೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪ್ರಶ್ನಿಸಿದರು.
ಶಿರಾ ತಾಲೂಕಿನ ನಾದೂರು ಗ್ರಾಪಂ ವ್ಯಾಪ್ತಿಯಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಾದೂರು ಸಮೀಪದ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಎನ್​.ಪರಮೇಶ್​ ಮಾತನಾಡಿ, ಸರ್ಕಾರದ ಯೋಜನೆಗೆ ನಮ್ಮ ವಿರೋಧವಿಲ್ಲ. ಅದರೆ ಅನುಷ್ಠಾನಕ್ಕೆ ತರಲು ಹೊರಟಿರುವ ಸ್ಥಳ ಆಯ್ಕೆ ಸರಿ ಇಲ್ಲ. ಬದಲಾವಣೆ ಮಾಡಿ ಎಂಬುದಷ್ಟೇ ನಮ್ಮ ವಾದ ಎಂದರು.
ದಲಿತ ಮುಖಂಡ ದೇವರಾಜ್​ ಮಾತನಾಡಿ, ಶಿರಾ ತಾಲೂಕಿನ ಜತೆಗೆ ತುಮಕೂರಿನಿಂದ ಮಲ ತಂದು ಇಲ್ಲಿ ಸಂಸ್ಕರಣೆ ಮಾಡುವ ಅವಶ್ಯಕತೆ ಇಲ್ಲ. ಕಾಮಗಾರಿ ಅನುಷ್ಠಾನದ ಸ್ಥಳದ ಪಕ್ಕ ಕೆರೆ, ಆಶ್ರಯ ನಿವೇಶನ ಇದ್ದು, ಸಾಧಕ&ಬಾಧಕಗಳನ್ನು ನೋಡದೆ ಯೋಜನೆಯ ಅನುಷ್ಠಾನ ಬೇಡ ಎಂದರು.
ಹಿಂದೂ ಸಂಘಟನೆಯ ಹರೀಶ್​ ಮಾತನಾಡಿ, ಕಾಮಗಾರಿ ಆರಂಭದ ಮುಂಚೆ ಗ್ರಾಮಸ್ಥರ ಜತೆಗೆ ಚರ್ಚಿಸದೆ ಏಕಾಏಕಿ ತರಾತುರಿಯಲ್ಲಿ ಕಾಮಗಾರಿ ಆರಂಭದ ಹಿಂದೆ ಹುನ್ನಾರ ಅಡಗಿದೆ. ಮೂರು ದಿನಗಳಲ್ಲಿ ಜಾಗ ಹಸ್ತಾಂತರ ಪ್ರಕ್ರಿಯೆ ಮುಗಿದಿದೆ. ಇದನ್ನು ನೋಡಿದರೆ ಭ್ರಷ್ಟಾಚಾರ ನಡೆದಿರುವ ಅನುಮಾನವಿದ್ದು, ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ತಾಪಂ ಮಾಜಿ ಸದಸ್ಯ ಶ್ರೀನಿವಾಸ್​ ಮಾತನಾಡಿ, ಯೋಜನೆಯ ಆರಂಭದಲ್ಲಿಯೇ ನಾವು ಆಕ್ಷೇಪಣೆ ಸೂಚಿಸಿ ಮನವಿ ಕೊಟ್ಟರೂ ಅರೆಬರೆ ಕೆಲಸಕ್ಕೆ 15 ಲಕ್ಷ ಬಿಲ್​ ಪಾವತಿ ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್​ ಮಾತನಾಡಿ, ನಿಮ್ಮ ಮನವಿಯನ್ನು ಅಲಿಸಿದ್ದು, ಯೋಜನೆಯ ಅನುಷ್ಠಾನದ ಬಗ್ಗೆ ತಜ್ಞರಿಂದ ಮರುಪರಿಶೀಲನೆ ಮಾಡಿಸಿ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅಲ್ಲಿಯವರೆಗೂ ಕಾಮಗಾರಿ ಸ್ಥಗಿತಗೊಳಿಸಲಾಗುವುದು ಎಂದರು.