ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ
- ಗ್ರಾಪಂ ಮಾಜಿ ಅಧ್ಯಕ್ಷನಿಂದಲೇ ವೃದ್ಧೆ ಹತ್ಯೆ
- ಸಾಲಗಾರರ ಕಾಟ
- ಎಸ್ಪಿ ಕೆ.ವಿ.ಅಶೋಕ್ ಹೇಳಿಕೆ
ತುಮಕೂರು: ಒಂಟಿ ವೃದ್ಧೆ ಕೊಲೆಗೈದು ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಯೊಳಗೆ ಹುಲಿಯೂರುದುರ್ಗ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಉಜ್ಜನಿ ಗ್ರಾಮದ ಗ್ರಾಪಂ ಮಾಜಿ ಅಧ್ಯಕ್ಷ ಮುತ್ತರಾಜ್ (51) ಕೃತ್ಯ ಎಸಗಿದ್ದು ಸಾಲಗಾರರ ಕಾಟಕ್ಕೆ ವೃದ್ಧೆಯನ್ನು ಕೊಂದು ಚಿನ್ನಾಭರಣ ದೋಚಿದ್ದ ಎನ್ನಲಾಗಿದೆ. ಟನೆ ನಡೆದ 24 ಗಂಟೆಯೊಳಗೆ ಆರೋಪಿ ಮುತ್ತರಾಜ್ನನ್ನು ಬಂಧಿಸಿ 4 ಚಿನ್ನದ ಬಳೆ, ಒಂದು ಜತೆ ಓಲೆ, ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವೃದ್ಧೆ ಕೊಲೆ ಪ್ರಕರಣ: ಉಜ್ಜನಿ ಗ್ರಾಮದ ನಾಗಮ್ಮ ಎಂಬುವರನ್ನು ಸೋಮವಾರ ರಾತ್ರಿ ಉಸಿರುಗಟ್ಟಿಸಿ ಕೊಲೆಗೈದು ಚಿನ್ನಾಭರಣ ದೋಚಲಾಗಿತ್ತು. ಈ ಸಂಬಂಧ ಕೊಲೆ ಪ್ರಕರಣ ಬೆನ್ನತ್ತಿದ ಅಮೃತೂರು ಪೊಲೀಸರು ಬೋರೇಗೌಡನಕೊಪ್ಪಲಿನ ಗ್ರಾಪಂ ಮಾಜಿ ಅಧ್ಯಕ್ಷ ಮುತ್ತರಾಜ್ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲೆ ಪ್ರಕರಣ ಬಯಲಾಗಿದೆ. ನಾಗಮ್ಮನಿಂದ ಸಾಲ ಪಡೆದಿದ್ದು, ಅದನ್ನು ವಾಪಸ್ ಕೊಡುವಂತೆ ಪದೇ ಪದೇ ಕೇಳುತ್ತಿದ್ದರಿಂದ ಮುತ್ತುರಾಜ್ ಕೊಲೆಗೈದು ಚಿನ್ನಾಭರಣ ದೋಚಿದ್ದಾನೆ. ಮನೆಯಲ್ಲಿ ಆಕೆ ಒಂಟಿಯಾಗಿದ್ದಾಗ ಸೋಮವಾರ ರಾತ್ರಿ ವೇಳೆ ಹತ್ಯೆಗೈದು ಆಕೆಯ ಮೈಮೇಲಿದ್ದ ಚಿನ್ನದ ಮಾಂಗಲ್ಯ ಸರ, ಒಂದು ಜತೆ ಓಲೆ, 4 ಬಳೆಗಳನ್ನು ದೋಚಿದ್ದ.
ಎಸ್ಪಿ ಕೆ.ವಿ.ಅಶೋಕ್ ಮಾರ್ಗದರ್ಶನದಲ್ಲಿ ಎಎಸ್ಪಿಗಳಾದ ಸಿ.ಗೋಪಾಲ್, ಎಂ.ಎಲ್. ಪುರುಷೋತ್ತಮ್ ನೇತೃತ್ವದಲ್ಲಿ ಡಿವೈಎಸ್ಪಿ ಓಂ ಪ್ರಕಾಶ್ ಅವರನ್ನೊಳಗೊಂಡ ತಂಡ ಪ್ರಕರಣವನ್ನು ಬೇಧಿಸಿದ್ದು ತನಿಖೆ ಮುಂದುವರೆಸಿದೆ.