ತುಮಕೂರಿನಲ್ಲಿ ಜಗದ್ಗುರು ರೇಣುಕಾಚಾರ್ಯರು, ಜಗಜ್ಯೋತಿ ಬಸವೇಶ್ವರರು ಹಾಗೂ ಕಾಯಕಯೋಗಿ ಸಿದ್ಧರಾಮೇಶ್ವರರ ಜಯಂತೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವೀರಶೈವ ಧರ್ಮ ಸಮ್ಮೇಳನದಲ್ಲಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಜಿ.ಬಿ.ಜ್ಯೋತಿಗಣೇಶ್, ಡಾ.ಸಿ.ಸೋಮಶೇಖರ್, ಕೋರಿ ಮಂಜುನಾಥ್, ಟಿ.ಬಿ.ಹರೀಶ್, ಡಾ.ಎಸ್.ಪರಮೇಶ್, ಕೆ.ಜೆ.ರುದ್ರಪ್ಪ ಮತ್ತಿತರರು ಇದ್ದರು.
- ಮಹಾತ್ಮರ ಜಯಂತ್ಯೋತ್ಸವ ಅಂಗವಾಗಿ
- ತುಮಕೂರಿನಲ್ಲಿ ವೀರಶೈವ ಧರ್ಮ ಸಮ್ಮೇಳನ
- ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ
ತುಮಕೂರು: ಬಸವಣ್ಣ ಎಂದರೆ ವ್ಯಕ್ತಿಯಲ್ಲ, ಅದೊಂದು ಶಕ್ತಿ, ಅದೊಂದು ತತ್ವ. ಬಸವ ತತ್ವದಲ್ಲಿ ಸಮಾಜದ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ ಎಂದು ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಗರ ವೀರಶೈವ ಸಮಾಜ ಸೇವಾ ಸಮಿತಿ ಹಾಗೂ ಅಂಗಸಂಸ್ಥೆಗಳ ಸಹಯೋಗದಲ್ಲಿ ಜಗದ್ಗುರು ರೇಣುಕಾಚಾರ್ಯರು, ಜಗಜ್ಯೋತಿ ಬಸವೇಶ್ವರರು ಹಾಗೂ ಕಾಯಕಯೋಗಿ ಸಿದ್ಧರಾಮೇಶ್ವರರ ಜಯಂತೋತ್ಸವದ ಅಂಗವಾಗಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ವೀರಶೈವ ಧರ್ಮ ಸಮ್ಮೇಳನದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಬಸವಣ್ಣನವರ ತತ್ವಗಳು ಸಾರ್ವಕಾಲಿಕವಾಗಿವೆ. ನಮ್ಮಲ್ಲಿ ಬಸವಪ್ರಜ್ಞೆ ಮೂಡದಿದ್ದರೆ ಅವರ ಜಯಂತಿಗಳು ಕೇವಲ ಸಮಾರಂಭವಾಗುತ್ತವೆ ಅಷ್ಟೇ ಎಂದರು.
ಅಂದಿನ ಕಾಲದಲ್ಲಿ ಇದ್ದ ಸಾಮಾಜಿಕ ಅಸಮಾನತೆ, ಹೆಣ್ಣು-ಗಂಡಿನ ನಡುವಿನ ತಾರತಮ್ಯ, ಮೇಲುಕೀಳು, ಜಾತಿ ವೈಷಮ್ಯ, ಮೂಢ ನಂಬಿಕೆಗಳು ಮಾನವನ ಉನ್ನತಿಗೆ ತೊಡಕಾಗಿರುವುದನ್ನು ಅರಿತ ಬಸವಣ್ಣನವರು ಅವುಗಳನ್ನು ತೊಡೆದುಹಾಕುವ ಪ್ರಯತ್ನ ಮಾಡಿದ ಸಮಾಜ ಸುಧಾರಕರೆನಿಸಿದರು. ಸಮ ಸಮಾಜ ನಿರ್ಮಾಣ ಮಾಡುವ ಮೂಲಕ ಕ್ರಾಂತಿಕಾರಿಕ ಹೆಜ್ಜೆಯನ್ನಿಟ್ಟರು ಎಂದು ತಿಳಿಸಿದರು.
ನಗರದ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ನಮ್ಮ ಸಮಾಜದ ಪರಂಪರೆಯನ್ನು ಮುಂದುವರೆಸಲು ಯುವಪೀಳಿಗೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಸಮಾಜದ ಅಸ್ತಿತ್ವ ಉಳಿಸಲು ಯಾವ ರೀತಿಯ ಕಾರ್ಯಗಳನ್ನು ಮಾಡಬೇಕು ಎಂಬ ಬಗ್ಗೆ ಚರ್ಚೆ ಆಗಬೇಕು. ವೀರಶೈವ ಸಮಾಜವು ವಿಶ್ವದಾದ್ಯಂತ ಇದ್ದು ಅದಕ್ಕೆ ನಮ್ಮ ಮಠಮಾನ್ಯಗಳ ಮಠಾಧೀಶರುಗಳೇ ಪ್ರಮುಖ ಕಾರಣ. ಸಮಾಜ ಬಂಧುಗಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡು ಯಶಸ್ವಿಯಾಗಬೇಕು. ಹಾಗೇ ನಮ್ಮ ಸಮಾಜದ ಅಸ್ತಿತ್ವದ ಬಗ್ಗೆಯೂ ಚಿಂತನೆ ಮಾಡಬೇಕು ಎಂದು ಹೇಳಿದರು.
ವಿಶ್ವವನ್ನು ನನ್ನ ಕುಟುಂಬದಂತೆ ಭಾವಿಸುವುದು ಧರ್ಮದ ಸಂದೇಶ. ಸಮಾಜಕ್ಕೆ ಒಳಿತು ಮಾಡುವುದು, ಹೃದಯಗಳನ್ನು ಬೆಸೆಯುವುದು, ಭಾವನೆಗಳಿಗೆ ಧಕ್ಕೆಯಾಗದಂತೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವುದು ಧರ್ಮದ ಉದ್ದೇಶ, ಮಾನವ ಧರ್ಮಕ್ಕೆ ಜಯವಾಗಲಿ ಎಂದ ರೇಣುಕಾಚಾರ್ಯಕರು, ಬಸವಣ್ಣ, ಸಿದ್ಧರಾಮೇಶ್ವರರು ಸೇರಿದಂತೆ ಅನೇಕ ಮಹನೀಯರು ಮಾನವ ಧರ್ಮದ ಶ್ರೇಷ್ಠತೆಯ ಸಾರವನ್ನು ಪ್ರತಿಪಾದಿಸಿದ್ದಾರೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ. ಸೋಮಶೇಖರ್ ತಿಳಿಸಿದರು.
ಸಪ್ತಗಿರಿ ಕಾಲೇಜಿನ ಶಿಕ್ಷಣಾಧಿಕಾರಿ ವಿಶೇಷ ಉಪನ್ಯಾಸ ನೀಡಿದರು. ಸಮಾಜ ಹಿರಿಯರಾದ ಟಿ.ಕೆ. ನಂಜುಂಡಪ್ಪ, ಕೆ.ವೈ. ಸಿದ್ಧಲಿಂಗಮೂರ್ತಿ, ಸಿದ್ಧಗಂಗಮ್ಮ ಸಿದ್ಧರಾಮಣ್ಣ, ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಉಪಾಧ್ಯಕ್ಷ ಟಿ.ಬಿ. ಹರೀಶ್, ಗೌರವ ಕಾರ್ಯದರ್ಶಿ ಡಿ.ಜೆ. ಶಶಿಧರನ್, ಸಹ ಕಾರ್ಯದರ್ಶಿ ಟಿ.ಜೆ. ಸಿದ್ಧಲಿಂಗಸ್ವಾಮಿ, ಖಜಾಂಚಿ ಜಿ.ಕೆ. ಸ್ವಾಮಿ, ನಿರ್ದೇಶಕರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ,ಸಪ್ತಗಿರಿ ಕಾಲೇಜಿನ ಶಿಕ್ಷಣಾಧಿಕಾರಿ ಚನ್ನಪ್ಪ ಬಾರಿಗಿಡದ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಡಾ. ಎಸ್. ಪರಮೇಶ್, ವೀರಶೈವ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಜೆ. ರುದ್ರಪ್ಪ, ಸ್ನೇಹಸಂಗಮ ಬ್ಯಾಂಕ್ ಅಧ್ಯಕ್ಷ ಬಿ.ಎಸ್. ಮಂಜುನಾಥ್ ಸೇರಿದಂತೆ ವೀರಶೈವ ಸಮಾಜದ ಅಂಗಸಂಸ್ಥೆರಗಳ ಪದಾಧಿಕಾರಿಗಳು, ಸಮಾಜದ ಮುಖಂಡರು ಭಾಗವಹಿಸಿದ್ದರು.