ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ 
ತುಮಕೂರು

21 ರಿಂದ ರಾಷ್ಟ್ರೀಯ ಪಲ್ಸ್​ ಪೋಲಿಯೋ ಅಭಿಯಾನ

ಪ್ರಮುಖ ಮುಖ್ಯಾಂಶಗಳು

  • 5 ವರ್ಷದೊಳಗಿನ 1,86,969 ಮಕ್ಕಳಿಗೆ ಲಸಿಕೆ
  • 1211 ಲಸಿಕಾ ಕೇಂದ್ರ
  • ಡಿಸಿ ಶುಭಕಲ್ಯಾಣ್​ ಮಾಹಿತಿ
ತುಮಕೂರು: ರಾಷ್ಟ್ರೀಯ ಪಲ್ಸ್​ ಪೋಲಿಯೋ ಲಸಿಕಾ ಕಾರ್ಯಕಮ ಡಿಸೆಂಬರ್​ 21ರಿಂದ ಪ್ರಾರಂಭವಾಗಲಿದ್ದು, ಲಸಿಕಾ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಚಾಲನಾ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 5 ವರ್ಷದೊಳಗಿನ 1,86,969 ಮಕ್ಕಳಿದ್ದು, 1211 ಲಸಿಕಾ ಕೇಂದ್ರಗಳಲ್ಲಿ ಡಿಸೆಂಬರ್​ 21ರಂದು ರಾಷ್ಟ್ರೀಯ ಪಲ್ಸ್​ ಪೋಲಿಯೋ ಅಭಿಯಾನ ಪ್ರಾರಂಭವಾಗಲಿದೆ. ಡಿಸೆಂಬರ್​ 22 ಮತ್ತು 23ರಂದು ಗ್ರಾಮೀಣ ಪ್ರದೇಶ, ಡಿಸೆಂಬರ್​ 22, 23 ಹಾಗೂ 24ರಂದು ನಗರ ಪ್ರದೇಶದಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪಲ್ಸ್​ ಪೋಲಿಯೋ ಲಸಿಕೆ ನೀಡಲಾಗುವುದು ಎಂದರು.
ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಜೆಲ್ಲೆಯ ಪ್ರಮುಖ ಸ್ಥಳಗಳಾದ ದೇವಸ್ಥಾನ, ಪ್ರವಾಸಿ ತಾಣ, ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ, ಅಮಾನಿಕೆರೆ, ಟೋಲ್​ ಪ್ಲಾಜಾ ಹಾಗೂ ಜಿಲ್ಲೆಗೆ ಪ್ರವೇಶಿಸುವ ಜಾಗದಲ್ಲಿ ಪಲ್ಸ್​ ಪೋಲಿಯೋ ಕೇಂದ್ರಗಳನ್ನು ಕಡ್ಡಾಯವಾಗಿ ತೆರೆಯಬೇಕು, ಲಸಿಕಾ ವ್ಯಾಪ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಪಲ್ಸ್​ ಪೋಲಿಯೋ ಲಸಿಕಾ ಕೇಂದ್ರ ತೆರೆಯಬೇಕು ಎಂದರು.
ಪೋಲಿಯೋ ಮುಕ್ತ ಸಮಾಜ ನಿಮಾರ್ಣಕ್ಕೆ ಪಲ್ಸ್​ ಪೋಲಿಯೋ ಲಸಿಕಾ ಕಾರ್ಯಕ್ರಮ ಅತ್ಯಂತ ಮಹತ್ವದಾಗಿದ್ದು, ಪಲ್ಸ್​ ಪೋಲಿಯೋ ಲಸಿಕೆ ವಿತರಣೆ ಹಾಗೂ ಇದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವಲ್ಲಿ ಯಾವುದೇ ರೀತಿ ರ್ನಿಲಕ್ಷ$್ಯವಹಿಸದೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಅಲೆಮಾರಿ ಮತ್ತು ಕೈಗಾರಿಕಾ ವಲಯದ ಪ್ರದೇಶಗಳಿಗೆ ಹೆಚ್ಚು ಗಮನಹರಿಸಿ ಲಸಿಕೆ ತಲುಪಿಸುವ ಕಾರ್ಯ ವ್ಯವಸ್ಥಿತವಾಗಿ ಮಾಡಬೇಕು. ಲಸಿಕೆ ಹಾಕುವ ಕಾರ್ಯದಲ್ಲಿ ತೊಡಗುವ ಎಲ್ಲ ಸಿಬ್ಬಂದಿಗೆ ಕಡ್ಡಾಯವಾಗಿ ತರಬೇತಿ ನೀಡಬೇಕು. ಕಾರ್ಯಕ್ರಮದ ಯಶಸ್ಸಿಗೆ ಲಸಿಕೆಯ ಗುಣಮಟ್ಟ ಅತ್ಯಂತ ಮುಖ್ಯ. ಆದ್ದರಿಂದ, ಪಲ್ಸ್​ ಪೋಲಿಯೋ ಲಸಿಕೆಯ ಗುಣಮಟ್ಟ ಕಾಪಾಡುವ ಉದ್ದೇಶದಿಂದ, ಡಿ.15 ರಿಂದ 24ರ ವರೆಗೆ ನಿರಂತರ ವಿದ್ಯುತ್​ ಸರಬರಾಜು ಒದಗಿಸಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಪಲ್ಸ್​ ಪೋಲಿಯೋ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸುವಲ್ಲಿ ಶಾಲಾ ಶಿಕ್ಷಣ ಇಲಾಖೆ ಹೆಚ್ಚು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಶಾಲಾ ಮಕ್ಕಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪ್ರತಿದಿನ ಶಾಲೆಯಲ್ಲಿ ಪ್ರಾರ್ಥನೆಯ ಸಂದರ್ಭದಲ್ಲಿ ಪಲ್ಸ್​ ಪೋಲಿಯೋ ಬಗ್ಗೆ ಮಕ್ಕಳಿಗೆ ತಪ್ಪದೇ ಮಾಹಿತಿ ನೀಡಬೇಕು. ಪಲ್ಸ್​ ಪೋಲಿಯೋ ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಬೇಕು ಮತ್ತು ಅನೇಕ ಲಸಿಕಾ ಕೇಂದ್ರಗಳನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ತೆರೆಯಬೇಕು. ಕಾರ್ಯಕ್ರಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಾಹಿತಿ, ಶಿಕ್ಷಣ ಮತ್ತು ಸಂವಹನ ಕರಪತ್ರಗಳು ಮತ್ತು ಬ್ಯಾನರ್​ಗಳನ್ನು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಬೇಕು ಎಂದರು.
ಸಭೆಯಲ್ಲಿ ಡಿಎಚ್​ಒ ಡಾ.ಚಂದ್ರಶೇಖರ್​, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಸಿ.ಆರ್​.ಮೋಹನ್​, ವಿಶ್ವ ಆರೋಗ್ಯ ಸಂಸ್ಥೆಯ ಎಸ್​ಎಂಒ ಡಾ.ಸುಧೀರ್​ ಮತ್ತಿತರರು ಇದ್ದರು.