ತುಮಕೂರು ನಗರದಲ್ಲಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿರುವ ಹಿನ್ನೆಲೆಯ ವಿವಿದ ಇಲಾಖೆಗಳ ಸಮನ್ವಯ ಸಭೆಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿದರು. ಬಿ.ಶುಭ, ಎನ್.ಆರ್.ಉಮೇಶ್ ಚಂದ್ರ ಇದ್ದರು.
- ಪಾಲಿಕೆಯಲ್ಲಿ ವಿವಿಧ ಇಲಾಖೆಗಳ ಸಮನ್ವಯ ಸಭೆ
- ಭೀಮಸಂದ್ರ ಸೇತುವೆ ಮೊದಲು ನಿರ್ಮಿಸಿ
- ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್
ತುಮಕೂರು: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ರಂಗಾಪುರದ ಮೇಲ್ಸೇತುವೆಯನ್ನು ಶೀಘ್ರವಾಗಿ ನಿಮಾರ್ಣ ಮಾಡುವ ಮೂಲಕ ಸಾರ್ವಜನಿಕ ಸಮಸ್ಯೆಯನ್ನು ಬಗೆಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಾಕೀತು ಮಾಡಿದರು.
ಮಹಾನಗರಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ನಗರದಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಇಲಾಖೆಗಳ ನಡುವೆ ಸಮನ್ವಯ ಸಭೆ ನಡೆಸಿ ಮಾತನಾಡಿದ ಅವರು, ಬೆಂಗಳೂರು&ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯು ನಗರದ ಹೊರವಲಯದಲ್ಲಿ ಹಾದುಹೋಗಿದ್ದು, ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕುಂಟುತ್ತಾ ಸಾಗಿರುವ ರಂಗಾಪುರ ಮೇಲ್ಸೇತುವೆ ಕಾಮಗಾರಿಗೆ ವೇಗ ನೀಡುವ ಮೂಲಕ ವಾರಾಂತ್ಯ, ಹಬ್ಬಹರಿದಿನಗಳ ಸಂದರ್ಭದಲ್ಲಿ ಉಂಟಾಗುವ ಸಂಚಾರ ದಟ್ಟಣೆ ಸಮಸ್ಯೆಗೆ ಇತಿಶ್ರೀ ಹಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಲಹೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬಟವಾಡಿಯಿಂದ ಮಲ್ಲಸಂದ್ರದವರೆಗೂ ವೈಟ್ ಟ್ಯಾಪಿಂಗ್ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು ಐದಾರು ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖವಾದ ರಸ್ತೆ ಇದಾಗಿದೆ. ಮೊದಲಿಗೆ ಭೀಮಸಂದ್ರದ ಬಳಿ ಸೇತುವೆಯನ್ನು ನಿಮಾರ್ಣ ಮಾಡಿ ನಂತರ ತುಮಕೂರು ಕಡೆಗೆ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡಲ್ಲಿ ಮಾತ್ರ ಸಂಚಾರದ ಸಮಸ್ಯೆಗಳನ್ನು ತಗ್ಗಿಸಬಹುದು. ಅಲ್ಲದೆ, ನೀರು, ಚರಂಡಿ, ಒಳಚರಂಡಿ ಪೈಪ್ಲೈನ್ಗಳು ಹಾದು ಹೋಗಿರುವ ಕಡೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ತಿಳಿಸಿದರು.
ಮಳೆಗಾಲದ ಸಮಯದಲ್ಲಿ ಕೆಳಸೇತುವೆಗಳಾದ ಅಂತರಸನಹಳ್ಳಿ (ಮಧುಗಿರಿ ರಸ್ತೆ), ದೇವರಾಯಪಟ್ಟಣದಿಂದ - ಭಾರತಿನಗರದ ಕೆಳಸೇತುವೆಗಳ ಸಮಸ್ಯೆಯನ್ನು ಬಗೆಹರಿಸಬೇಕು. ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕೆಲಸಗಳು ಮಾಡುವ ಸಂದರ್ಭದಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರ ಮಾಡುವ ಅವಶ್ಯಕತೆಯಿರುತ್ತದೆ. ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಅಭಿವೃದ್ಧಿಗೆ ಸಹಕರಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರು ನಗರದ ದಕ್ಷಿಣ ಭಾಗಕ್ಕೆ ನಿರಂತರವಾಗಿ ನೀರು ಸರಬರಾಜು ಮಾಡುವ ದೃಷ್ಟಿಯಿಂದ ವೀರಸಾಗರದ ಟೂಡಾ ಲೇಔಟ್ನಲ್ಲಿರುವ ಸರ್ಕಾರಿ ಜಾಗವನ್ನು ಮಹಾನಗರ ಪಾಲಿಕೆಗೆ ಶೀಘ್ರ ಹಸ್ತಾಂತರ ಮಾಡಲು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಕ್ರಮವಹಿಸಬೇಕು. ಶಿರಾಗೇಟ್ ವೃತ್ತದಿಂದ 150 ಅಡಿ ರಸ್ತೆಗೆ ಅಡ್ಡವಿರುವ ಅಂಗಡಿ ಮಳಿಗೆ, ಮನೆಗಳನ್ನು ಈಗಾಗಲೇ ಪಾಲಿಕೆ ವತಿಯಿಂದ ಗುರುತಿಸಲಾಗಿದ್ದು, ಭೂಸ್ವಾಧಿನಪಡಿಸಿಕೊಡಲು ಟೂಡಾದಲ್ಲಿ ನಿಧಿಯನ್ನು ಕಾಯ್ದಿರಿಸಲಾಗಿದೆ. ಈ ಸಂಬಂಧ ತುರ್ತಾಗಿ ಭೂಸ್ವಾಧಿನಪಡಿಸಿಕೊಡಲು ಟೂಡಾ ಆಯುಕ್ತರಿಗೆ ಸಲಹೆ ನೀಡಿದರು.
ಮೆಳೇಕೋಟೆ ರಸ್ತೆ ಅಗಲೀಕರಣ ಮಾಡುವ ಸಮಯದಲ್ಲಿ 50 ಕ್ಕೂ ಹೆಚ್ಚು ಸ್ವತ್ತುಗಳಲ್ಲಿ ರಸ್ತೆಯು ಹಾದು ಹೋಗಿದ್ದು, ಆದರೆ, ನಿವೇಶನದ ಅಳತೆಗಳಲ್ಲಿ ಇಂದಿಗೂ ಸಹ ಪೂರ್ಣ ಪ್ರಮಾಣದ ಅಳತೆ ಇದ್ದು, ಸ್ವತ್ತಿನ ಕಂದಾಯ ಹೆಚ್ಚಾಗಿ ಬರುತ್ತಿವೆ. ರಸ್ತೆ ಅಗಲೀಕರಣಕ್ಕೆ ಸೇರ್ಪಡೆಯಾಗಿರುವ ಸ್ವತ್ತುಗಳ ಅಳತೆಯನ್ನು ಕಳೆದು ಉಳಿಕೆ ಅಳತೆಯನ್ನು ತಿದ್ದುಪಡಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಜ್ಯೋತಿಗಣೇಶ್ ತಿಳಿಸಿದರು.
ಪಾಲಿಕೆ ಅಯುಕ್ತೆ ಬಿ.ಶುಭ, ಟೂಡಾ ಆಯುಕ್ತ ಎನ್.ಆರ್.ಉಮೇಶ್ ಚಂದ್ರ, ರಾಷ್ಟ್ರೀಯ ಹೆದ್ದಾರಿ ಸೇವಾ ಪ್ರಾಧಿಕಾರದ ಯೋಜನಾಧಿಕಾರಿ ಅನುಪ್ ಶರ್ಮ, ಪಾಲಿಕೆ ಉಪ-ಆಯುಕ್ತ ಮನುಕುಮಾರ್, ಅಧೀಕ್ಷಕ ಕಾರ್ಯಪಾಲಕ ಇಂಜಿನಿಯರ್ ಸಂದೀಪ್, ಕಾರ್ಯಪಾಲಕ ಇಂಜಿನಿಯರ್ ಸುರೇಶ್, ಪ್ರವಿಣ್, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಇಇ ಅನಿಲ್ಕುಮಾರ್, ಪಿಡಬ್ಲೂಡಿ ಎಇಇ ರವಿ, ಬೆಸ್ಕಾಂ ಎಇಇ ನಾಗರಾಜು, ಕೊಳಚೆ ನಿಮೂರ್ಲನ ಮಂಡಳಿ ಎಇಇ ಭಾನು ಮತ್ತಿತರರು ಉಪಸ್ಥಿತರಿದ್ದರು.
ಟ್ರಾಫಿಕ್ ಸಮಸ್ಯೆ ಡಿಸಿ ನೇತೃತ್ವದಲ್ಲಿ ಸಭೆ
ನಗರದ ಬಟವಾಡಿಯಿಂದ ಮಲ್ಲಸಂದ್ರದವರೆಗೆ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು, ಈಗಾಗಲೇ ಉಂಟಾಗಿರುವ ವಾಹನಗಳ ಸಂಚಾರದ ಸಮಸ್ಯೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಶೀಘ್ರವಾಗಿ ಸಭೆ ಕರೆಯುವಂತೆ ಪಾಲಿಕೆ ಆಯುಕ್ತರಿಗೆ ಜಿ.ಬಿ.ಜ್ಯೋತಿಗಣೇಶ್ ಸೂಚನೆ ನೀಡಿದರು.