ತುಮಕೂರು ಜಿಲ್ಲಾಧಿಕಾರಿ ಕಚೇರಿ
- ಮತದಾರರ ಪಟ್ಟಿ ವಿಶೆಷ ಸಮಗ್ರ ಪರಿಷ್ಕರಣೆ
- 30ರಿಂದ ಜುಲೈ 29ರ ವರೆಗೆ ಮನೆ ಮನೆ ಭೇಟಿ
- ಅಕ್ಟೋಬರ್ 7 ಅಂತಿಮ ಪಟ್ಟಿ ಪ್ರಕಟ
ತುಮಕೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026 ಜಿಲ್ಲೆಯಲ್ಲಿಯೂ ಜೂನ್ 30ರಿಂದ ಆರಂಭವಾಗಲಿದ್ದು ಅರ್ಹ ಮತದಾರರು ತಪ್ಪದೆ ನಮೂನೆ ಭರ್ತಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ಅವಧಿಯೊಳಗೆ ಸಲ್ಲಿಸಬೇಕಿದೆ. ಮತಗಟ್ಟೆ ಅಧಿಕಾರಿಗಳು ನೀಡುವ ಗಣತಿ ನಮೂನೆ ಭರ್ತಿ ಮಾಡಿ ಸಲ್ಲಿಸಿದಲ್ಲಿ ಮಾತ್ರ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಹೆಸರು ಇರಲಿದೆ.
ಜೂನ್ 20ರಿಂದ 29ರವರೆಗೆ ತರಬೇತಿ, ನಮೂನೆಗಳ ಮುದ್ರಣ ಇತ್ಯಾದಿ ತಯಾರಿ ಮಾಡಿಕೊಂಡು ಜೂನ್ 30ರಿಂದ ಜುಲೈ 29ರ ವರೆಗೆ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯ ಮಾಹಿತಿಯ ಗಣತಿ ನಮೂನೆ ನೀಡಲಿದ್ದಾರೆ.
2025ರ ಮತದಾರರ ಪಟ್ಟಿಯಲ್ಲಿರುವಂತೆ ಸಂಬಂಧಿಸಿದ ಮಾಹಿತಿ ಈಗಾಗಲೇ ಮುದ್ರಣವಾಗಿರುತ್ತದೆ. ಉಳಿದ ಮಾಹಿತಿಯನ್ನು ನಿಗದಿತ ಅವಧಿಯಲ್ಲಿ ಆ ಮನೆಯ ಮತದಾರರು ತುಂಬಿ ರ್ನಿದಿಷ್ಟ ದಾಖಲೆಯೊಂದಿಗೆ ಮರಳಿ ಮತಗಟ್ಟೆ ಅಧಿಕಾರಿಗೆ ನೀಡಬೇಕು. ಒಂದೊಮ್ಮೆ ಅದನ್ನು ಸಲ್ಲಿಸದಿದ್ದಲ್ಲಿ ಅವರ ಹೆಸರು ಅಂತಿಮ ಮತದಾರರ ಪಟ್ಟಿಯಿಂದ ಹೊರಗುಳಿಯಲಿದೆ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ ಒಂದು ನಿರಂತರ ಪ್ರಕ್ರಿಯೆ, ಅಲ್ಲಿ ಕೇವಲ ಮತದಾರರ ಹೆಸರು ಸೇರ್ಪಡೆ, ತೆಗೆಯುವುದು ಹಾಗೂ ವಿಳಾಸ ಬದಲಾವಣೆ ನಡೆಯುತ್ತದೆ. ಯಾವೊಬ್ಬ ಮತದಾರರೂ ಮತದಾನದಿಂದ ಹೊರಗುಳಿಯಬಾರದು ಹಾಗೂ ಪ್ರತಿಯೊಬ್ಬರಿಗೂ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಯಲ್ಲಿ ಭಾಗವಹಿಸುವ ಅವಕಾಶ ದೊರಕಿಸುವಂತೆ ಮಾಡುವ ಉದ್ದೇಶದಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಫ್ಕಿರಣೆ ಮಾಡಲಾಗುತ್ತಿದೆ ಎಂದರು.
ಈ ಪ್ರಕ್ರಿಯೆ ದೇಶದಲ್ಲಿ ಇದೇ ಮೊದಲಲ್ಲ ಹಾಗೂ ಕರ್ನಾಟಕದಲ್ಲಿ ಕೂಡ 2002ರಲ್ಲಿ ಸಮಗ್ರ ಪರಿಷ್ಕರಣೆ ಆಗಿದ್ದು ಈಗ 2026ರಲ್ಲಿ ಮಾಡಲಾಗುತ್ತಿದೆ. ಇದು ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ರಾಜ್ಯದ ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳಿಗೆ ತರಬೇತಿ ನೀಡಿದ್ದು, ಅದರಂತೆ ತುಮಕೂರು ಜಿಲ್ಲೆಯಲ್ಲಿ ಕೂಡ ಈ ಪ್ರಕ್ರಿಯೆ ನಡೆಯಲಿದೆ.
ಅಕ್ಟೋಬರ್ 1ರಂದು ಅರ್ಹತಾ ದಿನಾಂಕ ಪ್ರಕಟಿಸಲಿದ್ದು, ಜೂನ್ 30ರಿಂದ ಜುಲೈ 29ರವರೆಗೆ ಮತಗಟ್ಟೆ ಅಧಿಕಾರಿಗಳು ಮನೆ ಮನೆ ಭೇಟಿ, ಜುಲೈ 29ರಂದು ಮತಗಟ್ಟೆಗಳ ಕ್ರಮಬದ್ಧಗೊಳಿಸುವಿಕೆ, ಆಗಸ್ಟ್ 5 ಮತದಾರರ ಪಟ್ಟಿ ಕರಡು ಪ್ರಕಟ, ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಆಕ್ಷೇಪಣೆಗಳಿಗೆ ಅವಕಾಶ ಹಾಗೂ ಆಗಸ್ಟ್ 5ರಿಂದ ಅಕ್ಟೋಬರ್ 3ರವರೆಗೆ ಆಕ್ಷೇಪಣೆಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಹಾಗೂ ಅಂತಿಮವಾಗಿ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು.
ಹೊಸ ಮತದಾರರ ನೋಂದಣಿ ಅಥವಾ ವರ್ಗಾವಣೆ ಸಂದರ್ಭದಲ್ಲಿ ನಮೂನೆ 6/8 ತುಂಬುವುದಾದಲ್ಲಿ ರ್ನಿದಿಷ್ಟಪಡಿಸಿರುವ 12 ದಾಖಲೆಗಳಲ್ಲಿ ಒಂದನ್ನು ಘೋಷಣಾ ನಮೂನೆಯೊಂದಿಗೆ ಸ್ವಯಂ ದೃಢೀಕರಿಸಿ ಸಲ್ಲಿಸುವುದು ಕಡ್ಡಾಯವಾಗಿದೆ.
ಜಿಲ್ಲೆಯಲ್ಲಿ 2356 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಎಲ್ಲೆಡೆ ಮತಗಟ್ಟೆ ಅಧಿಕಾರಿಗಳು ಇರಲಿದ್ದಾರೆ. 2025ರ ಮತದಾರರ ಪಟ್ಟಿಯಂತೆ ಜಿಲ್ಲೆಯ ಒಟ್ಟು 11 ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷ ಹಾಗೂ ಮಹಿಳೆಯರು ಸೇರಿ 22,98,096 ಮತದಾರರಿದ್ದು, ಈ ಎಲ್ಲ ಮತದಾರರ ಗಣತಿಯೂ ಸಮಗ್ರ ಪರಿಫ್ಕಿರಣೆಯಲ್ಲಿ ಆಗಲಿದೆ. ಈ ಅವಧಿಯಲ್ಲಿ ಮತದಾರರ ಪಟ್ಟಿಯಲ್ಲಿದ್ದು, ಮೃತಪಟ್ಟವರ ಹೆಸರು ಕೈಬಿಡುವ, 18 ತುಂಬಿರುವ ಹೊಸ ಮತದಾರರನ್ನು ಸೇರ್ಪಡೆಗೊಳಿಸುವ ಹಾಗೂ ಸ್ಥಳಾಂತರಗೊಂಡ ಮತದಾರರು ಸೇರಿದಂತೆ ಸಂಪೂರ್ಣ ಪಟ್ಟಿಯ ಸಮಗ್ರ ಪರಿಷ್ಕರಣೆ ಈ ಹಂತದಲ್ಲಿ ಆಗಲಿದೆ.