ತುಮಕೂರು ಓಪನ್ ಚಾಂಪಿಯನ್ ಜಸ್ಟಿನಾ, ರನ್ನರ್ ಅಪ್ ಜುಝಾನ್ನಾ
- ಐಟಿಎಫ್ ಡಬ್ಲ್ಯೂ 35 ಟೆನಿಸ್ ಟೂರ್ನಿಗೆ ತೆರೆ
- ಜುಝಾನ್ನಾ ಪಾವ್ಲಿಕೋವ್ಸ್ಕಾ ರನ್ನರ್ ಅಪ್ ಶ್ರೇಯ
- 30 ಸಾವಿರ ಯುಎಸ್ ಡಾಲರ್ ಬಹುಮಾನ ಮೊತ್ತ
ತುಮಕೂರು: ಲಿಥುವೇನಿಯಾದ ಅಗ್ರಶ್ರೇಯಾಂಕಿತೆ ಜಸ್ಟಿನಾ ಮಿಕುಲ್ಸ್ಕೆಟ್ "ತುಮಕೂರು ಓಪನ್' ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡರು. ಇದು ಜಸ್ಟಿನಾಗೆ 8ನೇ ಸಿಂಗಲ್ಸ್ ಪ್ರಶಸ್ತಿಯಾಗಿದೆ.
ಭುಜದ ಗಾಯದ ನೋವಿನಿಂದ ಬಳಲುತ್ತಿದ್ದ ಪೋಲೆಂಡ್ನ ಎರಡನೇ ಶ್ರೇಯಾಂಕಿತೆ ಜುಝಾನ್ನಾ ಪಾವ್ಲಿಕೋವ್ಸ್ಕಾ ಗಾಯದಿಂದಾಗಿ ಪ್ರಶಸ್ತಿ ಸುತ್ತಿನಲ್ಲಿ ಕಣದಿಂದ ನಿವೃತ್ತಿ ಹೊಂದಿದ ಹಿನ್ನೆಲೆ ಜಸ್ಟಿನಾ ಐಟಿಎಫ್ ವಿಶ್ವ ಮಹಿಳಾ ಟೆನಿಸ್ ಚಾಂಪಿಯನ್ಶಿಪ್ (ಡಬ್ಲೂ35 ಟೂರ್ನಿ) ಸಿಂಗಲ್ಸ್ ಪ್ರಶಸ್ತಿಯನ್ನು ಸುಲಭವಾಗಿ ಗೆದ್ದುಕೊಂಡರು.
ನಗರದ ವಿವಿ ಆವರಣದ ಜಿಲ್ಲಾ ಟೆನಿಸ್ ಕ್ರೀಡಾಂಗಣದಲ್ಲಿ ಭಾನುವಾರ ಸಿಂಗಲ್ಸ್ಫೈನಲ್ನಲ್ಲಿ
ಜಸ್ಟಿನಾ ವಿರುದ್ಧ ಭುಜದ ಗಾಯದ ನೋವಿನಲ್ಲೇ ಆಡಲಿಳಿದ ಜುಝಾನ್ನಾಗೆ ಪ್ರೇಕ್ಷಕರಿಂದ ದೊಡ್ಡ ಕರತಾಡನದ ಸ್ವಾಗತ ದೊರೆಯಿತು. ಆರಂಭಿಕ ಸೆಟ್ನಲ್ಲಿ 1-0ಯಲ್ಲಿದ್ದಾಗ ಮೊದಲ ಗೇಮ್ ಬಳಿಕ ನೋವು ಉಲ್ಬಣಗೊಂಡು ಜುಝಾನ್ನಾ ಆಡಲು ಸಾಧ್ಯವಾಗದೆ ಹೋರಾಟದಿಂದ ಹಿಂದೆ ಸರಿದರು. ಪ್ರಶಸ್ತಿ ಸುತ್ತಿನ ಸೆಣಸಾಟ ಕಣ್ತುಂಬಿಕೊಳ್ಳಲು ಉತ್ತಮ ಸಂಖ್ಯೆಯಲ್ಲಿ ಬಂದಿದ್ದ ಪ್ರೇಕ್ಷಕರಿಗೆ ತೀವ್ರ ನಿರಾಸೆಯಾಯಿತು.
ಜುಝಾನ್ನಾ ಶನಿವಾರ ಸಂಜೆ ಡಬಲ್ಸ್ ಫೈನಲ್ ನಲ್ಲಿ ಹೋರಾಟದಿಂದ ಹಿಂದೆ ಸರಿದಿದ್ದರು.
ಈ ಪ್ರಶಸ್ತಿಯು ಜಸ್ಟಿನಾಗೆ ಒಲಿದ 8ನೇ ಐಟಿಎಫ್ ಸಿಂಗಲ್ಸ್ ಪ್ರಶಸ್ತಿಯಾಗಿದೆ. ಅಂತಾರಾಷ್ಟ್ರೀಯ ಸರ್ಕೂಟ್ನಲ್ಲಿ ಪ್ರಭಾವಶಾಲಿ ಋತುವಿಗೆ ತುಮಕೂರು ಓಪನ್ ಜಸ್ಟಿನಾ ಪಾಲಿಗೆ ಮತ್ತೊಂದು ಮೈಲಿಗಲ್ಲು. ಟ್ರೋಫಿ ಜತೆಗೆ ಲಿಥುವೇನಿಯಾದ ಜಸ್ಟಿನಾ 4,860 ಯುಎಸ್ ಡಾಲರ್ ಜೇಬಿಗೆ ಇಳಿಸಿಕೊಂಡರು. ಮತ್ತು 35 ಮೌಲ್ಯಯುತ ಡಬ್ಲೂಟಿಎ ಶ್ರೇಯಾಂಕ ಅಂಕಗಳನ್ನು ತಮ್ಮದಾಗಿಸಿಕೊಂಡರು.
ರನ್ನರ್ ಅಪ್ ಪಾವ್ಲಿಕೋವ್ಸ್ಕಾ ಟ್ರೋಫಿ ಜತೆಗೆ 2,637 ಯುಎಸ್ ಡಾಲರ್ ಪಡೆದರು. ರನ್ನರ್ ಅಪ್ ಶ್ರೇಯದಿಂದ 23 ಡಬ್ಲೂಟಿಎ ಅಂಕಗಳನ್ನು ಗಳಿಸಿದರು.
ಬಹಮಾನ ವಿತರಣೆ: ತುಮಕೂರು ಓಪನ್ ಟ್ರೋಫಿ ಹಾಗೂ ಚೆಕ್ ಅನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಸಿದ್ದಾರ್ಥ ಅಕಾಡೆಮಿ ಆ್ ಹೈಯರ್ ಎಜುಕೇಶನ್ ಟ್ರಸ್ಟಿ ಕನ್ನಿಕಾಪರಮೇಶ್ವರಿ ವಿತರಿಸಿದರು. ಎಐಟಿಎ ಮತ್ತು ಕೆಎಸ್ಎಲ್ಟಿಎ ಗೌರವ ಜಂಟಿ ಕಾರ್ಯದರ್ಶಿ ಸುನಿಲ್ ಯಜಮಾನ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್, ಜಿಪಂ ಸಿಇಒ ಬಿ.ವಿ.ಅಶ್ವಿಜ, ಪಾಲಿಕೆ ಆಯುಕ್ತೆ ಬಿ.ಶುಭ, ತಹಸೀಲ್ದಾರ್ ರಾಜೇಶ್ವರಿ, ಜಿಲ್ಲಾ ಟೆನಿಸ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್. ಅಮರನಾಥ್, ಸುಪ್ರೀತ ಕಡವಿಗೆರೆ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್ ಉಪಸ್ಥಿತರಿದ್ದರು.
ತುಮಕೂರು ಓಪನ್ ಪ್ರಶಸ್ತಿ ಗೆದ್ದಿರುವುದು ಖುಷಿ ಸಂಗತಿ. ಬಿರು ಬಿಸಿಲಿನ ವಾತಾವರಣದಲ್ಲಿ ಹೆಚ್ಚಿನ ಶ್ರಮ ಪಡುವಂತಾಯಿತು. ಬಿಸಿಲು, ಆರ್ದ್ರತೆಯಿಂದಾಗಿ ಆಡುವುದು ಕಠಿಣವೆನಿಸಿತ್ತು. ಪಂದ್ಯದಲ್ಲಿ ಏಕಾಗ್ರತೆ ಸಾಧಿಸುವುದು ಕಷ್ಟಕರವಾಗಿತ್ತು. ಪ್ರೇಕ್ಷಕರ ಉತ್ತಮ ಬೆಂಬಲ ನೀಡಿದ್ದು ಆಟಗಾರರನ್ನು ಪ್ರೋತ್ಸಾಹಿಸಿದ ತುಮಕೂರಿನ ಜನತೆಗೆ ನನ್ನ ಧನ್ಯವಾದಗಳು.
ನಶಾ ಮುಕ್ತ ಕರ್ನಾಟಕ ನಿರ್ಮಾಣ ಕನಸು ನಮ್ಮದು. ಯುವಕರನ್ನು ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಲು ಕ್ರೀಡೆ ಉತ್ತಮ ಸಾಧನ. ಯುವಜನತೆಯಲ್ಲಿ ಕ್ರೀಡಾ ಚಟುವಟಿಕೆ ಉತ್ತೇಜಿಸುವ ಮತ್ತು ತುಮಕೂರನ್ನು ಕ್ರೀಡಾ ಹಬ್ ಆಗಿ ಪರಿವರ್ತಿಸಬೇಕೆಂಬ ದೃಷ್ಟಿಕೋನ ತಮ್ಮದು. ಇದಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುತ್ತಿದೆ.