ಸಂಗ್ರಹ ಚಿತ್ರ 
ತುಮಕೂರು

ದಯಾಮರಣಕ್ಕೆ ಕೋರಿ ಮನವಿ

ಪ್ರಮುಖ ಮುಖ್ಯಾಂಶಗಳು

  • ಕೆಐಎಡಿಬಿ ಅಧಿಕಾರಿಗಳ ಕಿರಕುಳ
  • ಮನನೊಂದ ಮಾಜಿ ತಾಪಂ ಸದಸ್ಯೆ ಕುಟುಂಬ
  • ಪ್ರಭಾವಿಗಳ ಒತ್ತಡಕ್ಕೆ ಮಣಿದ ಕೆಐಎಡಿಬಿ
ತುಮಕೂರು: ಜೀವನಕ್ಕೆ ಆಧಾರವಾದ ಕೃಷಿ ಜಮೀನನ್ನು ಕೆಐಎಡಿಬಿ ಭೂಸ್ವಾಧಿನ ಪಡಿಸಿಕೊಂಡಿರುವ ಕೆಐಎಡಿಬಿ ಅಧಿಕಾರಿಗಳು ಪರಿಹಾರ ನೀಡದೆ ಕಿರುಕುಳ ನೀಡುತ್ತಿರುವುದರಿಂದ ಮನನೊಂದು ತುಮಕೂರು ತಾಲೂಕು ನೆಲಹಾಳ್​ ಗ್ರಾಮದ ಮಾಜಿ ತಾಪಂ ಸದಸ್ಯೆ ಆರ್​.ಕವಿತಾರಮೇಶ್​ ದಯಾಮರಣ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಬೆಳವಣಿಗೆ ನಡೆದಿದೆ.
ಬೆಳ್ಳಾವಿ ಹೋಬಳಿ ನೆಲಹಾಳ್​ ಗ್ರಾಮದ ಸರ್ವೇ ನಂ. 63/1 ರ 2 ಎಕರೆ ಭೂಮಿ ಮತ್ತು ಗೌಡನಹಳ್ಳಿಯ ಸ.ನಂ. 44 ರ 2 ಎಕರೆ 31 ಗುಂಟೆ ಭೂಮಿಯನ್ನು ತಮ್ಮ ಪತಿ ರಮೇಶ್​ ಈ ಹಿಂದೆ ಖರೀದಿಸಿದ್ದು, ಅದನ್ನು ಕೆಐಎಡಿಬಿಯು ಭೂಸ್ವಾಧಿನ ಪಡಿಸಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಭೂಮಾಲೀಕರಿಗೆ ಕೆಐಎಡಿಬಿ ನಿಯಮಾನುಸಾರ ಪರಿಹಾರ ಹಣವನ್ನು ಕೊಡಬೇಕು. ಇದಕ್ಕೆ ಅಗತ್ಯವಿರುವ ಎಲ್ಲ ಮೂಲ ದಾಖಲಾತಿಗಳನ್ನು ಸಕಾಲಕ್ಕೆ ಒದಗಿಸಿದ್ದರು ಕೆಐಎಡಿಬಿ ಭೂಸ್ವಾಧಿನಾಧಿಕಾರಿಗಳು ಕುಂಟುನೆಪಗಳನ್ನು ಹೇಳುತ್ತಾ ನಮಗೆ ನೀಡಬೇಕಾದ ಪರಿಹಾರ ಹಣವನ್ನು ನೀಡದೆ ದುರುದ್ದೇಶದಿಂದ ಅಲೆದಾಡಿಸುತ್ತಿದ್ದು ಮಾನಸಿಕವಾಗಿ ಕಿರುಕುಳ ಕೊಡುತ್ತಿರುವುದಾಗಿ ಪತ್ರದಲ್ಲಿ ದೂರಿದ್ದಾರೆ.
ಯಾವುದೋ ನಕಲಿ ತಕರಾರುಗಳನ್ನು ಮುಂದಿಟ್ಟುಕೊಂಡು ಕಾಲಹರಣ ಮಾಡುತ್ತಿದ್ದಾರೆ. ಪ್ರಭಾವಿಗಳ ಮಾತು ಕೇಳಿಕೊಂಡು ತಕರಾರು ಅರ್ಜಿಗಳ ವಿಚಾರಣೆ ಮಾಡದೆ ದಿನ ದೂಡುತ್ತಿದ್ದಾರೆ. ಅಲ್ಲದೆ, ಮಧ್ಯವರ್ತಿಗಳನ್ನು ಮುಂದಿಟ್ಟುಕೊಂಡು ಹಣದ ಬೇಡಿಕೆ ಮುಂದಿಟ್ಟು ದಂಧೆ ನಡೆಸುತ್ತಿರುವ ಅಧಿಕಾರಿಗಳು ಯಾರು ಹಣ ಕೊಡುತ್ತಾರೋ ಅಂತಹವರಿಗೆ ಬೇಗ ಪರಿಹಾರ ಮೊತ್ತ ಕೊಡುತ್ತಿದ್ದಾರೆ. ಸಂತ್ರಸ್ತರಿಗೆ ಪರಿಹಾರ ನೀಡದೆ ಅಕ್ರಮ ಮತ್ತು ಭ್ರಷ್ಟಾಚಾರ ನಡೆಯುತ್ತಿದ್ದು ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.
ನಮ್ಮ ಕುಟುಂಬದ ಜೀವನ ನಿರ್ವಹಣೆಗೆ ಆಧಾರವಾದ ಕೃಷಿ ಭೂಮಿಯನ್ನು ಈಗಾಗಲೇ ಭೂಸ್ವಾಧಿನಪಡಿಸಿಕೊಂಡಿರುವುದರಿಂದ ಆ ಭೂಮಿಯಲ್ಲಿ ಕೃಷಿ ಚಟುವಟಿಕೆ ಮಾಡಲಾಗದೆ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದ್ದೇವೆ. ಬದುಕು ಸಾಗಿಸುವುದೇ ದುಸ್ತರವೆನಿಸಿದ್ದು ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೂ ತೊಡಕಾಗುತ್ತಿದೆ. ಅಧಿಕಾರಿಗಳ ಕಿರುಕುಳದಿಂದ ಜೀವನವೇ ಸಾಕೆನಿಸಿದ್ದು ತಮ್ಮ ಕುಟುಂಬಕ್ಕೆ ದಯಾಮರಣಕ್ಕೆ ಅನುಮತಿಯಾದರೂ ಕೊಟ್ಟುಬಿಡುವಂತೆ ಜಿಲ್ಲಾಧಿಕಾರಿಗಳಿಗೆ ಕವಿತಾರಮೇಶ್​ ಮನವಿ ಮಾಡಿದ್ದಾರೆ.