ಹೇಮಾವತಿ ಲಿಂಕ್​ ಕೆನಾಲ್​ ವಿರೋಧಿಸಿ ನಡೆದ ಹೋರಾಟ 
ತುಮಕೂರು

ಹೇಮಾವತಿ ಎಕ್ಸ್​ಪ್ರೆಸ್​ ಲಿಂಕ್ ಕೆನಾಲ್​ಗೆ ಕೆ.ಎನ್.ರಾಜಣ್ಣ ವಿರೋಧ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯ ಹಿತಕಾಯುವ ಭರವಸೆ ನೀಡಿದ ಕಾಂಗ್ರೆಸ್​ ಶಾಸಕ
  • ಹೇಮಾವತಿ ಲಿಂಕ್​ ಕೆನಾಲ್​ ಹೋರಾಟಕ್ಕೆ ಬಲ
  • ಮಾಧುಸ್ವಾಮಿ ಹೋರಾಟ ಮಾಡಿದರೆ ಬೆಂಬಲ ಭರವಸೆ
ತುಮಕೂರು: ಜಿಲ್ಲೆಯ ರೈತರ ಪಾಲಿಗೆ ಮರಣ ಶಾಸನವಾಗಲಿರುವ ಹೇಮಾವತಿ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ಯೋಜನೆಗೆ ನನ್ನ ವಿರೋಧವಿದೆ ಎಂದು ಶಾಸಕ ಕೆ.ಎನ್​.ರಾಜಣ್ಣ ಘೋಷಿಸಿದ್ದು, ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ.
ಗುಬ್ಬಿ ತಾಲೂಕಿನಿಂದ ಬೆಂಗಳೂರು ದಣ ಜಿಲ್ಲೆಗೆ ಬೃಹತ್​ ಪೈಪ್​ಲೈನ್​ ಮೂಲಕ ಅವೈಜ್ಞಾನಿಕವಾಗಿ ನೀರು ತೆಗೆದುಕೊಂಡು ಹೋಗಲಾಗುತ್ತಿದ್ದು, ತುಮಕೂರು ಜಿಲ್ಲೆಯ ಕೆರೆಗಳಿಗೆ ನೀರು ಹರಿಸಲು ತೊಂದರೆಯಾಗಲಿದೆ ಎಂದು ರೈತರು ಆತಂಕದಲ್ಲಿರುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಯೋಜನೆಯ ಪರವಾಗಿರುವುದು ಆಘಾತ ತಂದಿದೆ. ಈ ಬಗ್ಗೆ ಜಿಲ್ಲೆಯೆಲ್ಲೆಡೆ ಚರ್ಚೆ ನಡೆಯುತ್ತಿರುವ ನಡುವೆಯೇ ಮಾಜಿ ಸಚಿವರೂ ಆದ ಮಧುಗಿರಿ ಶಾಸಕ ಕೆ.ಎನ್​.ರಾಜಣ್ಣ ಯೋಜನೆಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್​ ಸರ್ಕಾರಕ್ಕೆ ಟಾಂಗ್​ ನೀಡಿದ್ದಾರೆ. 
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ ಕೆ.ಎನ್​.ರಾಜಣ್ಣ, ಜಿಲ್ಲೆಯ ಹಿತಾಸಕ್ತಿಗೆ ನಡೆಯುವ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಘೋಷಿಸಿದ್ದಾರೆ. ಮೂಡಿಗೆರೆ, ಸಕಲೇಶಪುರ ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ನೀರಿಗೆ ತೊಂದರೆಯಾಗದು ಎಂಬ ವಿಶ್ವಾಸವಿದೆ. ಕಬಿನಿ, ಕೆಆರ್​ಎಸ್​ ಕೂಡ ತುಂಬುವ ಸಾಧ್ಯತೆಯಿದ್ದು, ತಮಿಳುನಾಡಿಗೂ ನೀರು ಹರಿಸಬಹುದು. ಜಿಲ್ಲೆಯ ಜನರು ಹೇಮಾವತಿ ನೀರು ಅವಲಂಬಿಸಿದ್ದು ನೀರಿಗೆ ತೊಂದರೆಯಾಗದು ಎಂದರು.
ಜಿಲ್ಲೆಯ ಜನರ ಜೀವನಾಡಿ ಎನ್ನಿಸಿಕೊಂಡಿರುವ ಹೇಮಾವತಿ ಪರವಾಗಿ ನಮ್ಮ ನಿಲುವು ಇದ್ದೇ ಇರುತ್ತದೆ. ಎಕ್ಸ್​ಪ್ರೆಸ್​ ಕೆನಾಲ್​ ವಿರೋಧಿಸಿರುವ ನಾನು ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಹಿಂದೆಯೂ ವಿರೋಧವಿದ್ದೆ, ಈಗಲೂ ವಿರೋಧ ಮಾಡುತ್ತೇನೆ. ಜಿಲ್ಲೆಯ ಜನರ ಪರವಾಗಿ ನಡೆಯುವ ಹೋರಾಟದಲ್ಲಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಸಹಿತ ಯಾರೇ ಮುಂದೆ ಬಂದರೂ ಅವರ ಜತೆ ಕೈ ಜೋಡಿಸುತ್ತೇನೆ.
  ಕೆ.ಎನ್​.ರಾಜಣ್ಣ, ಕಾಂಗ್ರೆಸ್​ ಶಾಸಕ