ತುಮಕೂರಿನಲ್ಲಿ ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘ ಹಾಗು ವೂಡೇ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಟಿ.ಬಿ.ಜಯಚಂದ್ರ ಉದ್ಘಾಟಿಸಿದರು. ಪ್ರೊ.ಕೃಷ್ಣೇಗೌಡ, ವಿಜಯಲಕ್ಷಿ$್ಮ, ಡಬ್ಲ್ಯೂ.ಪಿ. ಶಿವಕುಮಾರ್​, ಶೇಷಾಚಲ ಅವಧೂತ ಸ್ವಾಮೀಜಿ ಮತ್ತಿತರರು ಇದ್ದರು. 
ತುಮಕೂರು

ಸಾಮಾಜಿಕ ಹೊಣೆಗಾರಿಕೆ ಇರಲಿ

ಪ್ರಮುಖ ಮುಖ್ಯಾಂಶಗಳು

  • ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘ
  • ವೂಡೇ ಪ್ರತಿಷ್ಠಾನ
  • ದೆಹಲಿ ವಿಶೇಷ ಪ್ರತಿನಿಧಿ ಜಯಚಂದ್ರ
ತುಮಕೂರು: ಹೆಚ್ಚಿನ ವಿದ್ಯಾಭ್ಯಾಸ ಪಡೆದು ಉನ್ನತ ಸ್ಥಾನಗಳಿಸುವ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಂದೆ, ತಾಯಿ, ಕುಟುಂಬದ ಬಗ್ಗೆಯೂ ಕಾಳಜಿ ವಹಿಸಬೇಕು, ಸಾಮಾಜಿಕ ಹೊಣೆಗಾರಿಕೆಯನ್ನು ಮರೆಯಬಾರದು ಎಂದು ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಕಿವಿಮಾತು ಹೇಳಿದರು.
ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘ ಹಾಗು ವೂಡೇ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳವಾರ ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು. ಉತ್ತಮ ಶಿಕ್ಷಣ ಪಡೆದು ವಿದೇಶಗಳಲ್ಲಿ ನೆಲಸುವ ಬಹುತೇಕರು ಪೋಷಕರನ್ನು ಮರೆಯುತ್ತಿರುವ ಅಮಾನವೀಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಬೇಸರಿಸಿದರು.
ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲು, ಅವರ ಭವಿಷ್ಯ ಉಜ್ವಲವಾಗಲು ತಂದೆ, ತಾಯಿ ಎಷ್ಟೆಲ್ಲಾ ಶ್ರಮಪಡುತ್ತಾರೆ ಎಂಬುದು ಮಕ್ಕಳಿಗೂ ಗೊತ್ತು. ಹಾಗೇ ಮಕ್ಕಳು ಬದುಕು ರೂಪಿಸಿಕೊಂಡ ನಂತರ ಹೆತ್ತವರ ತ್ಯಾಗ ಮರೆಯಬಾರದು, ಅವರು ಕೊನೆಗಾಲದಲ್ಲಿ ನೆಮ್ಮದಿಯಾಗಿ ಬಾಳುವಂತೆ ನೋಡಿಕೊಳ್ಳುವುದು ನಿಮ್ಮದೇ ಜವಾಬ್ದಾರಿ ಎಂದರು.
ಸಮಾಜದ ಒಳಿತಿಗಾಗಿ ಅನೇಕರು ಸಹಾಯ ಮಾಡಿದ್ದಾರೆ, ದಿ.ರಂಗಣ್ಣನವರು ದಾನವಾಗಿ ನೀಡಿದ ಈ ಜಾಗ ಕಾರಣ ಅವರನ್ನು ಸದಾ ಸ್ಮರಿಸಬೇಕು. ಹಾಗೇ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಮಾಡುತ್ತಾ ಮಕ್ಕಳ ಶಿಕ್ಷಣಕ್ಕೆ ಎಲ್ಲಾರಿತಿಯಲ್ಲೂ ಸಹಾಯ, ಸಹಕಾರ ಮಾಡುತ್ತಿರುವ ವೂಡೇ ಕುಟಂಬದವರ ಸೇವೆ ಸದಾ ಸ್ಮರಿಸಬೇಕು. ತಾವು ಮುಂದೆ ಸಮಾಜಕ್ಕೆ ಕೊಡುಗೆ ನೀಡಲು ಇವರೆಲ್ಲಾ ಪ್ರೇರಣೆ ಆಗಬೇಕು ಎಂದರು.
ವಾಗ್ಮಿ ಪ್ರೊ.ಕೃಷ್ಣೇಗೌಡ ಮಾತನಾಡಿ, ಈಗಿನ ಮಕ್ಕಳು ನೂರಕ್ಕೆ ನೂರು ಅಂಕ ಪಡೆಯುವಷ್ಟು ಬುದ್ಧಿವಂತರಾಗಿದ್ದಾರೆ. ಮುಂದೆ ಇಂತಹವರ ಪ್ರಮಾಣ ಹೆಚ್ಚಾಗಿ ಸ್ಪರ್ಧೆಯೂ ಹೆಚ್ಚುತ್ತದೆ. ಆಗ ಕೇವಲ ಬುದ್ಧಿವಂತಿಕೆಯು ಸವಾಲು ಎದುರಿಸಲು ಸಾಕಾಗುವುದಿಲ್ಲ. ಮೇಧಾವಿಗಳಾಗಬೇಕು. ಆಗ ಕಲಿಕೆಗಿಂಥಾ ಗ್ರಹಿಕೆ ಮುಖ್ಯವಾಗುತ್ತದೆ. ಮಕ್ಕಳು ಜಾಗತಿಕ ಮಟ್ಟದ ಸ್ಪರ್ಧೆಗಳಿಗೆ ಸಜ್ಜಾಗಬೇಕು ಎಂದರು.
ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ದೇಶದಲ್ಲಿ ಅಕ್ಷರಸ್ಥರ ಸಂಖ್ಯೆ ಹೆಚ್ಚಾಗಬೇಕು ಎನ್ನುವುದಿತ್ತು. ನಂತರ ಅಕ್ಷರಸ್ಥರಾದರೆ ಸಾಲದು ಪದವಿಧರರಾಗಬೇಕು ಎನ್ನುವ ಹಂತಕ್ಕೆ ಹೋಯಿತು. ನಂತರ ಅದರಲ್ಲಿ ಅತ್ಯಧಿಕ ಅಂಕ ಪಡೆದು ಬುದ್ಧಿವಂತಿಕೆ ಸಾಬೀತು ಮಾಡಬೇಕಾಗಿತ್ತು. ಇನ್ನು ಮುಂದೆ ಜಗತ್ತಿನ ಸವಾಲು ಎದುರಿಸುವ ಮೇಧಾವಿತನ ಬೆಳೆಸಿಕೊಳ್ಳಬೇಕಾಗುತ್ತದೆ. ಇದು ಶಿಕ್ಷಣದ ಬದಲಾವಣೆಯ ಕ್ರಾಂತಿ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್​ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಡಾಕ್ಟರ್​, ಇಂಜಿನಿಯರಿಂಗ್​ನಂತಹ ಕೋರ್ಸ್​ಗಳ ಬಗ್ಗೆಯೇ ಯೋಚಿಸದೆ ಬೇರೆ ಕ್ಷೇತ್ರಗಳಲ್ಲಿಯೂ ವಿಫಲವಾದ ಅವಕಾಶಗಳಿವೆ. ಅಂತಹ ಕೋರ್ಸ್​ಗಳ ಬಗ್ಗೆ ಸಾಧಕರು ಮಾರ್ಗದರ್ಶನ ಮಾಡಬೇಕು ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಮಾತನಾಡಿ, ಪ್ರತಿಭಾವಂತಾ ಮಕ್ಕಳಿಗೆ ಪುರಸ್ಕಾರ ನೀಡುವುದು ಒಳ್ಳೆಯ ಸಂಪ್ರದಾಯ. ಇದರಿಂದ ಬೇರೆ ಮಕ್ಕಳೂ ಸಾಧನೆ ಮಾಡಲು ಉತ್ತೇಜಿಸಿದಂತಾಗುತ್ತದೆ. ಇಂತಹ ಕಾರ್ಯಕ್ರಮಗಳಿಗೆ ಕೆಎಎಸ್​, ಐಎಎಸ್​, ಐಪಿಎಸ್​ ಸಾಧಕರನ್ನು ಆಹ್ವಾನಿಸಿ ಅವರ ಸಾಧನೆಯ ಅನುಭವ ಹಂಚಿಕೊಂಡರೆ ಮಕ್ಕಳಿಗೆ ಪ್ರೇರಣೆ ದೊರೆಯುತ್ತದೆ ಎಂದರು.
ಮಹಿಳಾ ಠಾಣೆ ಪೊಲೀಸ್​ ವೃತ್ತ ನಿರೀಕ್ಷಕಿ ವಿಜಯಲಕ್ಷಿ$್ಮ ಮಾತನಾಡಿ, ಸಾಮಾಜಿಕ ಜಾಲತಾಣಗಳ ವಂಚನೆಗಳ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಿರಬೇಕು. ಅಂತರ್ಜಾಲವನ್ನು ತಮ್ಮ ಬೆಳವಣಿಗೆಗೆ ಪೂರಕವಾಗಿ ಬಳಸಿಕೊಳ್ಳಬೇಕು, ಅದು ಮಾರಕವಾಗಬಾರದು. ವಿಶೇಷವಾಗಿ ಹೆಣ್ಣುಮಕ್ಕಳು ಜಾಲತಾಣದಲ್ಲಿ ಅಪರಿಚಿತರೊಂದಿಗೆ ಸ್ನೇಹ ಗಳಿಸಬಾರದು, ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು ಎಂದರು.
ವೂಡೇ ಪ್ರತಿಷ್ಠಾನದ ಗೌರವಾಧ್ಯಕ್ಷ ಡಬ್ಲ್ಯೂ.ಪಿ. ಶಿವಕುಮಾರ್​, ತ್ಯಾಮಗೊಂಡ್ಲು ಮಠದ ಶೇಷಾಚಲ ಅವಧೂತ ಸ್ವಾಮೀಜಿ, ಕುಂಚಿಟಿಗ ಒಕ್ಕಲಿಗ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಶ್ರೀಧರ್​, ಉಪಾಧ್ಯಕ್ಷ ಕೆ.ಅಶೋಕ್​ಕುಮಾರ್​, ಕಾರ್ಯದರ್ಶಿ ಎಸ್​.ಸತೀಶ್​, ಜಂಟಿ ಕಾರ್ಯದರ್ಶಿ ಸಿ.ಬಸವರಾಜು, ಖಜಾಂಚಿ ಬಿ.ಪ್ರಕಾಶ್​ ಮತ್ತಿತರರು ಇದ್ದರು.