ತುಮಕೂರು ನಗರದ ಸರ್ಕಾರಿ ಪದವಿ ಕಾಲೇಜು.  
ತುಮಕೂರು

ಸರ್ಕಾರಿ ಪದವಿ ಕಾಲೇಜುಗಳ ಅಭಿವೃದ್ಧಿಗೆ ಸದಸ್ಯರೇ ಇಲ್ಲ!

ಪ್ರಮುಖ ಮುಖ್ಯಾಂಶಗಳು

  • ಸಿಡಿಸಿ ಸದಸ್ಯರ ನೇಮಕಾತಿಗೆ ಸಚಿವರಿಗೆ ಮನಸ್ಸಿಲ್ಲ
  • ರಾಜ್ಯದ 245, ಜಿಲ್ಲೆಯಲ್ಲಿ 14 ಕಾಲೇಜುಗಳಲ್ಲಿ ಬಾಕಿ
ತುಮಕೂರು: ಈಗಾಗಲೇ ಪ್ರವೇಶಾತಿ ಕುಸಿತವಾಗಿರುವ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಅಭಿವೃದ್ಧಿ ಸಮಿತಿ ಸದಸ್ಯರ ನೇಮಕ ಕೂಡ ನೆನೆದಗುದಿಗೆ ಬಿದ್ದಿದೆ. ಸರ್ಕಾರ ಬಂದಾಗಿನಿಂದಲೂ ನಿಗಮ, ಮಂಡಳಿಗಳಲ್ಲಿ ನೇಮಕಾತಿಗೆ ಚಾತಕ ಪಕ್ಷದಂತೆ ಕಾಯುತ್ತಿರುವ ಕಾಂಗ್ರೆಸ್​ ಕಾರ್ಯಕರ್ತರಿಗೆ ಸ್ಥಳಿಯ ಕಾಲೇಜು ಅಭಿವೃದ್ಧಿ ಸಮಿತಿಗೂ ನೇಮಿಸುವ ಮನಸ್ಸು ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಂದಿಲ್ಲ.
ರಾಜ್ಯದಲ್ಲಿ ಈವರೆಗೂ ಕೇವಲ 191 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮಾತ್ರ ಕಾಲೇಜು ಅಭಿವೃದ್ಧಿ ಸಮಿತಿ ರಚಿಸಲು ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಹೆಸರು ಶಿಾರಸು ಮಾಡಿದ್ದು ಇನ್ನೂ 245 ಸರ್ಕಾರಿ ಕಾಲೇಜುಗಳಲ್ಲಿ ಸಮುದಾಯದ ಸಹಭಾಗಿತ್ವ ನೀಡಲು ಸ್ಥಳಿಯರನ್ನು ಸಮಿತಿಗೆ ಸೇರಿಸಲು ಸಚಿವರಿಗೆ ಸಮಯವೇ ಸಿಕ್ಕಿಲ್ಲ.
ತುಮಕೂರು ಜಿಲ್ಲೆಯಲ್ಲಿ 8 ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ಕಾಲೇಜು ಅಭಿವೃದ್ಧಿ ಸಮಿತಿ(ಸಿಡಿಸಿ) ರಚನೆಯಾಗಿದ್ದು ಇನ್ನೂ 14 ಕಾಲೇಜುಗಳಲ್ಲಿ ಸಮಿತಿಗೆ ಹೆಸರುಗಳನ್ನು ಶಿಾರಸು ಮಾಡಿಲ್ಲ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಪದವಿ ಕಾಲೇಜುಗಳಲ್ಲಿ ಸದಸ್ಯರನ್ನು ನೇಮಿಸುವ ಹೆಸರು ಶಿಾರಸು ಮಾಡುವ ಹೊಣೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲಾಗಿದೆ.
ಸ್ಥಳಿಯವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದವರನ್ನು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರನ್ನಾಗಿ ನೇಮಿಸಿಕೊಳ್ಳುವುದರಿಂದ ಕಾಲೇಜು ಅಭಿವೃದ್ಧಿ, ಗ್ರಂಥಾಲಯ ವ್ಯವಸ್ಥೆಗಳಿಗೆ ಸಂಪನ್ಮೂಲ ಸಂಗ್ರಹಣೆ ಹಾಗೂ ಇನ್ನಿತರೆ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಸಮಿತಿ ಶ್ರಮಿಸಲು ಸಹಕಾರಿಯಾಗಿದ್ದು ಇಂತಹ ಅಧಿಕಾರವನ್ನು ನೀಡಲು ಸರ್ಕಾರದ ಸಚಿವರು ಹಿಂದೇಟು ಹಾಕುವುದು ಅಚ್ಚರಿ ಮೂಡಿಸಿದೆ.
ಕಾಲೇಜು ಅಭಿವೃದ್ಧಿ ಸಮಿತಿ ಕನಿಷ್ಟ 2 ತಿಂಗಳಿಗೊಮ್ಮೆ ಸಭೆ ನಡೆಸಬೇಕಿದ್ದು ಇಂತಹ ಸಭೆಯಲ್ಲಿ ಚರ್ಚಿಸಲಾಗುವ ವಿಷಯಗಳು ಮತ್ತು ಈ ಬಗ್ಗೆ ತೆಗೆದುಕೊಂಡು ಕ್ರಮಗಳ ಅನುಪಾಲನಾ ವರದಿಯನ್ನು 2 ತಿಂಗಳಿಗೊಮ್ಮೆ ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಬೇಕು ಎಂದು ಸಮಿತಿ ರಚಿನೆಗೆ ನೀಡುವ ಅನುಮೋದನೆ ಆದೇಶದಲ್ಲಿಯೇ ಉಲ್ಲೇಖಿಸಲಾಗಿರುತ್ತದೆ.
ಜಿಲ್ಲೆಯಲ್ಲಿ ಮಧುಗಿರಿ ತಾಲೂಕು ಬಡುವನಹಳ್ಳಿ, ಬುಕ್ಕಾಪಟ್ಟಣ, ಮಧುಗಿರಿ, ಚಿಕ್ಕನಾಯಕನಹಳ್ಳಿ, ಶಿರಾ, ಪಾವಗಡ ಮಹಿಳಾ ಪದವಿ ಕಾಲೇಜು, ಸಿ.ಎಸ್​.ಪುರ, ಪಾವಗಡ ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ಕಾಲೇಜು ಅಭಿವೃದ್ಧಿ ಸಮಿತಿಗಳು ರಚನೆಯಾಗಿವೆ.
ಜಿಲ್ಲೆಯಲ್ಲಿ ಸಿಡಿಸಿ ರಚನೆಯಾಗದ ಕಾಲೇಜುಗಳು:
ತುಮಕೂರು ಜಿಲ್ಲೆಯಲ್ಲಿ 24 ಸರ್ಕಾರಿ ಪದವಿ ಕಾಲೇಜುಗಳಿದ್ದು ಈ ಪೈಕಿ 14 ಕಾಲೇಜುಗಳಲ್ಲಿ ಮಾತ್ರ ಕಾಲೇಜು ಅಭಿವೃದ್ಧಿ ಸಮಿತಿ ರಚಿಸಲಾಗಿದೆ. ಇನ್ನೂ 10 ಕಾಲೇಜುಗಳಲ್ಲಿ ಸಮಿತಿ ರಚಿಸಲು ಹೆಸರು ಶಿಾರಸು ಮಾಡಲು ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಡಾ.ಜಿ.ಪರಮೇಶ್ವರ ಅವರಿಗೆ ಸಾಧ್ಯವಾಗಿಲ್ಲ. ಸಚಿವರ ಗಮನ ಸೆಳೆದು ಹೆಸರು ಪಟ್ಟಿ ಪಡೆಯುವ ಕೆಲಸವನ್ನು ಆಯಾ ಕಾಲೇಜು ಪ್ರಾಚಾರ್ಯರು ಮಾಡುತ್ತಿಲ್ಲ.
ಜಿಲ್ಲಾ ಕೇಂದ್ರ ತುಮಕೂರಿನ ಸರ್ಕಾರಿ ಪದವಿ ಕಾಲೇಜು, ಸರ್ಕಾರಿ ಮಹಿಳಾ ಪದವಿ ಕಾಲೇಜು, ಸರ್ಕಾರಿ ಸಂಜೆ ಕಾಲೇಜು ಹಾಗೂ ಸರ್ಕಾರಿ ಚಿತ್ರಕಲಾ ಶಾಲೆಗೂ ಸಮಿತಿ ರಚನೆಯಾಗಿಲ್ಲ. ಜತೆಗೆ ಬೆಳ್ಳಾವಿ, ಹೆಬ್ಬೂರು, ಕುಣಿಗಲ್​, ಗುಬ್ಬಿ, ಕೊರಟಗೆರೆ, ತುರುವೇಕೆರೆ, ದಂಡಿನಶಿವರ, ತಿಪಟೂರು, ಹುಳಿಯಾರು, ಮಧುಗಿರಿ ಕಾಲೇಜುಗಳಲ್ಲಿ ಬಹುವರ್ಷದಿಂದಲೂ ಕಾಲೇಜು ಅಭಿವೃದ್ಧಿ ಸಮಿತಿ ಇಲ್ಲ.
ರಾಜ್ಯದಲ್ಲಿ 245 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅಭಿವೃದ್ಧಿ ಸಮಿತಿ ಸದಸ್ಯರನ್ನು ನೇಮಿಸುವುದು ಬಾಕಿಯಿದೆ, ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರಿಂದ ಸಮಿತಿ ಸದಸ್ಯರನ್ನು ನಾಮ ನಿರ್ದೇಶನ ಮಾಡಿ, ಅನುಮೋದಿಸಿರುವ ಪ್ರಸ್ತಾವನೆಗಳನ್ನು ಸಲ್ಲಿಸಿ ಕಾಲೇಜು ಅಭಿವೃದ್ಧಿ ಸಮಿತಿ ಮಾಡಿಕೊಳ್ಳುವಂತೆ ಸೂಚಿಸಲಾಗಿದ್ದು, ಉನ್ನತ ಶಿಕ್ಷಣ ಇಲಾಖೆಗೆ ಸ್ವೀಕೃತವಾಗುವ ಪ್ರಸ್ತಾವನೆ ಪರಿಶೀಲಿಸಿ, ನಿಯಮಾನುಸಾರ ಅನುಮೋದನೆ ನೀಡಲಾಗುತ್ತಿದೆ.
ಬಸವರಾಜ ರಾಯರೆಡ್ಡಿ
ಉನ್ನತ ಶಿಕ್ಷಣ ಸಚಿವ