ತೆಂಗಿನ ಮರದಲ್ಲಿ ಅವಿತಿದ್ದ ಚಿರತೆ  
ತುಮಕೂರು

ಚಿರತೆ ಸೆರೆಗೆ ಪಟ್ಟು , ಗ್ರಾಮಸ್ಥರ ವಿರುದ್ಧ ಎಫ್ ಐಆರ್​

ಜ್ಞಾನಸಿರಿ ಕ್ಯಾಂಪಸ್​ ಬಳಿ ತೆಂಗಿನಮರ ಏರಿದ್ದ ಚಿರತೆ

ತುಮಕೂರು: ತೆಂಗಿನ ಮರವೇರಿ ಕುಳಿತಿದ್ದ ಚಿರತೆ ತಪ್ಪಿಸಿಕೊಂಡಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಈಗಲೇ ಚಿರತೆ ಸೆರೆಹಿಡಿಯದಿದ್ದರೆ ಬಟ್ಟೆಬಿಚ್ಚಿಸುವುದಾಗಿ ಬೆದರಿಕೆ ಹಾಕಿ, ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಆರೋಪ ಹಿನ್ನೆಲೆ ಹೆಬ್ಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ತುಮಕೂರು ವಿಶ್ವವಿದ್ಯಾಲಯ ಜ್ಞಾನಸಿರಿ ಕ್ಯಾಂಪಸ್​ ಬಳಿಯ ತಿಮ್ಮಸಂದ್ರದಲ್ಲಿ ಗುರುವಾರ ಬೆಳಗಿನ ಜಾವ ಕಾಣಿಸಿಕೊಂಡ ಚಿರತೆ ನಂತರ ತೆಂಗಿನಮರ ಏರಿತ್ತು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು ಚಿರತೆ ಸೆರೆ ಕಾರ್ಯಾಚರಣೆ ಕೈಗೊಂಡಿತ್ತು. ಆದರೆ, ಚಿರತೆ ಎಲ್ಲರ ಕಣ್ತಪ್ಪಿಸಿ ಓಡಿಹೋಗಿತ್ತು. ಇದರಿಂದ ಕೆರಳಿದ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಹಠಹಿಡಿದು ಕುಳಿತರಲ್ಲದೆ, ಅಧಿಕಾರಿಗಳ ಮೇಲೆ ಗಲಾಟೆಗೆ ಮುಂದಾಗಿದ್ದರು. ಈ ಸಂಬಂಧ ಬನ್ನೇರುಟ್ಟ ಜೈವಿಕ ಉದ್ಯಾನವನದ ಉಪ ನಿರ್ದೇಶಕ ಡಾ.ಎಚ್​.ಎಸ್​.ಪ್ರಯಾಗ್​ ಹೆಬ್ಬೂರು ಠಾಣೆಗೆ ಗುರುವಾರ ಸಂಜೆ ದೂರು ನೀಡಿದ್ದು, 15 ಮಂದಿ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ.

ಕರ್ತವ್ಯಕ್ಕೆ ಅಡ್ಡಿ, ಹಲ್ಲೆ !: ಚಿರತೆ ಸೆರೆ ಕಾರ್ಯಾಚರಣೆ ವೇಳೆ ದೂರ ಹೋಗುವಂತೆ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಎಷ್ಟು ಹೇಳಿದರೂ ಕದಲದೆ ಅಲ್ಲೆ ನಿಂತು ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆ. ಚಿರತೆ ತೆಂಗಿನಮರದಿಂದ ಇಳಿದು ಓಡಿ ಹೋಗಿದ್ದು ಆ ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಕಾರ್ಯಾಚರಣೆ ನಡೆಸಿದವರ ವಿರುದ್ಧ ಕೂಗಾಡಿದ್ದು ಈಗಲೇ ಚಿರತೆ ಹಿಡಿಯಿರಿ, ಇಲ್ಲದಿದ್ದರೆ ನಿಮ್ಮ ಬಟ್ಟೆ ಬಿಚ್ಚಿಸುತ್ತೇವೆಂದು ಗಲಾಟೆ ಮಾಡಿದ್ದಾರೆ. ತಳ್ಳಾಟ ನಡೆಸಿ ಹಿಂಬದಿಯಿಂದ ಬೆನ್ನಿಗೆ ಗುದ್ದಿ ಹಲ್ಲೆ ನಡೆಸಿ, ಅವಾಚ್ಯಶಬ್ದಗಳಿಂದ ನಿಂದಿಸಿರುವುದಾಗಿ ಡಾ.ಎಚ್​.ಎಸ್​.ಪ್ರಯಾಗ್​ ದೂರಿನಲ್ಲಿ ತಿಳಿಸಿದ್ದಾರೆ.

ತುಮಕೂರು ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸಿದ್ದ ಆನೆಗಳ ಯೋಗಕ್ಷೇಮ ವಿಚಾರಣೆಗೆ ಡಾ.ಪ್ರಯಾಗ್​ ನೇಮಕಗೊಂಡಿದ್ದರು. ದಸರಾ ಮರುದಿನವೇ ಚಿರತೆ ಕಾಣಿಸಿಕೊಂಡಿದ್ದರಿಂದ ಮೇಲಾಧಿಕಾರಿಗಳ ಸೂಚನೆಯಂತೆ ಚಿರತೆ ಕಾಣಿಸಿಕೊಂಡಿದ್ದ ತಿಮ್ಮಸಂದ್ರಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ತೆರಳಿದ್ದರು.