- ಕೆಎಸ್ಆರ್ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್
- ನಷ್ಟದಲ್ಲಿ ಸಾರಿಗೆ ಸಂಸ್ಥೆ
- ಬೆಂಗಳೂರು ಉತ್ತರಕ್ಕೆ ವಿರೋಧ
ತುಮಕೂರು: ರಾಜ್ಯ ರಸ್ತೆ ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಕುರಿತು ಕೆಎಸ್ಆರ್ಟಿಸಿ ಅಧ್ಯಕ್ಷರು ಆದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಸುಳಿವು ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೀಸೆಲ್ ಬೆಲೆ ಏರಿಕೆ ಹಿನ್ನೆಲೆ ಸಾರಿಗೆ ಬಸ್ ದರ ಹೆಚ್ಚಳ ಮಾಡಲೇಬೇಕಲ್ಲವಾ. ಈಗಾಗಲೇ ಡೀಸೆಲ್ ದರವನ್ನು ಒಮ್ಮೆ 3 ರೂಪಾಯಿ 75 ಪೈಸೆ, ಮತ್ತೆ ಈಗ 90 ಪೈಸೆ ಹೆಚ್ಚಳ ಮಾಡಿದ್ದಾರೆ. ನಾವೇನು ನೀರು ಉಯ್ದು ಬಸ್ಗಳನ್ನು ಓಡಿಸಲು ಆಗುತ್ತಾ ಎಂದು ತೀಕ್ಷ್ಣ ವಾಗಿ ಪ್ರತಿಕ್ರಿಯಿಸಿದರು.
ಈಗಾಗಲೇ ಕೆಎಸ್ಆರ್ಟಿಸಿ ನಷ್ಟದಲ್ಲಿ ನಡೀತಾ ಇದೆ. ನಾವು ನೌಕರರ ವೇತನ ಬಾಕಿ 1260 ಕೋಟಿ ರೂ., ಕೊಟ್ಟಿದ್ದೀವಿ. ಸಹಜವಾಗಿ ಬಸ್ ದರ ಜಾಸ್ತಿಯಾಗುತ್ತೆ. ಮೋದಿ ಈ ದೇಶ ಉದ್ಧಾರ ಮಾಡುವ ವ್ಯಕ್ತಿ ಅಲ್ಲವಾ. ಜನ ಸಾಯ್ತಾರೆ ಮೋದಿ, ಮೋದಿ ಅಂತ. ಈಗ ಇಂಧನ ಬೆಲೆ ಹೆಚ್ಚಳದ ಪರಿಣಾಮವನ್ನು ಎದುರಿಸಲೇಬೇಕಿದೆ ಎಂದು ಸಮರ್ಥಿಸಿಕೊಂಡರು.
ನಮ್ಮ ಮೆಟ್ರೋ ರೈಲನ್ನು ತುಮಕೂರಿಗೆ ತರುವುದನ್ನು ನಾನು ಸ್ವಾಗತಿಸುತ್ತೇನೆ.ಈ ಯೋಜನೆ ಅನುಷ್ಠಾನಗೊಂಡರೆ ತುಂಬ ಒಳ್ಳೆಯದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಂಗಳೂರು ಉತ್ತರಕ್ಕೆ ವಾಸು ವಿರೋಧ
ತುಮಕೂರನ್ನು ಬೆಂಗಳೂರು ಉತ್ತರಕ್ಕೆ ಸೇರಿಸುವ ನಿರ್ಧಾರವನ್ನು ನಾನು ಒಪ್ಪಲ್ಲ. ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಹೆಸರು ಬದಲಾವಣೆ ಮಾಡುವುದಿಲ್ಲ ಅಂದರೆ ಸೇರ್ಪಡೆ ಹೇಗೆ ಬಂತು.
ಈ ಬಗ್ಗೆ ಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ. ಇಡೀ ತುಮಕೂರು ಜಿಲ್ಲೆಯ ಜನರು ತುಮಕೂರು ಹೆಸರು ಬದಲಾವಣೆ ಮಾಡೋಕೆ ಒಪ್ಪಲ್ಲ. ತುಮಕೂರು ಜಿಲ್ಲೆಯಾಗೇ ಉಳಿಯಬೇಕು ಎಂದು ಕಾಂಗ್ರೆಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.