ತುಮಕೂರಿನ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್​.ಹುಲಿನಾಯ್ಕರ್​ ನೀಟ್​ ಕುರಿತ ಜಾಗೃತಿ ಕಾರ್ಯಾಗಾರ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಎಂ.ಎಸ್​.ಪಾಟೀಲ್​, ಅಂಬಿಕಾ ಹುಲಿನಾಯ್ಕರ್​, ಡಾ.ಲಾವಣ್ಯ, ಡಾ.ನರೇಂದ್ರ ವಿಶ್ವನಾಥ್​, ಡಾ.ಎನ್​.ಚಂದ್ರಶೇಖರ್​, ಡಾ.ಕೆ.ಎಸ್​.ರಾಮಕೃಷ್ಣ, ಪ್ರೊ.ಸಿ.ಅಜಯ್​, ಡಾ.ಎಂ.ಸಿ.ಕೃಷ್ಣ, ಡಾ.ಸಿ.ಪಿ.ಚಂದ್ರಪ್ಪ ಇದ್ದರು. 
ತುಮಕೂರು

14 ರಂದು ನೀಟ್​ ಜಾಗೃತಿ ಕಾರ್ಯಾಗಾರ

ಪ್ರಮುಖ ಮುಖ್ಯಾಂಶಗಳು

  • ಶ್ರೀದೇವಿ ಶಿಕ್ಷಣ ಸಮೂಹ ಶಿಕ್ಷಣ ಸಂಸ್ಥೆ
  • ಪಿಯು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
  • ಡಾ.ಎಂ.ಆರ್​.ಹುಲಿನಾಯ್ಕರ್​ ಸುದ್ದಿಗೋಷ್ಠಿ
ತುಮಕೂರು: ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಪಿಯುಸಿ ವಿಭಾಗದ ಸಹಯೋಗದಲ್ಲಿ ನೀಟ್​ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಕುರಿತ ಜಾಗೃತಿ ಕಾರ್ಯಾಗಾರವನ್ನು ಪಿಯು ವಿದ್ಯಾರ್ಥಿಗಳಿಗಾಗಿ ಫೆ.14 ರಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಆರ್​.ಹುಲಿನಾಯ್ಕರ್​ ಹೇಳಿದರು.
ದ್ವೀತಿಯ ಪಿಯು ಓದುತ್ತಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮೇ 3 ರಂದು ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿ (ಎನ್​ಟಿಎ)ಯಿಂದ ನೀಟ್​ ಪರೀಕ್ಷೆ ಆಯೋಜಿಸಿದ್ದು, ಪರೀಕ್ಷೆ ತೆಗದುಕೊಳ್ಳುವ ವಿಧಾನ, ಪರೀಕ್ಷೆ ತಯಾರಿ, ಪ್ರಶ್ನೆ ಪತ್ರಿಕೆಗಳ ಮಾದರಿ, ಉತ್ತನ ನೀಡುವ ವಿಧಾನ ಸೇರಿದಂತೆ ನೀಟ್​ಗೆ ಸಂಬಂಧಿಸಿದ ಸಮಗ್ರ ವಿಚಾರಗಳ ಕುರಿತು ನುರಿತ ತಜ್ಞರಿಂದ ವಿಶೇಷ ಬೋಧನೆ, ಸಂವಾದ ಹಾಗೂ ಮಾರ್ಗದರ್ಶನ ಕಾರ್ಯಾಗಾರ ನಡೆಯಲಿದೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನೀಟ್​ ಪರೀಕ್ಷೆ ತೆಗೆದುಕೊಳ್ಳುವುದು ಬಹುತೇಕ ಆನ್​ಲೈನ್​ ಪ್ರಕಿಯೆಯಾಗಿರುವ ಕಾರಣ, ಗ್ರಾಮೀಣ ವಿದ್ಯಾರ್ಥಿಗಳಿಗೆ ಬಹಳ ಕಷ್ಟ ಆಗುತ್ತಿದೆ. ಹಾಗಾಗಿ ಇದರ ಬಗ್ಗೆ ತಿಳುವಳಿಕೆ ನೀಡುವ ಸಲುವಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮಕ್ಕಳು ಯಾವ ಕೋರ್ಸು ಆಯ್ಕೆ ಮಾಡಿಕೊಳ್ಳಬೇಕು. ಜಾಗತಿಕ ಮಾರುಕಟ್ಟೆಯಲ್ಲಿ ಯಾವ ಕೋರ್ಸುಗಳಿಗೆ ಬೆಲೆ ಇದೆ ಎಂಬ ಮಾಹಿತಿಯ ಜತೆಗೆ ವೈದ್ಯಕಿಯ, ದಂತ ವೈದ್ಯಕಿಯ, ಆಯುಷ್​ ಜತೆಗೆ, ಹೊಸದಾಗಿ ಬ್ಯಾಚುಲರ್​ ಅಫ್​ ಪಿಜಿಯೋಥೆರಪಿ, ಬ್ಯಾಚುಲರ್​ ಅಫ್​ ಅಕ್ಯುಪೇಷನ್​ ಥೆರಪಿ ಎಂಬ ಎರಡು ಹೊಸ ವಿಷಯಗಳು ಸೇರ್ಪಡೆಗೊಂಡಿವೆ ಎಂದರು.
ನೀಟ್​ ಜಾಗೃತಿ ಕಾರ್ಯಾಗಾರದಲ್ಲಿ ಸುಮಾರು 1500 ರಿಂದ 1800 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ಪಿಯು ಡಿಡಿಪಿಐ ಮೂಲಕ ಜಿಲ್ಲೆಯ ಎಲ್ಲಾ ಪಿಯು ಕಾಲೇಜುಗಳಿಗೆ ಮಾಹಿತಿ ನೀಡಲಾಗಿದೆ.2000 ವಿದ್ಯಾರ್ಥಿ ಗಳಿಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಶ್ರೀದೇವಿ ಶಿಕ್ಷಣ ಸಂಸ್ಥೆಯಿಂದ ಹೆಲ್ಪ್​ ಲೈನ್​ ತೆರೆದು, ಅವಶ್ಯ ಇರುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವುದರಿಂದ ಹಿಡಿದು, ಕೋರ್ಸುಗಳ ಆಯ್ಕೆ ಸೇರಿದಂತೆ ಎಲ್ಲಾ ರೀತಿಯ ಮಾಹಿತಿಯನ್ನು ನೀಡಲಾಗುವುದು ಎಂದು ಡಾ.ಹುಲಿನಾಯ್ಕರ್​ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್​.ಪಾಟೀಲ್​, ಶ್ರೀದೇವಿ ಚಾರಿಟಬಲ್​ ಟ್ರಸ್ಟ್​ನ ಟ್ರಸ್ಟಿಯಾದ ಅಂಬಿಕಾ ಹುಲಿನಾಯ್ಕರ್​, ಡಾ.ಲಾವಣ್ಯ, ಶ್ರೀದೇವಿ ಇಂಜಿನಿಯರಿಂಗ್​ ಕಾಲೇಜಿನ ಪ್ರಾಚಾರ್ಯ ಡಾ.ನರೇಂದ್ರ ವಿಶ್ವನಾಥ್​ ಮತ್ತಿತರರು ಉಪಸ್ಥಿತರಿದ್ದರು.
ನೀಟ್​ ಮೂಲಕ ಶ್ರೀದೇವಿ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯಕ್ಕೆ ಸೇರ್ಪಡೆಗೊಳ್ಳುವ ಒಬಿಸಿ ಕ್ಯಾಟಗೆರಿಯ ವಿದ್ಯಾರ್ಥಿಗಳಿಗೆ ಕನಕ ಮತ್ತು ಅಹಲ್ಯಾಬಾಯಿ ಸ್ಕಾಲರ್​ಶಿಪ್​ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು.11 ಇಂಜಿನಿಯರಿಂಗ್​ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗೆ ಮುಂದಿನ 4ವರ್ಷಗಳ ಕಾಲ ಉಚಿತ ಶಿಕ್ಷಣ ನೀಡಲಾಗುವುದು. ಪ್ರತಿ ವರ್ಷ ಕನಕ ಮತ್ತು ಅಹಲ್ಯಾಬಾಯಿ ವಿದ್ಯಾರ್ಥಿ ವೇತನಕ್ಕೆ 2 ಕೋಟಿ ರೂ., ವ್ಯಯಿಸಲಾಗುವುದು.
ಡಾ.ಎಂ.ಆರ್​.ಹುಲಿನಾಯ್ಕರ್​
ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ