- ಜಿಲ್ಲಾಧಿಕಾರಿ ಶುಭಕಲ್ಯಾಣ್ ಕಟ್ಟುನಿಟ್ಟಿನ ಸೂಚನೆ
- ಚಿಕ್ಕೋನಹಳ್ಳಿ ಬಳಿ ಭೂಸ್ವಾಧಿನ
- ಭೂಮಾಲೀಕರಿಂದ ಕೆಲಸಕ್ಕೆ ಅಡ್ಡಿ
ತುಮಕೂರು: ಎತ್ತಿನಹೊಳೆ ಯೋಜನೆಗೆ ಭೂಸ್ವಾಧಿನಪಡಿಸಿ ಪರಿಹಾರ ನೀಡಿದ್ದರೂ ಕೆಲವು ಭೂಮಾಲೀಕರು ಕಾಮಗಾರಿಗೆ ಅಡ್ಡಿಪಡಿಸುತ್ತಿರುವ ಹಿನ್ನೆಲೆ ಅಗತ್ಯರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ನಿರ್ದೇಶನ ನೀಡಿದರು.
ತಾಲೂಕಿನ ಕೋರ ಹೋಬಳಿ ಚಿಕ್ಕೋನಹಳ್ಳಿಯಲ್ಲಿ ಭೂಸ್ವಾಧಿನಪಡಿಸಿ ಪರಿಹಾರ ಪಾವತಿಸಲಾಗಿದ್ದರೂ ಸಹ ಕೆಲವು ಭೂಮಾಲೀಕರು ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದು ಈ ಬಗ್ಗೆ ತ್ತಿನಹೊಳೆ ಯೋಜನೆ ಕಾರ್ಯಪಾಲಕ ಅಭಿಯಂತರರು ರಕ್ಷಣೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಸೂಕ್ತ ರಕ್ಷಣೆ ಒದಗಿಸಲು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ವಿವಿಧ ಯೋಜನೆಗಳ ಭೂಸ್ವಾಧಿನ ಮತ್ತು ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಇದೇವೇಳೆ ಚೌಡ್ಲಾಪುರದ ಭೂಮಾಲೀಕರಿಗೆ ಭೂಸ್ವಾಧಿನ ಪರಿಹಾರವನ್ನು ಶೀಘ್ರವಾಗಿ ಪಾವತಿಸಲು ವಿಶೇಷ ಭೂಸ್ವಾಧಿನಾಧಿಕಾರಿಗಳಿಗೆ ನಿರ್ದೇಶಿಸಿದ ಶುಭಕಲ್ಯಾಣ್, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ತುಮಕೂರು ತಾಲ್ಲೂಕು ಕಸಬಾ ದಕ್ಷಿಣ ಹೋಬಳಿ ರಂಗಾಪುರ, ಮರಳೇನಹಳ್ಳಿ, ಬಟವಾಡಿ ಗ್ರಾಮಗಳ ಇ.ಹೆಚ್.ಟಿ. ಟವರ್ಸ್ಗಳನ್ನು ಸ್ಥಳಾಂತರ ಮಾಡುವ ಕುರಿತು ಅಗತ್ಯ ಕ್ರಮ ವಹಿಸಲು ತುಮಕೂರು ಉಪವಿಭಾಗಾಧಿಕಾರಿಗೆ ನಿರ್ದೇಶನ ನೀಡಿದರು.
ಅಕ್ಕ ತಂಗಿ ಕೆರೆ-ಸರ್ವಿಸ್ ರಸ್ತೆ ವಿಸ್ತರಿಸುವ ಕಾಮಗಾರಿಗೆ ಸಂಬಂಧಿಸಿದಂತೆ 7 ಹೆಕ್ಟೇರ್ ಸರ್ಕಾರಿ ಜಮೀನು ಗುರುತಿಸಲು ಅಗತ್ಯ ಕ್ರಮವಹಿಸಲು ತುಮಕೂರು ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಎತ್ತಿನ ಹೊಳೆ ಯೋಜನೆ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.
ರೈಲ್ವೆ ಯೋಜನೆ ಭೂಸ್ವಾಧಿನ ಸಮಸ್ಯೆಗೆ ಇತಿಶ್ರೀ
ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ತಿಮ್ಮರಾಜನಹಳ್ಳಿ-ತಾವರೆಕೆರೆ ಮಾರ್ಗದ 1 ಕಿ.ಮೀ.ನಷ್ಟು ಕಾಮಗಾರಿಗೆ ಭೂಮಾಲೀಕರು ಅಡ್ಡಿಪಡಿಸುತ್ತಿದ್ದು, ಭೂಮಾಲೀಕರ ಸಮಸ್ಯೆ ಬಗೆಹರಿಸುವಂತೆ ಹಾಗೂ ಪಂಡಿತನಹಳ್ಳಿ ರೈಲ್ವೆ ಗೇಟ್ ಕಾಮಗಾರಿಗೆ ಸಂಬಂಧಿಸಿದಂತೆ ಮರ ಕಡಿಯುವ ಸಮಸ್ಯೆಯನ್ನು ಬಗೆಹರಿಸಲು ಸಹ ವಿಶೇಷ ಭೂಸ್ವಾಧಿನಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಕಟ್ಟುನಿಟ್ಟಿನ ಸೂಚನೆ ನೀಡಿದರು.