Koratagere bypass road flooded
ಕೊರಟಗೆರೆ: ಕೊರಟಗೆರೆ&ಗೌರಿಬಿದನೂರು ಸಂಪರ್ಕ ಕಲ್ಪಿಸುವ ಪ್ರಮುಖ ಬೈಪಾಸ್ ರಸ್ತೆಯ ಅವ್ಯವಸ್ಥೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿಮಾರ್ಣಗೊಂಡಿರುವ ಈ ರಸ್ತೆ, ಮಳೆ ಬಂದಾಗ ಜಲಾವೃತ ಪ್ರದೇಶವಾಗಿ ಪರಿವರ್ತನೆಯಾಗುತ್ತಿದೆ.
ಶನಿವಾರ ಬಿದ್ದಂತ ಮಳೆಗೆ ರಸ್ತೆಯೆಲ್ಲ ಜಲಾವೃತವಾಗಿ ಸಂಚಾರಕ್ಕೆ ತೊಂದರೆ ಎದುರಾಗಿದೆ. ರಸ್ತೆಯ ಕೆಲವು ಭಾಗಗಳು ತಗ್ಗು ಪ್ರದೇಶದಲ್ಲಿದ್ದು, ಮಳೆ ನೀರು ಹರಿದು ಹೋಗಲು ಅಗತ್ಯವಿರುವ ಚರಂಡಿ, ಕಲ್ವರ್ಟ್ ಅಥವಾ ಸೇತುವೆ ನಿಮಾರ್ಣ ಮಾಡದ ಕಾರಣ ಮಳೆ ನೀರು ರಸ್ತೆಯ ಮೇಲೆಯೇ ನಿಂತುಕೊಳ್ಳುತ್ತಿದೆ. ಪರಿಣಾಮವಾಗಿ ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ನೀರಿನಿಂದ ಆವರಿಸಿಕೊಂಡು, ವಾಹನ ಸವಾರರು ಅಪಾಯದ ನಡುವೆ ಸಂಚರಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.
ವಿಶೇಷವಾಗಿ ರಾತ್ರಿ ವೇಳೆ ರಸ್ತೆ ಜಲಾವೃತಗೊಂಡಿರುವುದು ಸ್ಪಷ್ಟಗಿ ಗೋಚರಿಸದೇ ಇರುವುದರಿಂದ ಅಪಘಾತ ಸಂಭವಿಸುವ ಭೀತಿ ಹೆಚ್ಚಾಗಿದೆ. ದ್ವಿಚಕ್ರ ವಾಹನ ಸವಾರರು, ಶಾಲಾ-&ಕಾಲೇಜು ವಿದ್ಯಾರ್ಥಿಗಳು ಹಾಗೂ ರೈತರು ಪ್ರತಿನಿತ್ಯ ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಮಳೆ ಹೆಚ್ಚಾದ ಸಂದರ್ಭದಲ್ಲಿ ಕೆಲವೊಮ್ಮೆ ರಸ್ತೆ ಸಂಪೂರ್ಣ ಮುಳುಗುವ ಪರಿಸ್ಥಿತಿ ನಿಮಾರ್ಣವಾಗುತ್ತಿದ್ದು, ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ.
ಸ್ಥಳಿಯ ನಿವಾಸಿಗಳು ಹಲವು ಬಾರಿ ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದಿದ್ದರೂ ಯಾವುದೇ ಶಾಶ್ವತ ಪರಿಹಾರ ಕಂಡುಬಂದಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆ ನಿಮಾರ್ಣಗೊಂಡಿದ್ದರೂ, ಮೂಲ ತಾಂತ್ರಿಕ ಅಂಶಗಳನ್ನು ಕಡೆಗಣಿಸಿರುವುದು ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ರಸ್ತೆ ನಿರ್ವಹಣಾ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.