ತುಮಕೂರಿನ ಎಸ್​ಐಟಿ ಕಾಲೇಜಿನ ಸ್ಥಳದಾನಿ ಎಂ.ವಿ.ಶಿವಪ್ಪರ 50ನೇ ಪುಣ್ಯಸ್ಮರಣೆ ಸಂದರ್ಭದಲ್ಲಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಶಿವಪ್ಪರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ರುದ್ರಾಣಿ ಚಂದ್ರಶೇಖರ್​, ಇಂದ್ರಾಣಿ ಹಿರಣ್ಣಯ್ಯ, ಡಾ.ಎಸ್​.ವಿ.ದಿನೇಶ್​, ಸಿ.ಸೋಮಶೇಖರ್​ ಮತ್ತಿತರರು ಇದ್ದರು.  
ತುಮಕೂರು

ಸೇವಾ ಕಾರ್ಯ ಸದಾ ಸ್ಮರಣೀಯ

ಪ್ರಮುಖ ಮುಖ್ಯಾಂಶಗಳು

  • ಎಸ್​ಐಟಿ ಸ್ಥಳದಾನಿ ಎಂ.ವಿ.ಶಿವಪ್ಪ ಪುಣ್ಯ ಸ್ಮರಣೆ
  • ಒಳ್ಳೆಯ ಕೆಲಸ ಶಾಶ್ವತ
  • ಸಿದ್ದಗಂಗಾ ಶ್ರೀಗಳ ಬಣ್ಣನೆ
ತುಮಕೂರು: ದೇಶದಲ್ಲೇ ಪ್ರತಿಷ್ಠಿತ ಇಂಜಿನಿಯರಿಂಗ್​ ಕಾಲೇಜು ಎಂಬ ಹೆಗ್ಗುರುತುಗಳಿಸಿರುವ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ (ಎಸ್​ಐಟಿ)ದ ಸ್ಥಳದಾನಿ ಎಂ.ಎ. ಶಿವಪ್ಪ ಅವರ ಕೊಡುಗೆ ಅನನ್ಯ. ಶಿವಪ್ಪ ಇಹಲೋಕ ತ್ಯಜಿಸಿ 50 ವರ್ಷವಾದರೂ ಅವರ ಸೇವಾ ಕಾರ್ಯ ಇನ್ನೂ ಜೀವಂತವಾಗಿದೆ ಎಂದು ಸಿದ್ದಗಂಗಾಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಬಣ್ಣಿಸಿದರು.
ಎಸ್​ಐಟಿ ಜಾಗ ದಾನ ಮಾಡಿದ ಶಿಕ್ಷಣಪ್ರೇಮಿ ಎಂ.ಎ. ಶಿವಪ್ಪ ಅವರ 50ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಶನಿವಾರ ಕಾಲೇಜು ಆವರಣದಲ್ಲಿರುವ ಶಿವಪ್ಪ ಅವರ ಸಮಾಧಿಗೆ ಪೂಜೆ ಸಲ್ಲಿಸಿ, ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಸಲ್ಲಿಸಿದ ಸಿದ್ದಲಿಂಗ ಶ್ರೀಗಳು, ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಪರಮಭಕ್ತರಾದ ಶಿವಪ್ಪ ಅವರ ಸಮಾಧಿ ಹಾಗೂ ಪುತ್ಥಳಿ ಎಸ್​ಐಟಿಯ ಆವರಣದಲ್ಲಿ ಅವರ ಸೇವಾಕಾರ್ಯದ ಪ್ರತಿರೂಪವಾಗಿ ಶಾಶ್ವತವಾಗಿದೆ. ಇಂದಿಗೂ ಸಹ ಶಿವಪ್ಪರ ದಾನದ ಪರಂಪರೆಯನ್ನು ಅವರ ಕುಟುಂಬಸ್ಥರು ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದು ಶ್ಲಾಘಿಸಿದರು.
ಹುಟ್ಟು ಸಾವು ಪ್ರಕೃತಿಯಲ್ಲಿ ಸಹಜ. ಬದುಕಿರುವ ಅವಧಿಯಲ್ಲಿ ಮಾಡುವ ಒಳ್ಳೆಯ ಕೆಲಸ ಶಾಶ್ವತ. ಶಿವಪ್ಪ ಅವರು ಈ ಶಾಶ್ವತ ಕಾರ್ಯ ಮಾಡುವ ವರ್ಗಕ್ಕೆ ಸೇರಿದವರು. ಪೂಜ್ಯ ಡಾ. ಶಿವಕುಮಾರಸ್ವಾಮೀಜಿ ಅವರ ಗ್ರಾಮಾಂತರ ಮಕ್ಕಳಿಗೂ ತಾಂತ್ರಿಕ ಶಿಕ್ಷಣ ದೊರೆಯುವ ಆಶಯಕ್ಕೆ ನೆರವಾದರು ಎಂದು ಸ್ಮರಿಸಿದರು.
ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್​ ಮಾತನಾಡಿ, ನಾನು ಇದೇ ಎಸ್​ಐಟಿ ಕಾಲೇಜಿನ ವಿದ್ಯಾರ್ಥಿ. ನನ್ನಂತಹ ಲಕ್ಷಾಂತರ ಮಂದಿಯನ್ನು ಈ ಕಾಲೇಜು ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿ ಕೊಳ್ಳಲು ಅನುವು ಮಾಡಿಕೊಟ್ಟಿದೆ. ಅದರ ಹಿಂದಿನ ಶಕ್ತಿಗಳಾದ ಡಾ. ಶಿವಕುಮಾರ ಸ್ವಾಮೀಜಿ ಹಾಗೂ ಎಂ.ವಿ.ಶಿವಪ್ಪ ಅವರು ಪ್ರಾತ@ ಸ್ಮರಣೀಯರು ಎಂದರು.
1900 ರಿಂದ 1976ರವರೆಗೆ ಸಾರ್ಥಕ ಜೀವನ ನಡೆಸಿದ ಶಿವಪ್ಪ ಅವರು ಮರದ ಉದ್ಯಮದ ಮೂಲಕ ಬಂದ ಆದಾಯವನ್ನು ಸಮಾಜಸೇವೆಗೆ ಮುಡಿಪಾಗಿಟ್ಟಿದ್ದರು. ಸಿದ್ದರಾಮಣ್ಣ ಚಾರಿಟಬಲ್​ ಟ್ರಸ್ಟ್​ನ ಸಿದ್ದರಾಮಣ್ಣ, ಡಿ.ಕೆ. ಪಾರ್ಶ್ವನಾಥ, ಬಿ.ಸಿ. ನಂಜುಂಡಯ್ಯ, ದಿ. ಕೆಂಪಹೊನ್ನಯ್ಯ ಅವರಂತಹ ಮೇರು ವ್ಯಕ್ತಿತ್ವದ ಸಾಮಾಜಿಕ ಕಳಕಳಿಯರ ಸಹಪಾಠಿಗಳಾಗಿದ್ದರು ಎಂದು ಸ್ಮರಿಸಿದರು.
ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ, ಕಾರ್ಯನಿರ್ವಹಣಾ ಅಧಿಕಾರಿ ಜಯವಿಭವ ಸ್ವಾಮಿ, ಎಸ್​ಐಟಿ ಪ್ರಾಚಾರ್ಯ ಡಾ. ಎಸ್​.ವಿ.ದಿನೇಶ್​, ಪ್ರಾಧ್ಯಾಪಕ ಸಿ.ಸೋಮಶೇಖರ್​, ಎಂ.ವಿ.ಶಿವಪ್ಪ ಅವರ ಕುಟುಂಬದ ರುದ್ರಾಣಿ ಚಂದ್ರಶೇಖರ್​, ಇಂದ್ರಾಣಿ ಹಿರಣ್ಣಯ್ಯ ಹಾಗೂ ಇತರರು, ಕಾಲೇಜು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಇದೇ ವೇಳೆ ಸುವರ್ಣ ಸ್ಮರಣೆ ಪ್ರಯುಕ್ತ ಮಠದ ವಿದ್ಯಾರ್ಥಿಗಳಿಗೆ ಒಂದು ದಿನ ಸಿಹಿಯೂಟ ದಾಸೋಹದ ಖರ್ಚಿ 2.5 ಲಕ್ಷ ರೂ., ದೇಣಿಗೆಯನ್ನು ಅಮೆರಿಕಾದಲ್ಲಿ ನೆಲೆಸಿರುವ ಶಿವಪ್ಪ ಅವರ ಕುಟುಂಬದ ಮಮತಾ ದಿಲೀಪ್​ ಕುಮಾರ್​ ನೀಡಿದ್ದು ಶ್ರೀಗಳು ಶ್ಲಾಘಿಸಿದರು.