ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಸಭೆ 
ತುಮಕೂರು

ಕರೆ ಸ್ವೀಕರಿಸುವುದೂ ಕಷ್ಟವಾದರೆ ಜಿಲ್ಲೆ ಬಿಟ್ಟು ತೊಲಗಲಿ

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ವಿರುದ್ಧ ವಾಸಣ್ಣ ಗಂಭೀರ ಆರೋಪ
  • ಅಧಿಕಾರಿಗಳ ಕಾರ್ಯವೈಖರಿಗೆ ಕೈ ಶಾಸಕರು ಗರಂ
  • ಬರ ನಿರ್ವಹಣೆಗೆ ಡಿಸಿಎಂ ಖಡಕ್​ ಸೂಚನೆ
  • ಜಿಲ್ಲಾ ಮಟ್ಟದ ಅಧಿಕಾರಿಗಳ ಬದಲಿಸಿ, ಬರ ನಿರ್ವಹಿಸಿ
ತುಮಕೂರು: ಜಿಲ್ಲಾ ಮಟ್ಟದ ಅಧಿಕಾರಿಗಳ ಕಾರ್ಯವೈಖರಿಗೆ ಬೇಸತ್ತಿರುವ ಕಾಂಗ್ರೆಸ್​ ಪಕ್ಷದ ಹಿರಿಯ ಶಾಸಕ ಎಸ್​.ಆರ್​.ಶ್ರೀನಿವಾಸ್​ ಹಾಗೂ ಡಾ.ಎಚ್​.ಡಿ.ರಂಗನಾಥ್​ ಹರಿಹಾಯ್ದರು. ಇಂತಹ ಬೇಜವಬ್ಧಾರಿ ಅಧಿಕಾರಿಗಳನ್ನು ಇಟ್ಟುಕೊಂಡು ಬರ ನಿರ್ವಹಣೆ ಮಾಡುತ್ತೇವೆ ಎಂದುಕೊಳ್ಳುವುದೇ ಭ್ರಮೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ ಮುಂದೆಯೇ ಆಕ್ರೋಶ ಹೊರಹಾಕಿದರು.
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಪಂ ಸಿಇಒ ಬಿ.ವಿ.ಅಶ್ವಿಜಾ ವಿರುದ್ಧ ಕಾಂಗ್ರೆಸ್​ ಹಿರಿಯ ಶಾಸಕ ಎಸ್​.ಆರ್​.ಶ್ರೀನಿವಾಸ್​ ಆರೋಪಗಳ ಸುರಿಮಳೆಗೈದರು. ಶಾಸಕರ ಕರೆ ಸ್ವೀಕರಿಸಲಾಗದ ಅಧಿಕಾರಿಗಳು ಜನರ ಕಷ್ಟಗಳಿಗೆ ಹೇಗೆ ಸ್ಪಂದಿಸಬಹುದು ಊಹಿಸಿ ಎಂದರು.
ಗುಬ್ಬಿ ತಾಲೂಕಿನ ವಸತಿಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಭೆ ನಡೆಸಿ ತುರ್ತಾಗಿ ಕೊಳವೆಬಾವಿ ಕೊರೆಸಲು ಅಂದಾಜುಪಟ್ಟಿ ತಯಾರಿಸಿ ಅನುಮೋದನೆಗೆ ಕಳುಹಿಸಿ ಎರಡು ತಿಂಗಳಾದರೂ ಅನುಮೋದನೆ ನೀಡಿಲ್ಲ, ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಕೊಡಲು ಕರೆ ಮಾಡಿದರೆ ಸ್ವೀಕರಿಸುವುದಿಲ್ಲ, ನಾನೇನು ಅವರೊಂದಿಗೆ ಸಂಬಂಧ ಬೆಳೆಸಲು ಅಥವಾ ಯೋಗಕ್ಷೇಮ ವಿಚಾರಿಸಲು ಕರೆ ಮಾಡುವುದಿಲ್ಲ, ಸಮಸ್ಯೆ ಇದ್ದರಷ್ಟೇ ಕರೆ ಮಾಡುವುದಷ್ಟೇ ಎಂದರು.
ಗ್ರಾಮಗಳಲ್ಲಿ ನೀರಿನ ಸಮಸ್ಯೆಯಾದರೆ ಜನ ನಮ್ಮ ಮನೆ ಮುಂದೆ ಬರುತ್ತಾರೆ, ಇವರ(ಅಧಿಕಾರಿಗಳು) ಮನೆ ಮುಂದೆ ಹೋಗಲ್ಲ. ಕನಿಷ್ಟ ನೀರು ಕೊಡಲು ಸಾಧ್ಯವಾಗದ ಅಧಿಕಾರಿಗಳನ್ನು ಕೂಡಲೇ ಬದಲಿಸಿ, ಕೆಲಸ ಮಾಡುವ ಅಧಿಕಾರಿಗಳನ್ನು ಜಿಲ್ಲೆಗೆ ಹಾಕಿಕೊಳ್ಳಿ. ಜೆಜೆಎಂ ಕಾಮಗಾರಿ ಸಮರ್ಪಕವಾಗಿಲ್ಲ, ನಿರ್ವಹಣೆ ಮಾಡುವವರು ಯಾರು? ರೈತರಿಗೆ ಕೆಲಸ ಕೊಡಲು ಆಗದಿದ್ದರೂ ಕುಡಿಯುವ ನೀರು ಕೊಡಬೇಕು, ಬೇರೆ ಏನಾದರೂ ಮಾಡಿಕೊಳ್ಳಿ. ಆದರೆ, ಅಧಿಕಾರಿಗಳ ಕಾರ್ಯವೈಖರಿಗ ಜಿಲ್ಲೆಯಲ್ಲಿ ಭಯದ ವಾತಾವರಣ ನಿಮಾರ್ಣಮಾಡಿದೆ ಎಂದರು.
ಎಸ್​.ಆರ್​.ಶ್ರೀನಿವಾಸ್​ ಮಾತಿಗೆ ದನಿಗೂಡಿಸಿದ ಕುಣಿಗಲ್​ ಕಾಂಗ್ರೆಸ್​ ಶಾಸಕ ಡಾ.ಎಚ್​.ಡಿ.ರಂಗನಾಥ್​ ಕೂಡ ಈಗಿರುವ ಜಿಲ್ಲಾಡಳಿತದಿಂದ ಬರದ ನಿರ್ವಹಣೆ ಕಷ್ಟವಾಗಲಿದೆ. ಸಾಮಾನ್ಯ ಜನರಿಗೆ ಜಿಲ್ಲೆಯಲ್ಲಿ ಅಧಿಕಾರಿಗಳ ಸ್ಪಂದನೆ ಇಲ್ಲ, ಜನರಿಗೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಸಮಸ್ಯೆ ಇರುವ ಗ್ರಾಮಗಳಲ್ಲಿ ಕೊಳವೆಬಾವಿಗೆ ಅನುಮೋದನೆ ನೀಡುತ್ತಿಲ್ಲ, ಕುಡಿಯಲು ನೀರು ಕೊಡಲು ಸಾಧ್ಯವಾಗುತ್ತಿಲ್ಲ, ಟ್ಯಾಂಕರ್​ಗೆ ಹಣ ನೀಡುತ್ತಿಲ್ಲ, ಆರ್​ ಒ ಪ್ಲಾಂಟ್​ ನಿರ್ವಹಣೆ ಇಲ್ಲ ಎಂದು ದೂರಿದರು.
ವಿಧಾನ ಪರಿಷತ್​ ಸದಸ್ಯ ರಮೇಶ್​ಬಾಬು ಮಾತನಾಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಪೋನ್​ ರಿಸೀವ್​ ಮಾಡುವುದಿಲ್ಲ ಎಂಬುದು ಎಲ್ಲಾ ಜನಪ್ರತಿನಿಧಿಗಳಿಗೂ ಅನುಭವವಾಗಿದೆ, ಜಿಲ್ಲೆಯೆಲ್ಲೆಡೆ ಸಮಸ್ಯೆಗಳಿದ್ದರೂ ವಾಸ್ತವ ವರದಿ ನೀಡದೆ ಬರ ಮುಚ್ಚಿಡಲಾಗುತ್ತಿದೆ, ಜನರಿಗೆ ನೀಡುವ ಆದ್ಯತೆಯನ್ನು ಜಾನುವಾರುಗಳಿಗೂ ನೀಡಬೇಕು, ಮೇವು ನೀರು ಒದಗಿಸಬೇಕು ಎಂದರು.
ಕಾಂಗ್ರೆಸ್​ ಶಾಸಕರೇ ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದಿದ್ದರಿಂದ ಇರಿಸು, ಮುರಿಸುಗೆ ಒಳಗಾದ ಡಿಸಿಎಂ ಡಾ.ಜಿ.ಪರಮೇಶ್ವರ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ವರದಿ ನೀಡಲು ನಿಖರವಾದ ಡೇಟಾ ಇಲ್ಲ, ಜಿಲ್ಲಾಡಳಿತ ಹಳಿತಪ್ಪಿದೆ, ಪ್ರತಿಯೊಬ್ಬ ಅಧಿಕಾರಿಗಳು ಶಾಸಕರ ಜತೆ ಮಾತನಾಡಿ, ಪೋನ್​ ನಂಬರ್​ ಕೊಡಬೇಕು, ತಾಲೂಕು ಅಧಿಕಾರಿಗಳು ಭೇಟಿ ಮಾಡಬೇಕು, ಚುನಾಯಿತ ಪ್ರತಿನಿಧಿಗಳ ವಿಶ್ವಾಸಗಳಿಸದಿದ್ದರೆ ಕ್ರಮಕೈಗೊಳ್ಳುತ್ತೇವೆ ಎಂದು ಸೂಚನೆ ನಿಡಿದರು.
ಜುಲೈ 25ರಂದು ಚಿತ್ರದುರ್ಗದಲ್ಲಿ ಬೆಂಗಳೂರು ಕಂದಾಯ ವಿಭಾಗದ ಸಭೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಮೋಡ ಬಿತ್ತನೆ ಬಗ್ಗೆ ಈಗಾಗಲೇ ಸಿಎಂ ಮುಂದೆ ಪ್ರಸ್ತಾಪವಾಗಿದೆ. ಮೋಡ ಬಿತ್ತನೆಯ ನಂತರ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ಎಂಬುದರ ಕುರಿತು ವರದಿ ತರಿಸಿಕೊಳ್ಳಲಾಗುತ್ತಿದೆ ಎಂದು ಪರಮೇಶ್ವರ ತಿಳಿಸಿದರು.
ಮಹತ್ವದ ಸಭೆಯಲ್ಲಿ ಜಿಪಂ ಸಿಇಒ ಬಿ.ವಿ.ಅಶ್ವಿಜಾ ಗೈರಾಗಿದ್ದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದೀಪಾಚೋಳನ್​, ಶಾಸಕರಾದ ಸಿ.ಬಿ.ಸುರೇಶ್​ಬಾಬು, ಡಿ.ಟಿ.ಶ್ರೀನಿವಾಸ್​, ಕಾಡಗೊಲ್ಲ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್​, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್​ರಾಜ್​ ಮತ್ತಿತರರು ಇದ್ದರು.
ಮಳೆ ಮಾಪನ ನಿಲ್ಲಿಸಿರುವ ಯಂತ್ರಗಳು:
ರಾಜ್ಯದಲ್ಲಿ 2 ಸಾವಿರಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳು ಕೆಟ್ಟು ಕುಳಿತಿರುವುದು ಬರ ಪರಿಸ್ಥಿತಿಯ ನಿಖರ ಅಂಕಿ, ಅಂಶ ತಿಳಿಸಲು ತೊಡಕಾಗಿದೆ ಎಂಬುದನ್ನು ಕಂದಾಯ ಸಚಿವರೂ ಆದ ಡಾ.ಜಿ.ಪರಮೇಶ್ವರ ಹೇಳಿದರು. ತುಮಕೂರು ಜಿಲ್ಲೆಯಲ್ಲಿಯೂ ಇರುವ 340 ಕೇಂದ್ರಗಳ ಪೈಕಿ 229 ಮಾತ್ರ ಕಾರ್ಯನಿರ್ವಹಿಸುತ್ತಿರುವ ಆಘಾತಕಾರಿ ಅಂಶ ಸಭೆಯಲ್ಲಿ ಬಯಲಾಯಿತು.
ಮಳೆ ಮಾಪನ ನಿರ್ವಹಣೆಯ ಹೊಣೆ ಇರುವ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನಿಸಬೇಕಿದ್ದ ಡಿಸಿಎಂ, ಕೃಷಿ ಇಲಾಖೆ ಜೆಡಿಗೆ ಈ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದು ಅಚ್ಚರಿ ಮೂಡಿಸಿತು. ವಿಧಾನಪರಿಷತ್​ ಸದಸ್ಯ ರಮೇಶ್​ಬಾಬು ಮಧ್ಯಪ್ರವೇಶಿಸಿ ಮಳೆ ಮಾಪನ ಕೇಂದ್ರದ ನಿರ್ವಹಣೆ ಜಿಲ್ಲಾಧಿಕಾರಿ ಹೊಣೆ ಎಂದು ತಿಳಿಸಿದಾಗ ತಣ್ಣಗಾದ ಪರಮೇಶ್ವರ ಕುಡಲೇ ಮಾಪನಕೇಂದ್ರಗಳನ್ನು ಸರಿಪಡಿಸಿ ಎಂದೇಳಿ ಚರ್ಚೆಗೆ ಇತಿಶ್ರೀ ಹಾಡಿದರು.
ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ವಸತಿಶಾಲೆಗೆ ಕೊಳವೆಬಾವಿ ಅನುಮೋದನೆಗೆ ತುಮಕೂರು ಜಿಪಂ ಸಿಇಒಗೆ ಕಳೆದ 2 ತಿಂಗಳಿನಿಂದ ಕರೆ ಮಾಡುತ್ತಿದ್ದರೂ ಸ್ವೀಕರಿಸುತ್ತಿಲ್ಲ, ನಾನೇನು ಅವರ ಜತೆ ಸಂಬಂಧ ಬೆಳೆಸಲು, ಯೋಗಕ್ಷೇಮ ಕೇಳಲು ಕರೆ ಮಾಡುವುದಿಲ್ಲ, ಇಂತಹ ಅಧಿಕಾರಿಗಳನ್ನು ಇಟ್ಟುಕೊಂಡು ಬರ ನಿರ್ವಹಣೆ ಹೇಗೆ ಮಾಡುತ್ತಿರ? ಕರೆ ಸ್ವೀಕರಿಸುವುದು ಕಷ್ಟವಾದರೆ ಜಿಲ್ಲೆ ಬಿಟ್ಟು ತೊಲಗಲಿ.
ಎಸ್​.ಆರ್​.ಶ್ರೀನಿವಾಸ್​
ಕಾಂಗ್ರೆಸ್​ ಶಾಸಕ
ಜಿಲ್ಲಾಡಳಿತದ ಕಾರ್ಯವೈಖರಿ ನೋಡಿದರೆ ಬರ ನಿರ್ವಹಣೆ ಹೇಗೆ ಮಾಡಿಸುವುದು ಎಂಬ ಅನುಮಾನ ಶುರುವಾಗಿದೆ. ಕನಿಷ್ಟ ಜ್ಞಾನವಿಲ್ಲದ ಅಧಿಕಾರಿಗಳು, ಜನಪ್ರತಿನಿಧಿಗಳ ಕೈಗೆ ಸಿಗದವರು ಜಿಲ್ಲೆ ಖಾಲಿ ಮಾಡಿ. ಕಂದಾಯ ಇಲಾಖೆಯಲ್ಲಿ ಬರ ನಿರ್ವಹಣೆಗೆ ಹಣ ನೀಡಲಾಗಿದೆ, ಜಿಲ್ಲೆಯಲ್ಲಿ ಮಳೆ ಡಾಟಾ ಕೂಡ ಸರಿಯಿಲ್ಲ ಅಂದರೆ ಏನು ಮಾಡುವುದು. ಈ ಅಂಕಿ ಅಂಶ ಇಟ್ಕೊಂಡು ಏನ್​ ಸಭೆ ನಡೆಸೋಣ? ವ್ಯವಸ್ಥೆಯಲ್ಲಿ ನೋಡೊರು ಯಾರು? ನಾಟ್​ ಕರೆಕ್ಟ್​. ಡಿಸಿ, ಸಿಇಒ ಪ್ರತಿ ವಾರ ಸಭೆ ನಡೆಸಬೇಕು.
ಡಾ.ಜಿ.ಪರಮೇಶ್ವರ
ಡಿಸಿಎಂ
ಸಭೆಯಲ್ಲಿ ಡಿಸಿಎಂ ನೀಡಿದ ಸೂಚನೆಗಳು
1.ಪ್ರತಿವಾರ ಡಿಸಿ, ಸಿಇಒ ಟಾಸ್​ಪೋರ್ಸ್​ ಸಭೆ ನಡೆಸಬೇಕು
2.ಸಮಸ್ಯೆ ಇದ್ದರೆ ಡಿಸಿ, ಸಿಇಒ ಕ್ರಮಕೈಗೊಳ್ಳಬೇಕು, ಇಲ್ಲಾಗದಿದ್ದರೆ ಸರ್ಕಾರಕ್ಕೆ ತಿಳಿಸಬೇಕು.
3.ಬರ ನಿರ್ವಹಣೆ ಹಿನ್ನೆಲೆಯಲ್ಲಿ ಕಾಮಗಾರಿ ನಿಯಮಗಳ ಸಣ್ಣ ಪುಟ್ಟ ಸಡಿಲಿಕೆಗೆ ಅವಕಾಶ
4.ಕೊರೆದ ಕೊಳವೆಬಾವಿಗೆ ಮೋಟರ್​, ವಿದ್ಯುದ್ದೀಕರಣಕ್ಕೆ ಯಾರೂ ತಡ ಮಾಡುವಂತಿಲ್ಲ.
5.ತಾಲೂಕು ನೋಡಲ್​ ಅಧಿಕಾರಿ ಬರ ನಿರ್ವಹಣೆಗೆ ಆದ್ಯತೆ ನೀಡಬೇಕು.
6.ಡಿಸಿ, ಸಿಇಒ ಹೆಚ್ಚಿನ ಜವಬ್ಧಾರಿಯಿಂದ ಕೆಲಸ ಮಾಡಬೇಕು