Maintain good health and discipline.
ಹುಳಿಯಾರು: ಆರೋಗ್ಯವಂತ ದೇಹದಲ್ಲಿ ಮಾತ್ರ ಉತ್ತಮ ಮನಸ್ಸು ನೆಲೆಸಲು ಸಾಧ್ಯ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತರಾಗದೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ದೊಡ್ಡಬಿದರೆಯ ಜೆಸಿಎಂ ಇಂಟರ್ ನಾಷನಲ್ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಸಿದ್ಧಗಂಗಾ ವೈದ್ಯಕಿಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾಗೂ ಗ್ಯಾಜೆಟ್ಗಳ ವ್ಯಾಮೋಹದಿಂದ ಮಕ್ಕಳು ದೈಹಿಕ ಆಟೋಟಗಳಿಂದ ದೂರವಾಗುತ್ತಿರುವುದು ಕಳವಳಕಾರಿ ಸಂಗತಿ. ವಿದ್ಯಾರ್ಥಿ ದೆಸೆಯಲ್ಲೇ ಉತ್ತಮ ಆರೋಗ್ಯ, ಶಿಸ್ತನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜೆಸಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಭಿಜ್ಞ ಮಾಧುಸ್ವಾಮಿ ಮಾತನಾಡಿ, ಇಂದಿನ ಜಂಕ್ ುಡ್ ಸಂಸತಿಯಿಂದ ದೂರವಿದ್ದು, ನಿತ್ಯದ ಆಹಾರದಲ್ಲಿ ತರಕಾರಿ, ಹಣ್ಣು ಹಾಗೂ ಮೊಳಕೆ ಭರಿಸಿದ ಧಾನ್ಯಗಳನ್ನು ಬಳಸಬೇಕು. ಇದು ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಪ್ರತಿದಿನ ಕನಿಷ್ಠ ಒಂದು ಗಂಟೆ ಮೈದಾನದಲ್ಲಿ ತೊಡಗಿಸಿಕೊಳ್ಳಬೇಕು. ಮಾನಸಿಕ ಸಮತೋಲನಕ್ಕೆ ಕನಿಷ್ಠ 7ರಿಂದ 8 ಗಂಟೆಗಳ ಕಾಲ ಸಕಾಲದಲ್ಲಿ ನಿದ್ದೆ ಮಾಡುವುದು ಅತ್ಯಗತ್ಯ ಎಂದು ತಿಳಿಸಿದರು.
ಶಿಬಿರದಲ್ಲಿ ಸಿದ್ಧಗಂಗಾ ಆಸ್ಪತ್ರೆ ಸಾಮಾನ್ಯ ರೋಗಗಳ ವಿಭಾಗದ ಕೆ.ಪಿ.ಡಾ.ದಿಲೀಪ್, ಚರ್ಮರೋಗ ವಿಭಾಗದ ಡಾ.ನಯನಾ, ಮೂಳೆ ಮತ್ತು ಕೀಲು ವಿಭಾಗದ ಡಾ.ಕಾರ್ತಿಕ್, ಮಕ್ಕಳ ತಜ್ಞರ ವಿಭಾಗದ ಡಾ.ದಿಲೀಪ್, ಕಿವಿ, ಮೂಗು, ಗಂಟಲು ವಿಭಾಗದ ಡಾ.ದೀಪಾಂಜಲಿ ಹಾಗೂ ದಂತ ಚಿಕಿತ್ಸಾ ವಿಭಾಗದ ಡಾ.ಭೂಮಿಕಾ ವೈದ್ಯರ ತಂಡ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿದರು.