ಗುಬ್ಬಿ ತಾಲೂಕಿನ ಕಂಚಿಗಾನಹಳ್ಳಿ ಬಳಿ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಜಲಸಂಪನ್ಮೂಲ ಸಚಿವ ಎನ್​.ಚಲುವರಾಯಸ್ವಾಮಿ ಪರಿಶೀಲಿಸಿದರು. ಎಸ್​.ಆರ್​.ಶ್ರೀನಿವಾಸ್​, ಬಿ.ಆರತಿ ಮತ್ತಿತರರು ಇದ್ದರು.  
ತುಮಕೂರು

ವರ್ಷಾಂತ್ಯದೊಳಗೆ ತುಮಕೂರಿಗೆ ಎತ್ತಿನಹೊಳೆ

ಪ್ರಮುಖ ಮುಖ್ಯಾಂಶಗಳು

  • ಜಲಸಂಪನ್ಮೂಲ ಸಚಿವ ಎನ್​.ಚಲುವರಾಯಸ್ವಾಮಿ
  • ಗುಬ್ಬಿ, ತಿಪಟೂರು ಎತ್ತಿನಹೊಳೆ ಕಾಮಗಾರಿ ಪರಿಶೀಲನೆ
  • ಕಾಮಗಾರಿ ಪ್ರಗತಿ ವಿಳಂಬ, ಅಧಿಕಾರಿಗಳೇ ಎಚ್ಚರ
ಗುಬ್ಬಿ/ತಿಪಟೂರು: ಬಯಲು ಸೀಮೆಯ ಮಹತ್ವಾಕಾಂಕ್ಷೆ ಎತ್ತಿನಹೊಳೆ ಯೋಜನೆ ಮೂಲಕ ನವೆಂಬರ್​ ಅಂತ್ಯದೊಳಗೆ ತುಮಕೂರು ಭಾಗಕ್ಕೆ ನೀರು ಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಜಲಸಂಪನ್ಮೂಲ ಸಚಿವ ಎನ್​.ಚಲುವರಾಯಸ್ವಾಮಿ ಹೇಳಿದರು.
ಜಿಲ್ಲೆಯ ಗುಬ್ಬಿ ತಾಲೂಕು ಕಂಚಿಗಾನಹಳ್ಳಿಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ "ಪ್ಯಾಕೇಜ್​ 11' ರ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಸಚಿವರು, ರಾಜ್ಯದ ಮಹತ್ವಾಕಾಂಕ್ಷಿ ಎತ್ತಿನಹೊಳೆ ನೀರಾವರಿ ಯೋಜನೆ ಮೂಲಕ ತುಮಕೂರಿಗೆ ನೀರು ಹರಿಸಲು ಸರ್ಕಾರ ಪಣತೊಟ್ಟಿದೆ. ಕಾಮಗಾರಿ ಸ್ಥಳದಲ್ಲಿ ಎದುರಾಗಿರುವ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸಲು ತ್ವರಿತ ಕ್ರಮವಹಿಸಲಾಗುವುದು ಎಂದರು.
ಕಂಚಿಗಾನಹಳ್ಳಿಯ ಅರಣ್ಯ ಇಲಾಖೆಗೆ ಸೇರಿದ 1.9 ಕಿ.ಮೀ., ಜಾಗವು ಯೋಜನೆಗೆ ಅಗತ್ಯವಿದ್ದು 2ನೇ ಹಂತದ ಅನುಮತಿಗೆ ಸಂಬಂಧಿಸಿದ ಕಡತಗಳು ಈಗಾಗಲೇ ದೆಹಲಿಗೆ ತಲುಪಿವೆ. ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಹಸಿರು ನ್ಯಾಯಾಧೀಕರಣದ ಮುಂದೆ ಅರ್ಜಿ ಸಲ್ಲಿಸಿದ್ದು, ಸತತ ಪ್ರಯತ್ನದ ಫಲವಾಗಿ ಇನ್ನೊಂದು ವಾರದಲ್ಲಿ ಕೇಂದ್ರದಿಂದ ಅಂತಿಮ ಒಪ್ಪಿಗೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅರಣ್ಯ ಪ್ರದೇಶದಲ್ಲಿ ಗುರುತ್ವಾಕರ್ಷಣಾ ಕಾಲುವೆ ನಿಮಾರ್ಣದಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಕಾಮಗಾರಿ ಸ್ಥಳದಲ್ಲಿ 28 ಮೀಟರ್​ ಆಳದ ಭೂಮಿಯನ್ನು ಅಗೆಯ(ಡೀಪ್​ ಕಟ್​)ಬೇಕಾಗಿದ್ದು, ಮಣ್ಣು ಕುಸಿಯದಂತೆ ಅತ್ಯಂತ ಎಚ್ಚರಿಕೆಯಿಂದ "ಕಟ್​ ಆ್ಯಂಡ್​ ಕವರ್​' ತಂತ್ರಜ್ಞಾನದ ಮೂಲಕ ಗುಣಮಟ್ಟದ ಕೆಲಸ ನಡೆಯಬೇಕು. ಮಣ್ಣನ್ನು ತಾತ್ಕಾಲಿಕವಾಗಿ ಹೊರಹಾಕಲು ಹೆಚ್ಚುವರಿಯಾಗಿ ನೀಡಿರುವ 10 ಎಕರೆ ಜಾಗದಲ್ಲೇ ಸಂಗ್ರಹಿಸಿ ತದನಂತರ ಅದೇ ಮಣ್ಣನ್ನು ಮರಳಿ ತುಂಬುವ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸಚಿವರು ತಾಕೀತು ಮಾಡಿದರು.
ಎರಡೂ ಕಡೆ ಕಾಲುವೆ ನಿಮಾರ್ಣ ಕಾರ್ಯ ಭರದಿಂದ ಸಾಗುತ್ತಿದ್ದು, ಅ.15ರೊಳಗಾಗಿ ತುಮಕೂರು ಭಾಗದ ಕಾಮಗಾರಿ ಸಂಪೂರ್ಣಗೊಳ್ಳಲಿದೆ. ನವೆಂಬರ್​ ಒಳಗೆ ಶೇ.100ರಷ್ಟು ನೀರು ಪೂರೈಸುವುದು ನಿಶ್ಚಿತ ಎಂದು ಭರವಸೆ ನೀಡಿದರು.
23 ಸಾವಿರ ಕೋಟಿಗೆ ಹೆಚ್ಚಳ: ಎತ್ತಿನಹೊಳೆ ಯೋಜನೆಯು ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲೇ ಪ್ರಾರಂಭಗೊಂಡ "ಕನಸಿನ ಯೋಜನೆ'. ಆರಂಭದಲ್ಲಿ 8ಸಾವಿರ ಕೋಟಿ ರೂಪಾಯಿಗಳಷ್ಟಿದ್ದ ಯೋಜನಾ ವೆಚ್ಚವು ಪ್ರಸ್ತುತ 23ಸಾವಿರ ಕೋಟಿ ರೂ.,ಗಳಿಗೆ ಏರಿಕೆಯಾಗಿದೆ. ರೈತರ ಹಿತದೃಷ್ಟಿಯಿಂದ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ. ಇದರ ಜೊತೆಗೆ, ಅನಿವಾರ್ಯ ಕಾರಣಗಳಿಂದ ವಿಳಂಬವಾಗಿದ್ದ "ಬಿಕ್ಕೆಗುಡ್ಡ ಯೋಜನೆ'ಯನ್ನೂ ಸಹ ಮುಂದಿನ 2 ತಿಂಗಳೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ರೈತರು ಯಾವುದೇ ಕಾರಣಕ್ಕೂ ಮೈಕ್ರೋ ಫೈನಾನ್ಸ್​(ಕಿರು ಸಾಲ) ಮೊರೆ ಹೋಗಬಾರದು. ಮೈಕ್ರೋ ಫೈನಾನ್ಸ್​ ಸಂಸ್ಥೆಗಳ ಕಿರುಕುಳದ ಬಗ್ಗೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ದೂರು ನೀಡುತ್ತಿದ್ದು, ಲಿಖಿತ ದೂರುಗಳಿಲ್ಲದೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಸರ್ಕಾರಕ್ಕೆ ಕಷ್ಟಕರವಾಗುತ್ತದೆ. ಹಾಗಾಗಿ ರೈತರು ಇಂತಹ ಸಾಲದ ಸುಳಿಗೆ ಸಿಲುಕದೆ ಎಚ್ಚರಿಕೆಯಿಂದ ಇರಬೇಕು ಎಂದರು.
ಈ ವೇಳೆ ಗುಬ್ಬಿ ಕ್ಷೇತ್ರದ ಶಾಸಕರು ಹಾಗೂ ಕೆಎಸ್​ಆರ್​ಟಿಸಿ ನಿಗಮದ ಅಧ್ಯಕ್ಷ ಎಸ್​.ಆರ್​. ಶ್ರೀನಿವಾಸ್​, ತಹಸೀಲ್ದಾರ್​ ಬಿ.ಆರತಿ, ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಲಿಂಕ್​ ಕೆನಾಲ್​ ಯಾರಿಗೂ ಅನ್ಯಾಯವಾಗದಂತೆ ಕ್ರಮ
"ತುಮಕೂರು ಮತ್ತು ರಾಮನಗರ ಎರಡೂ ಭಾಗದ ರೈತರು ನಮಗೆ ಸಮಾನರು. ಎಲ್ಲರೂ ನಮ್ಮವರೇ ಆಗಿರುವುದರಿಂದ, ಯಾರೊಬ್ಬರಿಗೂ ಅನ್ಯಾಯವಾಗದಂತೆ ಸಿಎಂ ಜತೆ ವಿಸ್ತತವಾಗಿ ಚರ್ಚಿಸಿ, ಎಲ್ಲರಿಗೂ ಒಳಿತಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಮಾವತಿ ಲಿಂಕ್​ ಎಕ್ಸ್​ಪ್ರೆಸ್​ ಕೆನಾಲ್​ ಕೈಬಿಡುವಂತೆ ರೈತರು ಕೊಟ್ಟ ಮನವಿಗೆ ಸಚಿವ ಚಲುವರಾಯಸ್ವಾಮಿ ತೀಕ್ಷ$$$$್ಣವಾಗಿ ಪ್ರತಿಕ್ರಿಯಿಸಿದರು.
"ಕಾಮಗಾರಿ ಪ್ರಗತಿ ವಿಳಂಬ, ಅಧಿಕಾರಿಗಳೇ ಎಚ್ಚರ'
ತಿಪಟೂರು ಸಮೀಪದ ಚೌಡ್ಲಪುರದ ಎತ್ತಿನಹೊಳೆ ಕಾಮಗಾರಿಯ ಪ್ಯಾಕೇಜ್​ 18 ಹಾಗೂ ತಿಪಟೂರಿನ ಬೈಪಾಸ್​ ಬಳಿ ನಡೆಯುತ್ತಿರುವ "ಎಲಿವೇಟೆಡ್​ ಟ್ರಫ್​' ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಚಲುವರಾಯಸ್ವಾಮಿ, ಕಳೆದ 3 ವರ್ಷಗಳಿಂದಲೂ ಈ ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದರು. ಕಾಮಗಾರಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಅಕ್ಟೋಬರ್​ ಅಂತ್ಯದ ಗಡುವು ನೀಡಿದರಲ್ಲದೆ, ಯಾವುದೇ ಕಾರಣಕ್ಕೂ ನೆಪಗಳನ್ನು ಸಹಿಸುವುದಿಲ್ಲ. ಮುಂದಿನ ಅನಾಹುತಗಳಿಗೆ ನಾನಂತೂ ಜವಾಬ್ದಾರನಲ್ಲ ಎಂದು ಎಚ್ಚರಿಕೆ ನೀಡಿದರು.
ಚೌಡ್ಲಪುರ ಪ್ಯಾಕೇಜ್​
606 ಕೋಟಿ ರೂ. ವೆಚ್ಚದ ಚೌಡ್ಲಪುರ ಪ್ಯಾಕೇಜ್​ನಲ್ಲಿ ಈಗಾಗಲೇ ಶೇ. 86ರಷ್ಟು ಕಾಮಗಾರಿ ಮುಕ್ತಾಯಗೊಂಡಿದ್ದು, ದಿನದ 22 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಸಾಗುತ್ತಿದೆ. ಇಲ್ಲಿಂದ ತುಮಕೂರಿನವರೆಗೂ ಯಾವುದೇ ಅಡೆ-ತಡೆಗಳಿಲ್ಲ. ಹಾಗಾಗಿ ಅಕ್ಟೋಬರ್​ ತಿಂಗಳಿನಲ್ಲಿಯೇ ಈ ಭಾಗದ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಳಿಸಬೇಕು ಎಂದು ಚಲುವರಾಯಸ್ವಾಮಿ ತಿಳಿಸಿದರು.
ಈ ವೇಳೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ತಿಪಟೂರು ಕ್ಷೇತ್ರದ ಶಾಸಕ ಕೆ.ಷಡಕ್ಷರಿ ಹಾಗೂ ಜಲಸಂಪನ್ಮೂಲ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.