Make good use of medical facilities. 
ತುಮಕೂರು

ವೈದ್ಯ ಸೌಲಭ್ಯ ಸದುಪಯೋಗವಾಗಲಿ

ತುರುವೇಕೆರೆ: ಹಾಲು ಉತ್ಪಾದಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸಂಘದಲ್ಲಿರುವ ವೈದ್ಯಕಿಯ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ನಂದಿನಿ ಭವನದಲ್ಲಿ ಆಯೋಜಿಸಿದ್ದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಲು ಉತ್ಪಾದಕರಿಗೆ ವಿವಿಧ ಸವಲತ್ತುಗಳ ಚೆಕ್​ ವಿತರಿಸಿ ಮಾತನಾಡಿ, ರೈತರ ಆರೋಗ್ಯ ಚಿಕಿತ್ಸೆಗಾಗಿ ಹಲವು ಯೋಜನೆಗಳಿವೆ. ರೈತರು ಚಿಕಿತ್ಸೆ ಪಡೆದು ಆಸ್ಪತ್ರೆಯ ದಾಖಲೆಗಳನ್ನು ಸ್ಥಳಿಯ ಸಂಘಕ್ಕೆ ಸಕಾಲದಲ್ಲಿ ನೀಡಿದಲ್ಲಿ ಶೇ.25 ಹಣವನ್ನು ಮರುಪಾವತಿ ಮಾಡಲಾಗುವುದು ಎಂದರು.
ತಾಲೂಕಿನಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಲೀಟರ್​ ಹಾಲು ಶೇಖರಣೆ ಆಗುತ್ತಿದ್ದು, ಶೇ.100 ಗುಣಮಟ್ಟದ ಹಾಲು ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ ಎಂದರು.
ಮರಣ ಹೊಂದಿದ 14 ರಾಸುಗಳ ಮಾಲೀಕರಿಗೆ ಸುಮಾರು 6.60 ಲಕ್ಷ ರೂ. ಚೆಕ್​ ಹಾಗೂ ಮರಣ ಹೊಂದಿದ 6 ಮಂದಿಯ ಕುಟುಂಬಕ್ಕೆ ತಲಾ 50 ಸಾವಿರದಂತೆ 3 ಲಕ್ಷ ರೂ. ಚೆಕ್​, ಮರಣ ಹೊಂದಿದ 8 ಪಡ್ಡೆ ರಾಸುಗಳ ವಿಮೆ ತಲಾ 10 ಸಾವಿರದಂತೆ 80 ಸಾವಿರ ಚೆಕ್​, ವೈದ್ಯಕಿಯ ವೆಚ್ಚವಾಗಿ ಒಬ್ಬ ರೈತರಿಗೆ 25 ಸಾವಿರ ರೂ. ಚೆಕ್​, ದೊಡ್ಡ ಮಲ್ಲಿಗೆರೆಯ ಕೆಳಭಾಗದ ಕಟ್ಟಡದ ಅನುದಾನ 3 ಲಕ್ಷ ರೂ. ಚೆಕ್​ ಅನ್ನು ವಿತರಿಲಾಯಿತು.