ತುಮಕೂರಿನಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ 2 ದಿನಗಳ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಮತ್ತು ವಾಣಿಜ್ಯ ಮೇಳವನ್ನು ಡಾ.ಜಿ.ಪರಮೇಶ್ವರ ಉದ್ಘಾಟಿಸಿದರು. ನಿಕೇತ್​ ರಾಜ್​ ಮೌರ್ಯ, ಶುಭಕಲ್ಯಾಣ್​, ಕೆ.ವಿ.ಅಶೋಕ್​, ಲಕ್ಷ್ಮಣ್​ ಎಸ್​. ಕಳ್ಳೆನ್ನವರ, ಶಾರದಮ್ಮ, ಎನ್​.ಮಂಜುನಾಥ್​ ಮತ್ತಿತರರು ಇದ್ದರು.  
ತುಮಕೂರು

ಸಿರಿಧಾನ್ಯಗಳ ಖಣಜ ತುಮಕೂರು

ಪ್ರಮುಖ ಮುಖ್ಯಾಂಶಗಳು

  • ಸಿರಿಧಾನ್ಯ ಹಬ್ಬ, ವಾಣಿಜ್ಯ ಮೇಳ
  • ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ
  • ಸಿರಿಧಾನ್ಯ ರಾಜ್ಯ ಮೊದಲ ಸ್ಥಾನ
ತುಮಕೂರು: ದೇಶದಲ್ಲಿ ಸಿರಿಧಾನ್ಯ ಬೆಳೆಯುವುದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೆ, ನಮ್ಮ ತುಮಕೂರು ಜಿಲ್ಲೆ ಸಿರಿಧಾನ್ಯಗಳ ತವರೂರು ಎನಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಗಾಜಿನಮನೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್​, ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ 2 ದಿನಗಳ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಮತ್ತು ವಾಣಿಜ್ಯ ಮೇಳವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಸುಮಾರು 20ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದ್ದು ತುಮಕೂರು ಜಿಲ್ಲೆಯೊಂದರಲ್ಲೇ 1.70 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ರಾಗಿ, ನವಣೆ, ಸಾಮೆ, ಕೊರಲೆ ಸೇರಿದಂತೆ ಎಲ್ಲ ತರಹದ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಕಲ್ಪತರು ನಾಡು ಸಿರಿಧಾನ್ಯಗಳ ಖಣಜವಾಗಿ ಮಾರ್ಪಟ್ಟಿದೆ ಎಂದರು.
ಸಿರಿಧಾನ್ಯಗಳಿಗೆ 10ಸಾವಿರ ವರ್ಷಗಳ ಇತಿಹಾಸವಿದ್ದು, ಮಾನವನು ಬೆಳೆದ ಮೊದಲ ಕೃಷಿ ಬೆಳೆಗಳಲ್ಲಿ ಸಿರಿಧಾನ್ಯಗಳು ಒಂದು. ಸಿರಿಧಾನ್ಯ ಬೆಳೆಯುವುದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಿರಿಧಾನ್ಯಗಳ ಉತ್ಪಾದನೆ ಕ್ರಮೇಣ ಹೆಚ್ಚುತ್ತಿದೆ. ದೇಶದಲ್ಲಿ 60ರ ದಶಕದವರೆಗೂ ಆಹಾರ ಉತ್ಪಾದನೆ ಕಡಿಮೆ ಇದ್ದು ಆಹಾರದ ಅಭಾವವಿತ್ತು. 80ರ ನಂತರ ಕೃಷಿ ತಂತ್ರಜ್ಞಾನದಲ್ಲಿ ಬದಲಾವಣೆ, ಅಭಿವೃದ್ಧಿಯಿಂದ ಅಕ್ಕಿ, ಗೋಧಿ, ಸಕ್ಕರೆ, ಹಾಲು ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳಲ್ಲಿ ಭಾರತ ಸ್ವಾವಲಂಬನೆ ಸಾಧಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ನಮ್ಮ ದೇಶವು ಸಾಕಷ್ಟು ಆಹಾರ ಉತ್ಪಾದನೆ ಮಾಡಿ ಇತರೆ ದೇಶಗಳಿಗೆ ರಫ್ತು ಮಾಡುತ್ತಿದೆ ಎಂದು ತಿಳಿಸಿದರು.
ಆರ್ಥಿಕ ಬಲ: ಸಿರಿಧಾನ್ಯಗಳ ಉತ್ಪಾದನೆ ಹೆಚ್ಚಾಗುವುದರಿಂದ ರೈತರ ಆರ್ಥಿಕ ಸ್ಥಿತಿ ಬಲಗೊಳ್ಳುವುದಲ್ಲದೆ, ಜನರ ಆರೋಗ್ಯ ಕಾಪಾಡುವಲ್ಲಿ ಮಹತ್ತರ ಪಾತ್ರ ನಿರ್ವಹಿಸಲಿದೆ. ಸಿರಿಧಾನ್ಯಗಳಿಂದ ಇಂದಿಗೆ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತಿದೆ. ಖಾಸಗಿ ಕಂಪನಿಗಳು ಸಿರಿಧಾನ್ಯಗಳ ಉತ್ಪನ್ನಗಳ ವಹಿವಾಟು ಮೂಲಕ ವಾರ್ಷಿಕ ಕೋಟ್ಯಂತರ ರೂಪಾಯಿ ಆದಾಯಗಳಿಸುತ್ತಿವೆ ಎಂದು ಪರಮೇಶ್ವರ್​ ಹೇಳಿದರು.
ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ್​ ಎಸ್​. ಕಳ್ಳೆನ್ನವರ ಮಾತನಾಡಿ, ಕಡಿಮೆ ಮಳೆ ಪ್ರಮಾಣದಲ್ಲಿಯೇ ಬೆಳೆಯಬಲ್ಲ ಸಿರಿಧಾನ್ಯಗಳು ಬೆಳೆಗಾರರಿಗೆ ಹೆಚ್ಚಿನ ಅನುಕೂಲತೆ ನೀಡಲಿವೆ. ಇವುಗಳಿಗೆ ಹೆಚ್ಚು ರಸಗೊಬ್ಬರ ಹಾಗೂ ರಾಸಾಯನಿಕ ಕೀಟನಾಶಕಗಳ ಅವಶ್ಯಕತೆಯಿಲ್ಲ. ಕೀಟ-ರೋಗ ಬಾಧೆ ಕಡಿಮೆಯಾಗಿರುವುದರಿಂದ ಬೆಳೆ ವೆಚ್ಚವೂ ತಗ್ಗುತ್ತದೆ ಎಂದರು.
ಸಿರಿಧಾನ್ಯಗಳು ಮಣ್ಣಿನ ಸಾರಾಂಶವನ್ನು ಕಾಪಾಡುವ ಜತೆಗೆ ಪರಿಸರ ಸ್ನೇಹಿ ಬೆಳೆಯಾಗಿಯೂ ಪರಿಗಣಿಸಲ್ಪಟ್ಟಿವೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಉತ್ತಮ ಪಶುವಿನ ಮೇವು ಆಗಿಯೂ ಬಳಸಬಹುದು. ರೈತರು ಸಿರಿಧಾನ್ಯಗಳನ್ನು ಬೆಳೆದರೆ ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭ ಗಳಿಸುವುದು ಮಾತ್ರವಲ್ಲ, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿರುವ ಕಾರಣ ಆರ್ಥಿಕ ಭದ್ರತೆಗೂ ಸಹಾಯವಾಗುತ್ತದೆ. ಸಿರಿಧಾನ್ಯಗಳಿಂದ ತಯಾರಾಗುವ ಆಹಾರ ಪದಾರ್ಥಗಳು ಮಾನವ ಆರೋಗ್ಯವನ್ನು ಕಾಪಾಡಲು ಮಹತ್ತರ ಪಾತ್ರ ವಹಿಸುತ್ತಿದ್ದು, ಗ್ರಾಹಕರಿಗೆ ಆರೋಗ್ಯಕರ ಜೀವನಶೈಲಿಯನ್ನು ನೀಡುವಲ್ಲಿ ಸಹಕಾರಿ ಆಗುತ್ತವೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಬಿಎಂಟಿಸಿ ಉಪಾಧ್ಯಕ್ಷ ನಿಕೇತ್​ ರಾಜ್​ ಮೌರ್ಯ, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ , ತೋಟಗಾರಿಕೆ ಇಲಾಖೆ ನಿರ್ದೇಶಕಿ ಶಾರದಮ್ಮ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎನ್​.ಮಂಜುನಾಥ್​, ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ನಿಗಮದ ಅಧ್ಯಕ್ಷ ಗೋವಿಂದರಾಜು, ಉಪ ಕೃಷಿ ನಿರ್ದೇಶಕ ಎಚ್​.ಹುಲಿರಾಜ್​ ಉಪಸ್ಥಿತರಿದ್ದರು.