ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ನಾಡೋಜ ಪ್ರೊ. ಸಿ ಮಹದೇವಪ್ಪರ ನುಡಿ ನಮನ ಮತ್ತು ವಿಚಾರ ಸಂಕಿರಣದಲ್ಲಿ ಪ್ರೊ.ಜಿ.ರಾಮಕೃಷ್ಣ, ಟಿ.ಕೆ.ನಂಜುಂಡಪ್ಪ,ಕೆ.ಎಸ್​. ಸಿದ್ಧಲಿಂಗಪ್ಪ, ಡಾ.ಬಿ.ನಂಜುಂಡಸ್ವಾಮಿ, ಚನ್ನ ನಾಗರಾಜು, ಡಾ.ಡಿ. ಎನ್​.ಯೋಗೀಶ್ವರಪ್ಪ, ಸಿದ್ಧಗಂಗಯ್ಯ, ಸಿ.ಶಿವಕುಮಾರಸ್ವಾಮಿ ಮತ್ತಿತರರು ಇದ್ದರು.  
ತುಮಕೂರು

ಸಂಶೋಧನೆ ಬದುಕಿನ ಉಸಿರಾಗಿಸಿಕೊಂಡಿದ್ದ ಪ್ರೊ.ಸಿ.ಮಹದೇವಪ್ಪ

ಪ್ರಮುಖ ಮುಖ್ಯಾಂಶಗಳು

  • ತುಮಕೂರು ಕಸಾಪ
  • ನಾಡೋಜ ಪ್ರೊ.ಸಿ.ಮಹದೇವಪ್ಪರ ನುಡಿನಮನ
  • ಚಿಂತಕ ಪ್ರೊ.ಜೆ.ರಾಮಕೃಷ್ಣ

ತುಮಕೂರು: ಸಂಶೋದನೆಯನ್ನೇ ತಮ್ಮ ಬದುಕಿನ ಉಸಿರನ್ನಾಗಿಸಿಕೊಂಡಿದ್ದ ಪ್ರೊ.ಸಿ.ಮಹದೇವಪ್ಪ ಅವರು ಸಂಶೋಧನೆ ಕೇವಲ ಮಾಹಿತಿಗಳ ಸಂಗ್ರಹವಲ್ಲ, ಅದರ ಹಿಂದಿರುವ ಸತ್ಯವನ್ನು ಅರಿಯಬೇಕೆಂದು ಪ್ರತಿಪಾದಿಸಿದ್ದರು ಎಂದು ಚಿಂತಕ ನಾಡೋಜ ಪ್ರೊ. ಜೆ.ರಾಮಕೃಷ್ಣ ಹೇಳಿದರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಶತಾಯುಷಿ, ನಾಡೋಜ ಪ್ರೊ.ಸಿ.ಮಹದೇವಪ್ಪರ "ನುಡಿನಮನ ಮತ್ತು ವಿಚಾರ ಸಂಕಿರಣ'ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರೊ. ಸಿ ಮಹದೇವಪ್ಪರ ಜೀವನವೇ ಒಂದು ನಿರಂತರ ಸಾಧನೆಯ ಕಥೆ. ಸಾಹಿತ್ಯದ ಮೇಲೆ ಅವರಿಗಿದ್ದ ಪ್ರೀತಿ ಕೇವಲ ಆಸಕ್ತಿ ಮಟ್ಟದಲ್ಲೇ ನಿಂತಿರಲಿಲ್ಲ, ಅದು ತಪಸ್ಸಿನ ರೂಪ ಪಡೆದಿತ್ತು. ಅನೇಕ ಅಮೂಲ್ಯ ಪಾಂಡಿತ್ಯ ಗ್ರಂಥಗಳನ್ನು ಶೋಧಿಸಿ ಸಮಗ್ರವಾಗಿ ಸಂಪಾದನೆ ಮತ್ತು ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದರು.
104 ವರ್ಷಗಳ ಕಾಲ ಬದುಕಿದ್ದ ಮಹದೇವಪ್ಪರ ಜೀವನೋತ್ಸಾಹ ನಿಜಕ್ಕೂ ಅಚ್ಚರಿ ಎನಿಸಿತ್ತು. ವಯಸ್ಸು ದೇಹಕ್ಕೆ ಬಂದರೂ ಮನಸ್ಸಿಗೆ ಬರಲಾರದು ಎಂಬುದಕ್ಕೆ ಅವರು ಸಾಕ್ಷಿ. ಸಾಹಿತ್ಯ ಕ್ಷೇತ್ರದ ಭಿನ್ನರೆಂದು ಗುರುತಿಸಿಕೊಂಡಿದ್ದೆ ಮಹದೇವಪ್ಪಗೆ ಅವರ ಕೊನೆಯ ಕಾಲದಲ್ಲಿ ನಾಡೋಜ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಗೌರವ ಅವರಿಗೆ ನೀಡಿದ ವ್ಯಕ್ತಿ ಗೌರವ ವಾಗಿರದೆ ಅದು ಸಂಶೋಧನಾ ಪರಂಪರೆಗೆ ನೀಡಿದ ಗೌರವವೆಂದು ಹೇಳಬಹುದು ಎಂದು ತಿಳಿಸಿದರು.
ಪ್ರೊ.ಸಿ.ಮಹದೇವಪ್ಪ ಅವರು ತುಮಕೂರು ನಗರದಲ್ಲಿ ಇಂಟರ್​ ಮೀಡಿಯಟ್​ ಕಾಲೇಜು ಇದ್ದಾಗ ಕನ್ನಡ ಪ್ರಾಧ್ಯಾಪಕರಾಗಿದುದ್ದೇ ಅಲ್ಲದೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಅಪಾರ ಜನಮನ್ನಣೆ ಗಳಿಸಿಕೊಂಡಿದ್ದರು. ವಿದ್ಯಾರ್ಥಿ ಹೋರಾಟಗಳನ್ನು ಅತ್ಯಂತ ತಾಳ್ಮೆಯಿಂದ ಆಲಿಸಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದ ಆಡಳಿತಾತ್ಮಕ ಗುಣ ಅವರಲ್ಲಿತ್ತು ಎಂದು ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಸ್ಮರಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ ಮಾತನಾಡಿ, ಶೈಕ್ಷಣಿಕ ಕ್ಷೇತ್ರದ ಹೊರತಾಗಿಯೂ ಪ್ರೊ.ಸಿ.ಮಹದೇವಪ್ಪ ಮೈಸೂರು ವಿಶ್ವವಿದ್ಯಾಲಯದ ಪ್ರಜಾರೋಪನ್ಯಾಸಕರಾಗಿ ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದರು. ವಿವಿಧ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ, ಭಾಷಾಂತರ ಯೋಜನಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ ಮಹದೇವಯ್ಯ ಅವರು ಸಂಪಾದಿಸಿ ಪ್ರಕಟಿಸಿದ ಭಾವಚಿಂತಾ ರತ್ನ ಹಲವು ವರ್ಷಗಳ ಕಾಲ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು ಎಂಬುದನ್ನು ಸ್ಮರಿಸಿಕೊಂಡರು.
ಸಂಶೋಧಕ ಡಾ ಡಿ ಎನ್​ ಯೋಗೀಶ್ವರಪ್ಪ ಮಾತನಾಡಿ, ಪ್ರೊ. ಸಿ ಮಹದೇವಪ್ಪ ಅವರು ಎಲೆ ಮರೆಯ ಕಾಯಿಯಂತಿದ್ದ ಸಾಹಿತಿ. ಅವರೆಂದಿಗೂ ಪ್ರಶಸ್ತಿ ಪುರಸ್ಕಾರಗಳ ಹಿಂದೆ ಬಿದ್ದವರಲ್ಲ. ಅವು ಅವರನ್ನೇ ಅರಸಿಕೊಂಡು ಬಂದವು. ರಾಜ್ಯ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ವಿವಿಯ ನಾಡೋಜ ಬಂದರೂ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುರಸ್ಕಾರ ಲಭಿಸಲೇ ಇಲ್ಲ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗುವ ಯೋಗ್ಯತೆ ಇದ್ದರೂ ಅವರನ್ನು ಪರಿಷತ್ತು ಪರಿಗಣಿಸಲೇ ಇಲ್ಲ ಎಂದು ಬೇಸರಿಸಿದರು.
ಇದೇ ಸಂದರ್ಭದಲ್ಲಿ ಡಾ ಬಿ ನಂಜುಂಡಸ್ವಾಮಿ, ಡಾ. ಸಿ ಶಿವಕುಮಾರ ಸ್ವಾಮಿ, ಡಾ ಹೊಲತಾಳು ಸಿದ್ಧಗಂಗಯ್ಯ ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿದರು. ಪ್ರೊ. ಸಿ ಮಹದೇವಪ್ಪರ ಹಿರಿಯ ಪುತ್ರ ಚನ್ನನಾಗರಾಜು ಉಪಸ್ಥಿತರಿದ್ದರು.
ಕಸಾಪ ಕಾರ್ಯದರ್ಶಿ ಕಂಟಲಗೆರೆ ಸಣ್ಣ ಹೊನ್ನಯ್ಯ ಪ್ರಾರ್ಥಿಸಿದರು. ಜಿ ಹೆಚ್​ ಮಹದೇವಪ್ಪ ಸ್ವಾಗತಿಸಿ, ಚಿಕ್ಕಬೆಳ್ಳಾವಿ ಶಿವಕುಮಾರ್​ ವಂದಿಸಿದರು.