Kumbhabhishekam for Ramalingeshwara Swamy
ಪಾವಗಡ: ತಾಲೂಕಿನ ಜಂಗಮರಹಳ್ಳಿಯ ಶ್ರೀ ರಾಮಲಿಂಗೇಶ್ವರಸ್ವಾಮಿ ಟ್ರಸ್ಟ್ನಿಂದ ಸೋಮವಾರ ಶ್ರೀ ರಾಮಲಿಂಗೇಶ್ವರ ಸ್ವಾಮಿ ಕುಂಭಾಭಿಷೇಕ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆಯಿಂದಲೇ ಶ್ರೀ ರಾಮಲಿಂಗೇಶ್ವರ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು, ಪುಣ್ಯಾಹ, ದೇವನಾಂದಿ, ಸೂರ್ಯ ನಮಸ್ಕಾರ, ನವಗ್ರಹ ಜಪ, ಪರ್ಜನ್ಯ ಜಪ, ಮಹಾನ್ಯಾಸ, ಸುದರ್ಶನ ಹೋಮ, ವಿರಾಟಪರ್ವ, ಪೂರ್ಣಾಹುತಿ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಗ್ರಾಮದಲ್ಲಿ ಅಶಾಂತಿ, ಮಳೆ ಕೊರತೆ, ಬೆಳೆ ನಷ್ಟ ಸೇರಿದಂತೆ ಸಮಸ್ಯೆಗಳು ಎದುರಾದಾಗ ಶ್ರೀ ರಾಮಲಿಂಗೇಶ್ವರಸ್ವಾಮಿಗೆ ಕುಂಭಾಭಿಷೇಕ ಮಾಡಿದರೆ ಮಳೆ, ಬೆಳೆ ಸಮೃದ್ಧಿಯಾಗಿ ಗ್ರಾಮದಲ್ಲಿ ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆ ಪೂರ್ವಿಕರ ಕಾಲದಿಂದಲೂ ಇದೆ. ಇದೇ ಕಾರಣದಿಂದ ಈ ಆಚರಣೆಯನ್ನು ಇಂದಿಗೂ ಮುಂದುವರಿಸಿಕೊಂಡು ಬರುಲಾಗುತ್ತಿದೆ. 1,500 ಕೊಡಗಳ ಜಲವನ್ನು ಲಿಂಗಕ್ಕೆ ಅಭಿಷೇಕ ಮಾಡುವ ಮೂಲಕ ಭಕ್ತರು ಭಕ್ತಿಯ ಮೆರೆದರು.
ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪೂಜಾ ಕಾರ್ಯಗಳಲ್ಲಿ ಭಾಗಿಯಾಗಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಊರಿನ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.