Loan facility for Visessenn members
ತುರುವೇಕೆರೆ: ತಾಲೂಕಿನಲ್ಲಿರುವ 25 ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳಲ್ಲಿರುವ ಸದಸ್ಯರಿಗೆ ಸುಮಾರು 8.90 ಕೋಟಿ ರೂ. ಸಾಲವನ್ನು ವಿತರಣೆ ಮಾಡಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ನ ಜಿಲ್ಲಾ ನಿರ್ದೇಶಕ ಕೊಡಗೀಹಳ್ಳಿ ಸಿದ್ದಲಿಂಗಪ್ಪ ತಿಳಿಸಿದರು.
ತಾಲೂಕಿನ ಡಿ.ಕಲ್ಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ನೀಡಲಾದ ಕೆಸಿಸಿ ಸಾಲ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರು ನಮ್ಮ ತಾಲೂಕಿನ ಮೇಲೆ ಸಾಕಷ್ಟು ಅಭಿಮಾನ ಇಟ್ಟುಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ವಿವಿಧ ಕಾರಣಗಳಿಂದಾಗಿ ಸಾಲ ವಿತರಣೆ ಮಾಡಿರಲಿಲ್ಲ. ಆದರೆ ಈ ಬಾರಿ ಕೆ ಎನ್.ರಾಜಣ್ಣ ಅವರು ಮನಸ್ಸು ಮಾಡಿದ್ದರಿಂದ ತಾಲೂಕಿನ ಎಲ್ಲ 25 ಸಂಘಗಳಿಗೂ ಸಾಲ ನೀಡಲಾಗಿದೆ ಎಂದರು.
ಈಗಾಗಲೇ ತಾಲೂಕಿನ ದಂಡಿನಶಿವರ, ಮಾಯಸಂದ್ರ ಮತ್ತು ತುರುವೇಕೆರೆಯಲ್ಲಿ ಶಾಖೆ ತೆರೆಯಲಾಗಿದೆ. ದಬ್ಬೇಘಟ್ಟದಲ್ಲಿ ನೂತನವಾಗಿ ಡಿಸಿಸಿ ಬ್ಯಾಂಕ್ ಶಾಖೆ ತೆರೆಯುವ ಪ್ರಯತ್ನ ಸಾಗಿದೆ. ಮಾಯಸಂದ್ರದಲ್ಲಿ ಬಾಡಿಗೆ ಕಟ್ಟಡದಲ್ಲಿ ಬ್ಯಾಂಕ್ ನಡೆಯುತ್ತಿದೆ. ಅಲ್ಲಿ ಸ್ವಂತ ಕಟ್ಟಡ ಕಟ್ಟಲು ನಿವೇಶನ ಕೊಳ್ಳುವ ಪ್ರಕ್ರಿಯೆ ಸಾಗಿದೆ ಎಂದರು.
ಡಿ.ಕಲ್ಕೆರೆ ಸಂಘದ ಅಧ್ಯಕ್ಷ ಡಿ.ಪಿ.ರಾಜು ಮಾತನಾಡಿ, ತಮ್ಮ ಸಂಘದಲ್ಲಿ ಒಟ್ಟು 1275 ಮಂದಿ ಷೇರುದಾರರು ಇದ್ದಾರೆ. ಸದ್ಯ ಡಿಸಿಸಿ ಬ್ಯಾಂಕ್ನಿಂದ ಸುಮಾರು 42.52 ಲಕ್ಷ ರೂ. ಸಾಲವನ್ನು ಬಿಡುಗಡೆ ಮಾಡಲಾಗಿದೆ. ಇವರಲ್ಲಿ 135 ಮಂದಿಗೆ ಸಾಲ ವಿತರಣೆ ಮಾಡಲಾಗುತ್ತಿದೆ. ಇದುವರೆಗೂ ಸುಮಾರು 3.33 ಕೋಟಿ ರೂ. ಕೆಸಿಸಿ ಸಾಲವನ್ನು ನಮ್ಮ ಸಂಘದಿಂದ ನೀಡಲಾಗಿದೆ ಎಂದರು.
ನಿರ್ದೇಶಕರಾದ ಜಿ.ಎಸ್.ರಾಮಲಿಂಗೇಗೌಡ, ಎ.ಬಿ.ಉಮೇಶ್, ಚಿಕ್ಕನಾಗಯ್ಯ, ಪಾಂಡುರಂಗನಾಥ್, ನಂಜಪ್ಪ, ವನಜಾ, ಲಕ್ಷ್ಮಮ್ಮ, ವಿ.ಕೆ.ಪುಟ್ಟಸ್ವಾಮಿಗೌಡ, ಜಿ.ಎಸ್.ಪ್ರಸನ್ನ, ಮೇಲ್ವಿಚಾರಕರಾದ ಭರತ್, ಕೆ.ಎಚ್.ಹರೀಶ್, ಕಾರ್ಯನಿರ್ವಾಹಣಾಧಿಕಾರಿ ಕೆ.ವಿ.ನಾಗರಾಜು, ಮಾರಾಟ ಗುಮಾಸ್ತ ಪಂಚಾಕ್ಷರಿ ಇದ್ದರು.