- ವಿಶ್ವಭೂಪಟದಲ್ಲಿ ತುಮಕೂರು ಛಾಪು
- ಕೇಂದ್ರ ಸಚಿವ ವಿ.ಸೋಮಣ್ಣ
- ಸಾಧು ಸಂತರ ನಾಡು
ತುಮಕೂರು: ವಿಶ್ವ ಭೂಪಟದಲ್ಲಿ ತುಮಕೂರಿಗೆ ತನ್ನದೇ ಆದ ಹೆಸರಿದೆ. ಇದು ಪುಣ್ಯಭೂಮಿ. ಸಾಧು ಸಂತರ ನಾಡು. ಹಾಗಾಗಿ, ತುಮಕೂರಿನ ಹೆಸರು ಬದಲಾವಣೆ ಅವಶ್ಯಕತೆ ಇಲ್ಲ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಗುಬ್ಬಿ ತಾಲೂಕು ಕಳ್ಳಿಪಾಳ್ಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಜಿ.ಪರಮೇಶ್ವರ್ ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆ ಬದಲಿಸಬೇಕೆಂದು ಯಾವುದೊ ಉದ್ವೇಗದಲ್ಲಿ ಹೇಳಿರಬೇಕು. ಈ ಬಗ್ಗೆ ನಾನು ದೂರವಾಣಿ ಕರೆ ಮಾಡಿ ವಿಚಾರಿಸಿದಾಗ " ಹಾಗೇನು ಇಲ್ಲ ಕಣಣ್ಣ. ಮಾತನಾಡಬಾರದಿತ್ತು ಮಾತನಾಡಿಬಿಟ್ಟೆ' ಎಂದಿದ್ದು ಆ ಕುರಿತು ಮತ್ತೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದರು.
ಡಿಕೆಶಿ ಒಳ್ಳೆಯ ಕೆಲಸ ಮಾಡಲಿ: ಡಿ.ಕೆ.ಶಿವಕುಮಾರ್ ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಲಿ. ಮೊದಲು ಪಕ್ಷದ ಗೋಜಲು ಮತ್ತು ಅನಿಶ್ಚಿತತೆ ಸರಿಮಾಡಿಕೊಳ್ಳಲಿದೆ. ಕಾಂಗ್ರೆಸ್ ಪಕ್ಷ ಹಾಗೂ ಅವರ ಹೈಕಮಾಂಡ್ ಒಳ್ಳೆಯ ಸ್ಥಾನಮಾನ ಕೊಟ್ಟಿದೆ ಅದನ್ನು ಉಳಿಸಿಕೊಂಡು ಹೋಗುವಂತಹ ಕೆಲಸ ಮಾಡಲಿ ಎಂದು ಸೋಮಣ್ಣ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಕುರಿತು ನನ್ನ ಬಳಿ ಯಾವುದೇ ಮಾಹಿತಿ ಇಲ್ಲ. ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷಕ್ಕಿಂತ ದೇಶ ದೊಡ್ಡದ್ದು ಎಂಬುದು ನನ್ನ ಅಭಿಪ್ರಾಯ. ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದೀನಿ. ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆ ಗೊತ್ತಿಲ್ಲ. ಪಕ್ಷದ ಸಂದೇಶಕ್ಕೆ ಹಾಗೂ ಹೈಕಮಾಂಡ್ ಸೂಚನೆಗೆ ನಾವೆಲ್ಲರು ಬದ್ಧರಾಗಿರುತ್ತೇವೆ.