ಶಾಲಾ ಮಕ್ಕಳಿಗೆ ಹವಾಗುಣ ಬದಲಾವಣೆಯಿಂದ ವನ್ಯಜೀವಿಗಳು ವಿನಾಶದೆಡೆಗೆ ಉಪನ್ಯಾಸ  
ತುಮಕೂರು

ಹವಾಗುಣ ಬದಲಾವಣೆಯಿಂದ ವನ್ಯಜೀವಿಗಳ ನಾಶ

ಪ್ರಮುಖ ಮುಖ್ಯಾಂಶಗಳು

  • ಶಾಲಾ ಮಕ್ಕಳಿಗೆ ಉಪನ್ಯಾಸ
  • ಶಿರಾ ತಾಲೂಕು ಹೆತ್ತಪ್ಪನಹಟ್ಟಿ ಸರ್ಕಾರಿ ಪ್ರೌಢಶಾಲೆ
  • ಸಾಲುಮರದ ತಿಮ್ಮಕ್ಕ ಇಕೋಕ್ಲಬ್ ಹಾಗೂ ಚಿಗುರು ಯುವಜನ ಸಂಘ ಸಹಯೋಗ
ತುಮಕೂರು: ಶಿರಾ ತಾಲೂಕು ಹೆತ್ತಪ್ಪನಹಟ್ಟಿ ಸರ್ಕಾರಿ ಪ್ರೌಢಶಾಲೆ ಸಾಲುಮರದ ತಿಮ್ಮಕ್ಕ ಇಕೋಕ್ಲಬ್ ಹಾಗೂ ಚಿಗುರು ಯುವಜನ ಸಂಘ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಹವಾಗುಣ ಬದಲಾವಣೆಯಿಂದ ವನ್ಯಜೀವಿಗಳು ವಿನಾಶದೆಡೆಗೆ ಉಪನ್ಯಾಸ ಆಯೋಜಿಸಲಾಗಿತ್ತು.

ಹವಾಗುಣ ಬದಲಾವಣೆ ಪ್ರಕೃತಿಯಲ್ಲಿನ ಸಮತೋಲನವನ್ನು ಕದಡಿದ ಪರಿಣಾಮವಾಗಿ ವನ್ಯಜೀವಿಗಳ ಮೇಲೆ ಗಂಭೀರವಾದ ಪರಿಣಾಮಗಳನ್ನು ಉಂಟುಮಾಡುತ್ತಿದೆ. ಪ್ರಕೃತಿಯಲ್ಲಿ ತಾಪಮಾನ, ಮಳೆಯ , ಋತುಚಕ್ರಗಳು ಬದಲಾಗುವುದರಿಂದ ಪ್ರಾಣಿಗಳು ತಮ್ಮ ಬದುಕಿನ ಕ್ರಮವನ್ನು ಹೊಂದಿಕೊಳ್ಳಲು ಕಷ್ಟಪಡುವ ಪರಿಸ್ಥಿತಿ ಉಂಟಾಗುತ್ತದೆ. ವನ್ಯಜೀವಿಗಳನ್ನು ರಕ್ಷಿಸಲು ಅರಣ್ಯ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ, ಮತ್ತು ಪರಿಸರ ಸ್ನೇಹಿ ಜೀವನಶೈಲಿ ಚರ್ಚೆಗಳು ಅತ್ಯಂತ ಅಗತ್ಯ. ಇದು ಕೇವಲ ಪ್ರಾಣಿಗಳಿಗಷ್ಟೇ ಅಲ್ಲ, ಮಾನವರ ಭವಿಷ್ಯಕ್ಕೂ ಅತೀ ಮುಖ್ಯವಾದುದು ಎಂದು ಮುಖ್ಯ ಶಿಕ್ಷಕ ಕೆ ಗವಿರಂಗಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಅಮಲಗೊಂದಿ ಮಾತನಾಡಿ, ಮಾನವರ ಚಟುವಟಿಕೆಗಳಿಂದ ಪರಿಸರವು ವಿನಾಶದ ಅಂಚಿಗೆ ಬಂದು ತಲುಪುತ್ತಿದೆ. ಅದರ ಪರಿಣಾಮವಾಗಿ ತಾಪಮಾನ ಏರಿಕೆಯಿಂದ ಕೆಲವು ಪ್ರಭೇದಗಳು ತಮ್ಮ ಸಹಜ ವಾಸಸ್ಥಳಗಳನ್ನು ಕಳೆದುಕೊಳ್ಳುತ್ತಿವೆ. ಉದಾಹರಣೆಗೆ, ಧ್ರುವ ಪ್ರದೇಶಗಳಲ್ಲಿ ಹಿಮ ಕರಗುವುದರಿಂದ ಅಲ್ಲಿ ಇರುವ ಪ್ರಾಣಿಗಳಿಗೆ ಆಹಾರ ಮತ್ತು ಆಶ್ರಯದ ಸಮಸ್ಯೆ ಉಂಟಾಗುತ್ತಿದೆ. ಮಳೆಪಾತದ ಅಸ್ಥಿರತೆ ಕಾಡು ಜೀವಿಗಳಿಗೆ ಮತ್ತೊಂದು ದೊಡ್ಡ ಸವಾಲು. ಕೆಲವು ಪ್ರದೇಶಗಳಲ್ಲಿ ಬರ ಹೆಚ್ಚಾದರೆ ನೀರಿನ ಮೂಲಗಳು ಒಣಗುತ್ತವೆ. ಇನ್ನು ಕೆಲವು ಕಡೆಗಳಲ್ಲಿ ಅತಿಯಾದ ಮಳೆಯು ನೆರೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ಆಹಾರ ಸರಪಳಿ ಅಸ್ತವ್ಯಸ್ತಗೊಳ್ಳುತ್ತದೆ ಎಂದರು.
ವರ್ಲ್ಡ್ ವೈಲ್ಡ್‌ಲೈಫ್ ಫಂಡ್ ಸಂಸ್ಥೆಯ ವರದಿಯ ಪ್ರಕಾರ ಇತ್ತೀಚಿನ 50 ವರ್ಷಗಳಲ್ಲಿ ಶೇ.69 ರಷ್ಟು ವನ್ಯಜೀವಿಗಳು ಅವನತಿಯಾಗಿವೆ. ಕೇವಲ ಪ್ರಾಣಿಗಳಲ್ಲದೆ ಋತುಚಕ್ರ ಬದಲಾವಣೆಯಿಂದ ಪಕ್ಷಿಗಳ ವಲಸೆಗೆ ಧಕ್ಕೆಯಾಗುತ್ತಿವೆ. ಹೂ ಬಿಡುವ ಕಾಲ, ಕೀಟಗಳ ಬೆಳವಣಿಗೆ ಕಾಲ, ಪ್ರಾಣಿಗಳ ಸಂತಾನೋತ್ಪತ್ತಿ ಕಾಲಗಳ ನಡುವೆ ಏರುಪೇರು ಉಂಟಾಗಬಹುದು. ಇದರಿಂದ ಜೀವಿಗಳ ಜೀವಿತಾವಧಿ ಮತ್ತು ಅವುಗಳ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಭಾರತದಲ್ಲಿ ಈ ಪರಿಣಾಮಗಳು ಈಗಾಗಲೇ ಕಾಣಿಸುತ್ತಿವೆ. ಪಶ್ಚಿಮ ಘಟ್ಟ ಪ್ರದೇಶದಂತಹ ಜೀವವೈವಿಧ್ಯತೆಯ ತಾಣಗಳಲ್ಲಿ ತಾಪಮಾನ ಮತ್ತು ಮಳೆಯ ಬದಲಾವಣೆಗಳಿಂದ ಅಪರೂಪದ ಪ್ರಭೇದಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿರುವ ವನ್ಯಜೀವಿಗಳ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನವನ್ನು ಮಾಡಲಾಯಿತು. ಜೊತೆಗೆ ವಿದ್ಯಾರ್ಥಿಗಳೊಂದಿಗೆ ಹವಾಗುಣ ಬದಲಾವಣೆಯಿಂದ ವನ್ಯಜೀವಿಗಳ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಸಂವಾದ ಮಾಡಲಾಯಿತು. ಈ ಸಂದರ್ಭದಲ್ಲಿ ಇಕೋ ಕ್ಲಬ್ ನೊಡೆಲ್ ಅಧಿಕಾರಿ ಸುರೇಶ್, ಶಾಲೆಯ ಶಿಕ್ಷಕಿ ಲಕ್ಷ್ಮೀ, ಮಹೇಶ್, ಧನಲಕ್ಷ್ಮೀ, ಕರಿಯಣ್ಣ, ಅಚ್ಯುತನ್, ಮತ್ತು ಮಕ್ಕಳು ಹಾಜರಿದ್ದರು.