ವೀರಭದ್ರ ಶಿವಾಚಾರ್ಯ ಸ್ವಾಮೀಜಿ 
ತುಮಕೂರು

21 ರಂದು ಸಿದ್ದರಬೆಟ್ಟದಲ್ಲಿ ಜನ ಜಾಗೃತಿ ಧರ್ಮ ಸಮಾರಂಭ

ಪ್ರಮುಖ ಮುಖ್ಯಾಂಶಗಳು

  • ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಗೆ ಸಿದ್ಧಶ್ರೀ ಪ್ರಶಸಿ
  • ಬಾಳೆಹೊನ್ನುರು ಖಾಸಾ ಶಾಖಾ ಮಠದ 20ನೇ ವಾರ್ಷಿಕೋತ್ಸವ
  • ಕೇಂದ್ರ ಸಚಿವ ವಿ.ಸೋಮಣ್ಣ, ಡಿಸಿಎಂ ಜಿ.ಪರಮೇಶ್ವರ ಭಾಗಿ
ತುಮಕೂರು: ಕೊರಟಗೆರೆ ತಾಲೂಕು ಸುಕ್ಷೇತ್ರ ಸಿದ್ಧರಬೆಟ್ಟದ ಬಾಳೆಹೊನ್ನುರು ಖಾಸಾ ಶಾಖಾ ಮಠದ 20ನೇ ವಾರ್ಷಿಕೋತ್ಸವದ ಅಂಗವಾಗಿ ಜೂ.21 ರಂದು ಸಾಮೂಹಿಕ ವಿವಾಹ, ಜನ ಜಾಗೃತಿ ಧರ್ಮ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ವಾರ್ಷಿಕೋತ್ಸವದ ಅಂಗವಾಗಿ ಜಗದ್ಗುರು ರೇಣುಕಾಚಾರ್ಯರ, ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ ಆಯೋಜಿಸಲಾಗಿದೆ. ಜತೆಗೆ ವಿವಿಧ ಸಮಾಜಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಈ ಬಾರಿ ಸಾಮೂಹಿಕ ವಿವಾಹದಲ್ಲಿ ಹಸಮಣೆ ಏರಲು 20 ಜೋಡಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಶ್ರೀಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವೀರೇಂದ್ರ ಹೆಗ್ಗಡೆಗೆ ಸಿದ್ಧಶ್ರೀ ಪ್ರಶಸ್ತಿ: ಅಂದು ಬೆಳಗ್ಗೆ 10ಕ್ಕೆ ರಂಭಾಪುರಿ ಪೀಠದ ಜಗದ್ಗುರು ಡಾ. ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಸಾನಿಧ್ಯದಲ್ಲಿ ಜನ ಜಾಗೃತಿ ಧರ್ಮ ಸಮಾರಂಭ ನಡೆಯಲಿದೆ. ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಎಡೆಯೂರು ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರ ಮಠದ ಡಾ.ಹನುಮಂತನಾಥ ಸ್ವಾಮೀಜಿ ಉಪಸ್ಥಿತರಿರುವರು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಈ ವೇಳೆ ಧರ್ಮಸ್ಥಳದ ಧಮಾರ್ಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಸಿದ್ದಶ್ರೀ ಪ್ರಶಸ್ತಿಯನ್ನು ಡಿಸಿಎಂ ಡಾ.ಜಿ.ಪರಮೇಶ್ವರ ಪ್ರದಾನ ಮಾಡುವರು. ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ , ಮಾಜಿ ಸಚಿವ ಕೆ.ಎನ್​. ರಾಜಣ್ಣ, ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ, ಶಾಸಕ ಜಿ.ಬಿ. ಜ್ಯೋತಿಗಣೇಶ್​ ಭಾಗವಹಿಸುವರು ಎಂದರು.
ಚಿಕ್ಕತೊಟ್ಲುಕೆರೆ ಅಟವಿ ಮಠದ ಅಟವಿ ಶಿವಲಿಂಗ ಸ್ವಾಮೀಜಿ ಪುಸ್ತಕ ದಾಸೋಹ ಉದ್ಘಾಟಿಸುವರು. ನಂತರ ಉಚಿತ ಸಾಮೂಹಿಕ ದೀಕ್ಷಾ ಸಮಾರಂಭ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ನಗರ ವೀರಶೈವ ಸಮಾಜಸೇವಾ ಸಮಿತಿ ಕಾರ್ಯದರ್ಶಿ ಶಶಿಧರನ್​, ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್​ ಅಧ್ಯಕ್ಷ ಟಿ.ಆರ್​. ಸದಾಶಿವಯ್ಯ, ಜಿಲ್ಲಾ ಆರ್ಯ ಈಡಿಗರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ, ಮುಖಂಡರಾದ ಮೋಹನ್​ಕುಮಾರ್​ ಪಟೇಲ್​, ಮಹೇಶ್​ಬಾಬು, ಕುಮಾರಸ್ವಾಮಿ, ರಾಮಲಿಂಗಯ್ಯ, ರುದ್ರೇಶ್​, ಸ್ವರೂಪ್​, ಮಂಜುಳ ಮೊದಲಾದವರು ಹಾಜರಿದ್ದರು.