ತುಮಕೂರು: ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಬಿಜೆಪಿಯ ಕೆ.ಎಂ.ಸುರೇಶ್ ಪ್ರಚಂಡ ಗೆಲುವು ಸಾಧಿಸಿದ್ದಾರೆ.
ಬಿಜೆಪಿಯ ಕೆ.ಎಂ.ಸುರೇಶ್ 66020 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಶಶಿಹುಲಿಕುಂಟೆಮಠ್ 42922 ಮತಗಳಿಸಿದರು. ಸುರೇಶ್ 23098 ಮತಗಳ ಅಂತರದಿಂದ ಜಯಗಳಿಸಿದ್ದು ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ರ್ನಿಣಯವಾಯಿತು. ಬಿಜೆಪಿ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಲಿ ಎಂಎಲ್ಸಿ ಚಿದಾನಂದ ಗೌಡ ಬದಲು ದಾವಣಗೆರೆ ಮೂಲದ ಸುರೇಶ್ರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಕಾಂಗ್ರೆಸ್ನಿಂದ ತುಮಕೂರಿನ ಶಶಿಹುಲಿಕುಂಟೆ ಮಠ್ ಸ್ಪರ್ಧಿಸಿದ್ದರು. ಇಬ್ಬರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು ಈ ಬಾರಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟಿತ್ತು. ಅಂತಿಮವಾಗಿ ಎನ್ಡಿಎ ಒಕ್ಕೂಟ ಗೆಲುವಿನ ನಗೆಬೀರಿತು.
20076 ಮತ ತಿರಸತ: ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ 20076 ಮತಗಳು ತಿರಸತಗೊಂಡಿವೆ. ಕಣದಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿ ಅಭ್ಯರ್ಥಿಗಳಿದ್ದು ಒಟ್ಟು 132138 ಮತ ಚಲಾವಣೆ ಆಗಿತ್ತು.
ರಾತ್ರಿ ಇಡೀ ಏಣಿಕೆ: ಮಂಗಳವಾರ ಸಂಜೆ 4ಕ್ಕೆ ಮತ ಎಣಿಕೆ ಪ್ರಾರಂಭವಾಗಿದ್ದು ಬುಧವಾರ ಬೆಳಗ್ಗೆ ಅಂತಿಮ ಸುತ್ತಿನ ಎಣಿಕೆ ಪೂರ್ಣಗೊಂಡಿತು. ಮೊದಲ ಸುತ್ತಿನಿಂದಲೇ ಬಿಜೆಪಿ ಸುರೇಶ್ ಮುನ್ನಡೆ ಸಾಧಿಸಿಕೊಂಡು ಬಂದಿದ್ದು ಪ್ರತಿ ಸುತ್ತಿನಲ್ಲು ಮುನ್ನಡೆ ಅಂತರ ಹೆಚ್ಚಿಸಿಕೊಂಡು ಬಂದರು. ಅಂತಿಮ ಹಾಗೂ 10ನೇ ಸುತ್ತಿನ ಏಣಿಕೆ ಬಳಿಕ ಸುರೇಶ್ 66020 ಮತಗಳಿಸಿ ಜಯದ ನಗೆಬೀರಿದರು.