ತುಮಕೂರಿನಲ್ಲಿ ಆಯೋಜಿಸಿದ್ದ ದಿವ್ಯ ಸಂಜೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರೊಂದಿಗೆ ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಟಿ.ಬಿ.ಜಯಚಂದ್ರ ಇದ್ದರು.
- ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ವತಿಯಿಂದ ದಿವ್ಯ ಸಂಜೆ
- ಸಂವಾದದಲ್ಲಿ ಸತ್ಯಸಾಯಿ ಗ್ರಾಮದ ಮಧುಸೂದನ ಸಾಯಿ
- ಸಿದ್ದಗಂಗಾ ಮಠದ ಕಿರಿಯಶ್ರೀ ಶಿವಸಿದ್ದೇಶ್ವರ ಸ್ವಾಮಿ ಭಾಗಿ
ಶಿರಾ ಬಳಿಯ ಗಾಣದ ಹುಣಸೆಯಲ್ಲಿರುವ ಸತ್ಯ ಸಾಯಿ ಕಾರುಣ್ಯ ನಿಕೇತನಂ ಗುರುಕುಲದ ಶಿಕ್ಷಣವನ್ನು ಪದವಿಪೂರ್ವ ಕಾಲೇಜು ತನಕ ವಿಸ್ತರಿಸುವ ಚಿಂತನೆ ಇದೆ ಎಂದು ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ಹಾಗೂ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್' ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ "ದಿವ್ಯ ಸಂಗೀತ ಸಂಜೆ' ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸದ್ಗುರು, ತುಮಕೂರು ಜಿಲ್ಲೆಯೊಂದಿಗೆ ನಮ್ಮ ಒಡನಾಟ ಮೂಡಿದ್ದು ದೈವಸಂಕಲ್ಪ. ಒಂದು ಶಾಲೆ ಕಟ್ಟಲೆಂದು ಆರಂಭವಾದ ಪ್ರಯತ್ನದಲ್ಲಿ ಜತೆಯಾದ ಕೊಡುಗೈ ದಾನಿಗಳು ಮುಂದೆ ವಿಶ್ವವಿದ್ಯಾಲಯ ನಿಮಾರ್ಣಕ್ಕೂ ಸಹಾಯ ಮಾಡಿದರು ಎಂದರು.
ಸಮಾಜ ಮಕ್ಕಳ ಕಾಳಜಿ ಮಾಡಬೇಕು: ಮಗು ಕೇವಲ ಒಂದು ಕುಟುಂಬದ ಜವಾಬ್ದಾರಿ ಅಲ್ಲ. ಮಗುವಿನ ಪಾಲನೆಯು ಇಡೀ ಸಮಾಜದ, ದೇಶದ, ಜಗತ್ತಿನ ಜವಾಬ್ದಾರಿ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ವಿಐಪಿ ಎಂದರೆ ಅತ್ಯಂತ ಮುಗ್ಧ ವ್ಯಕ್ತಿಗಳು (ವೆರಿ ಇನ್ನೋಸೆಂಟ್ ಪರ್ಸನ್). ಮಕ್ಕಳು ಸಹ ಹೀಗೆ ಇರುತ್ತಾರೆ. ಹಾಗಾಗಿ ಅವರನ್ನು ಸಮಾಜ ಕಾಳಜಿ ಮಾಡಬೇಕು ಎಂದು ಸಲಹೆ ಮಾಡಿದರು.
ಮಕ್ಕಳ ಮೇಲೆ ವೆಚ್ಚ ಮಾಡುತ್ತಿಲ್ಲ. ದೇಶದ ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತಿದ್ದೇವೆ. ಇನ್ನೊಬ್ಬರ ಸಹಾಯದಿಂದ ಬೆಳೆದೆ ಎನ್ನುವ ಭಾವನೆ ಮಕ್ಕಳಲ್ಲಿ ಬಂದರೆ ಅವರು ಖಂಡಿತ ಇತರರಿಗಾಗಿ ಮಿಡಿಯುತ್ತಾರೆ. ಇದು ನನ್ನ ಉದ್ದೇಶ ಎಂಬುದನ್ನು ಸದ್ಗುರು ಹಂಚಿಕೊಂಡರು.
ಭಾರತದ ಶ್ರೇಷ್ಠ ಸಂತ: ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಭಾರತದ ಓರ್ವ ಶ್ರೇಷ್ಠ ಸಂತ. ಅವರ ನೇತೃತ್ವದಲ್ಲಿ ಹಲವು ಮಹತ್ವದ ಯೋಜನೆಗಳು ನಡೆಯುತ್ತಿವೆ. ಪೂಜ್ಯರ ಎಲ್ಲ ಶುಭಸಂಕಲ್ಪಗಳಿಗೆ ಸಿದ್ದಗಂಗಾ ಮಠದ ಗುರುಪರಂಪರೆಯ ಹಾರೈಕೆ ಇರುತ್ತದೆ ಎಂದು ಸಿದ್ದಗಂಗಾ ಮಠದ ಉತ್ತರಾಧಿಕಾರಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಇಡೀ ಜಗತ್ತನ್ನು ಒಂದುಗೂಡಿಸಲು ಸತ್ಯ ಸಾಯಿ ಗ್ರಾಮದ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ' ಸಂಸ್ಥೆ ಪ್ರಯತ್ನಿಸುತ್ತಿದೆ. ಕರ್ನಾಟಕದಲ್ಲಿ ಬಿಲ್ ಕೌಂಟರ್ ಇಲ್ಲದ ಒಂದೇ ಒಂದು ಆಸ್ಪತ್ರೆ ಮುದ್ದೇನಹಳ್ಳಿಯಲ್ಲಿದೆ. ಅದು ಮಧುಸೂದನ ಸಾಯಿ ಅವರ ಆಸ್ಪತ್ರೆ. ಆರೋಗ್ಯಯುತ ಜನಸಮುದಾಯ ನಿಮಾರ್ಣವಾದರೆ ಬಲಿಷ್ಠ ರಾಷ್ಟ್ರ ನಿಮಾರ್ಣವಾಗುತ್ತದೆ ಎಂದು ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಪ್ರಪಂಚದಲ್ಲಿ ಯಾರೂ ಮಾಡಲು ಸಾಧ್ಯವಾಗದ ಪ್ರಯತ್ನವನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಮಾಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕು ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಕೆಲಸಗಳನ್ನು ನೋಡಿದರೆ ಒಂದು ಪವಾಡದಂತೆ ಭಾಸವಾಗುತ್ತದೆ ಎಂದು ಹೇಳಿದರು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಶ್ರೀದೇವಿ ವೈದ್ಯಕಿಯ ಶಿಕ್ಷಣ ಸಂಸ್ಥೆಗಳ ಛೇರ್ಮನ್ ಡಾ.ಎಂ.ಆರ್. ಹುಲಿನಾಯ್ಕರ್, ಡ್ಯಾಶ್ ಪ್ರೆೃವೇಟ್ ಟೆಕ್ನಾಲಜಿ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್ ಎನ್. ರೆಡ್ಡಿ, ತುಮಕೂರು ವಿವಿ ವಿಶ್ರಾಂತ ಕುಲಪತಿಗಳಾದ ಎಚ್.ರಾಜಾಸಾಬ್, ಪ್ರೊ.ಎಂ.ವೆಂಕಟೇಶ್ವರಲು, ಅಖಿಲ ಭಾರತ ವೀರಶೈವ ಮಹಾಸಭಾದ ಡಾ.ಎಸ್.ಪರಮೇಶ್, ಉದ್ಯಮಿ ವೆಂಕಟೇಶ್ ಲಾಡ್ ಮತ್ತಿತರರು ಉಪಸ್ಥಿತರಿದ್ದರು. ಹಾಲಪ್ಪ ಪ್ರತಿಷ್ಠಾನದ ಮುರಳೀಧರ ಹಾಲಪ್ಪ ಸ್ವಾಗತಿಸಿದರು. ಟಿ.ಸಿ.ಪ್ರವಿಣ್ ಕುಮಾರ್ ನಿರೂಪಿಸಿದರು.
ಪೂಜ್ಯ ಶಿವಕುಮಾರ ಸ್ವಾಮೀಜಿ ಅವರಂತೆ ಯಾವುದೇ ಸಂಕುಚಿತ ಮನೋಭಾವ ಇಲ್ಲದ ಮತ್ತೋರ್ವ ಸಂತ ಎಂದರೆ ಸದ್ಗುರು ಶ್ರೀ ಮಧುಸೂದನ ಸಾಯಿ. ಧ್ವನಿ-, ಆಸರೆ ಇಲ್ಲದವರಿಗಾಗಿ ಶ್ರಮಿಸುತ್ತಿರುವ ಈ ಸಂಸ್ಥೆಯು ಕೇವಲ 15 ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಸಂದೇಶ ಕೊಡುವ ಮಟ್ಟಕ್ಕೆ ಬೆಳೆದಿದೆ. 'ಮಾನವ ಸೇವೆಯೇ ಮಾಧವ ಸೇವೆ' ಎನ್ನುವ ಸತ್ಯ ಸಾಯಿ ಬಾಬಾ ಅವರ ಸಂದೇಶವನ್ನು ಸದ್ಗುರುಗಳು ಕೇವಲ ಬೋಧಿಸುತ್ತಿಲ್ಲ. ಅದನ್ನು ಅವರು ಅಕ್ಷರಶ@ ಅನುಸರಿಸುತ್ತಿದ್ದಾರೆ.
ಅರ್ಜೆಂಟ್ ಕೇರ್ ಕ್ಲಿನಿಕ್
ಗ್ರಾಮೀಣ ಪ್ರದೇಶಗಳಲ್ಲಿ ಸುಸಜ್ಜಿತ ತುರ್ತು ಆರೈಕೆ ಕೇಂದ್ರಗಳನ್ನು (ಅರ್ಜೆಂಟ್ ಕೇರ್) ಆರಂಭಿಸುವ ಚಿಂತನೆ ಇದೆ. ಈಗಾಗಲೇ ಮಧುಗಿರಿ ಸಮೀಪ ಇಂತಹ ಒಂದು ಆರೋಗ್ಯ ಕೇಂದ್ರ ಆರಂಭವಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದರು.
ವೈದ್ಯಕಿಯ ವೆಚ್ಚ ಕೇವಲ ಆಸ್ಪತ್ರೆ ಖರ್ಚುವೆಚ್ಚಕ್ಕೆ ಸೀಮಿತವಲ್ಲ. ಅನಾರೋಗ್ಯದಿಂದ ಬಡವರು, ಕೂಲಿಕಾರ್ಮಿಕರು 3&4 ದಿನ ದುಡಿಯಲು ಸಾಧ್ಯವಾಗದಿದ್ದರೆ ಅವರ ಬಡತನದ ತೀವ್ರತೆ ಇನ್ನಷ್ಟು ಹೆಚ್ಚಾಗಲ್ತಿದೆ. ಹಾಗಾಗಿ ಅವರು ವಾಸಿಸುವ ಸ್ಥಳದ ಸಮೀಪವೇ ಅರ್ಜೆಂಟ್ ಕೇರ್ ಕ್ಲಿನಿಕ್ಗಳನ್ನು ಪ್ರಾರಂಭಿಸಲಾಗುವುದು. ಈ ಕ್ಲಿನಿಕ್ಗಳು ಟೆಲಿಮಿಡಿಸಿನ್ ಸೌಲಭ್ಯದ ಮೂಲಕ ನಮ್ಮ ವೈದ್ಯಕಿಯ ಕಾಲೇಜಿನೊಂದಿಗೆ ಸಂಪರ್ಕ ಹೊಂದಿರುತ್ತವೆ. ಈ ವ್ಯವಸ್ಥೆ ಮೂಲಕ ಮೇಘಾಲಯ, ಅಸ್ಸಾಂ, ಪಶ್ಚಿಮಬಂಗಾಳದಂತಹ ರಾಜ್ಯಗಳ ದುರ್ಗಮ ಪ್ರದೇಶಗಳಲ್ಲಿಯೂ ಸೇವೆ ಒದಗಿಸಲು ಸಾಧ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಘೋಷಿಸಿದರು.