ಗುಬ್ಬಿ ಬಾಲಕಿಯರ ಶಾಲೆ ಆವರಣದಲ್ಲಿ ಜಿಲ್ಲೆಯ ವಿಶೇಷ ಮತ್ತು ಅಳಿವಿನಂಚಿನಲ್ಲಿರುವ ಜಾಲಾರಿ ಹೂವಿನ ಸಸಿ ನೆಡಲಾಯಿತು. ಬಿ.ಆರತಿ, ಬಿ.ಯು.ಚಂದ್ರಶೇಖರ್​ , ಜಿ.ಹಿಮಂತರಾಜು, ದೇವಿಕಾ, ರೇಣುಕಾ ಮತ್ತಿತರರು ಇದ್ದರು. 
ತುಮಕೂರು

ಸೌಲಭ್ಯ ಸದ್ಬಳಸಿಕೊಂಡು ಸಾಧನೆ ಮಾಡಿ

ಪ್ರಮುಖ ಮುಖ್ಯಾಂಶಗಳು

  • ಸೌಲಭ್ಯ ಸದ್ಬಳಸಿಕೊಂಡು ಸಾಧನೆ ಮಾಡಿ
ಗುಬ್ಬಿ:ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಸಾಮಾಜಿಕ ಹೊಣೆಗಾರಿಕೆ ಕಾರಣದಿಂದ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ನೀಡುವ ಸೌಲಭ್ಯ ಬಳಸಿಕೊಂಡು ಮಕ್ಕಳು ವೈಕ್ತಿತ್ವ ರೂಪಿಸಿಕೊಂಡು ದೇಶದ ಆಸ್ತಿಯಾಗಬೇಕು ಎಂದು ಗುಬ್ಬಿ ತಹಸೀಲ್ದಾರ್​ ಬಿ.ಆರತಿ ಹೇಳಿದರು.
ಪಟ್ಟಣದ ಬಾಲಕಿಯರ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಮೆರಿಕ ಮೂಲದ ಬೆಂಗಳೂರಿನ ಸಿನಾಪ್ಸಿಸ್​ ಸಂಸ್ಥೆ ಕೊಡುಗೆಯಾಗಿ ನೀಡಿರುವ ಆಧುನಿಕ ಸೌಲಭ್ಯಗಳೊಂದಿಗೆ ನವೀಕರಿಸಿ ಕೊಟ್ಟಿರುವುದನ್ನು ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶ್ಲಾಘಿಸಿದ ಅವರು, ಈ ಸೌಲಭ್ಯಗಳ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು ಎಂದರು.
ಸಿನಾಪ್ಸಿಸ್​ ಸಂಸ್ಥೆ ಗ್ರಾಮೀಣ ಪ್ರಿತಿಭೆಗಳೇ ಹೆಚ್ಚು ಓದುತ್ತಿರುವ ಬಾಲಕಿಯರ ಪ್ರೌಢಶಾಲೆಗೆ ಸ್ಮಾರ್ಟ್​ ಕ್ಲಾಸ್​ ರೂಮು, 20ಕ್ಕೂ ಹೆಚ್ವು ಕಂಪ್ಯೂಟರ್​ ಗಳ ಲ್ಯಾಬ್​, ಶಾಲೆಯ ಎಲ್ಲ ಕೊಠಡಿಗಳ ನವೀಕರಣ, ಅಡುಗೆ ಮನೆ ನಿಮಾರ್ಣ ಹಾಗೂ ಶೌಚಗೃಹಗಳ ಅಭಿವೃದ್ಧಿ ಇತ್ಯಾದಿ ಕೆಲಸಗಳನ್ನು ಹೆಚ್ಚಿನ ಆಸಕ್ತಿ ವಹಿಸಿ ನಿರ್ಮಿಸಿಕೊಟ್ಟಿದೆ ಎಂದರು.
ಸಿನಾಪ್ಸಿಸ್​ ಸಂಸ್ಥೆ ಮುಖ್ಯಸ್ಥ ಬಿ.ಯು.ಚಂದ್ರಶೇಖರ್​ ಮಾತನಾಡಿ, ತಮ್ಮ ಸಂಸ್ಥೆಯು ತಮ್ಮ ಸಾಮಾಜಿಕ ಜವಾಬ್ದಾರಿಯ ಅನುದಾನವನ್ನು ಶಿಕ್ಷಣಕ್ಕೆ ಒತ್ತು ನೀಡಿ ಕೆಲಸ ಮಾಡಲಿದೆ. ಈಗಾಗಲೆ ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ಷೇತ್ರದ ಬೆಳವಣಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಗುಬ್ಬಿ ಪಟ್ಟಣದ ಸರ್ಕಾರಿ ಬಾಲಕಿಯರ ಶಾಲೆಯನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಿರುವುದು ಸಮಾಧಾನ ತಂದಿದೆ. ಮುಂದಿನ ದಿನಗಳಲ್ಲಿ ಇಲ್ಲಿ ತಾರಾಲಯ ಮಾಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಜಿಲ್ಲಾ ವಾರ್ತಾಧಿಕಾರಿ ಜಿ.ಹಿಮಂತರಾಜು ಮಾತನಾಡಿ, ಖಾಸಗಿ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಬಳಸುವುದರಿಂದ ಗ್ರಾಮೀಣ ಪ್ರತಿಭೆಗಳು ವಿಶ್ವಮಟ್ಟಕ್ಕೇರಲು ಅನುಕೂಲವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ತುಮಕೂರು ಜಿಲ್ಲೆಯಲ್ಲೇ ವಿಶೇಷ ಮತ್ತು ಅಳಿವಿನಂಚಿನಲ್ಲಿರುವ ಜಾಲಾರಿ ಹೂವಿನ ಸಸಿ ನೆಡಲಾಯಿತು. ಮುಂದಿನ ಪೀಳಿಗೆಗೆ ಅಳಿವಿನಂಚಿನಲ್ಲಿರುವ ಈ ಜಾಲಾರಿ ಸಸ್ಯ ಪ್ರಭೇದವನ್ನು ಉಳಿಸಲು ಹಾಗೂ ಇದನ್ನು ಭೌಗೋಳಿಕವಾಗಿ ವಿಶೇಷ ಸಸ್ಯವೆಂದು ಗುರುತಿಸುವ ಜಿಯೋ ಟ್ಯಾಗ್​ ಪಡೆಯಲು ಜಿಲ್ಲಾಡಳಿತ ಚಿಂತನೆ ನಡೆಸಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್​, ಪಪಂ ಮಂಜುಳಾದೇವಿ, ಕಾಮಗಾರಿ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದ ಭಾರತ್​ ಕೇರ್ಸ್​ ಮುಖ್ಯಸ್ಥ ರತಿಕಾಂತ್​, ಮುಖ್ಯಶಿಕ್ಷಕಿ ದೇವಿಕಾ, ಶಿಕ್ಷಕ ಜಯಣ್ಣ, ಎಸ್​ಡಿಎಂಸಿ ಅಧ್ಯಕ್ಷ ರೇಣುಕಾ ಮತ್ತಿತರರು ಇದ್ದರು.