ನಿಗೂಢ ಸಾವನ್ನಪ್ಪಿರುವ ನವಿಲು
- ಎಸಿಎಫ್ ನೇತೃತ್ವದ ತನಿಖಾ ತಂಡ ರಚನೆ
- ತುಮಕೂರು ತಾಲೂಕಿನಲ್ಲಿ ಪ್ರಕರಣ
- ಸ್ಥಳಕ್ಕೆ ಡಿಸಿಎಫ್, ಎಸಿಎಫ್ ಭೇಟಿ
ತುಮಕೂರು: ತಾಲೂಕಿನ ವಿವಿಧೆಡೆ 35ಕ್ಕು ಹೆಚ್ಚು ನವಿಲುಗಳು ಕಳೆದೊಂದು ವಾರದಲ್ಲಿ ನಿಗೂಢ ಸಾವನ್ನಪ್ಪಿವೆ. ಹೀಟ್ ಸ್ಟ್ರೊಕ್ ಅಥವಾ ಹಕ್ಕಿಜ್ವರದಿಂದ ಈ ನವಿಲುಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿವೆ.
ಮೃತಪಟ್ಟಿರುವ ನವಿಲುಗಳ ಅಂಗಾಂಗ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು ವರದಿ ಬಂದ ಬಳಿಕವಷ್ಟೇ ನವಿಲುಗಳ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಎಸಿಎಫ್ ಪವಿತ್ರಾ ತಿಳಿಸಿದರು.
35ಕ್ಕು ಹೆಚ್ಚು ನವಿಲು ಸಾವು: ತಾಲೂಕಿನ ಊರ್ಡಿಗೆರೆ ಹೋಬಳಿ ಮಾಚೇನಹಳ್ಳಿ, ಬೊಮ್ಮನಹಳ್ಳಿ, ಕೋಳ್ಳಿಹಳ್ಳಿ ಹಾಗೂ ಗೂಳೂರು ಹೋಬಳಿ ಬೈರಸಂದ್ರ, ಹುಲ್ಲೇನಹಳ್ಳಿ ಸುತ್ತಮುತ್ತ ಕಳೆದ ಗುರುವಾರದಿಂದೀಚೆಗೆ 35ಕ್ಕು ಹೆಚ್ಚು ನವಿಲುಗಳು ನಿಗೂಢ ಸಾವನ್ನಪ್ಪಿವೆ. ನವಿಲುಗಳು ಸತ್ತುಬಿದ್ದಿರುವುದನ್ನು ಕಂಡು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಡಿಸಿಎಫ್ ಜಿ.ಆರ್.ಶಶಿಧರ್, ಎಸಿಎಫ್ ಪವಿತ್ರ, ಆರ್ ಎಫ್ ಒ ನಮಿತಾ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನವಿಲುಗಳ ನಿಗೂಢ ಸಾವಿನ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ.