ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕನ್ನಡಪರ ಸಂಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟಿಸಲಾಯಿತು.
- ತಟ್ಟದ ಬಂದ್ ಬಿಸಿ
- ಎಂದಿನಂತಿತ್ತು ಬಸ್, ವಾಹನ ಸಂಚಾರ
- ಪ್ರತಿಭಟನೆಗಷ್ಟೇ ಸೀಮಿತ
ತುಮಕೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಕರೆನೀಡಿರುವ ಅಖಂಡ ಕರ್ನಾಟಕ ಬಂದ್ ಗುರುವಾರ ಪ್ರತಿಭಟನೆಗಷ್ಟೇ ಸೀಮಿತಗೊಂಡಿತ್ತು. ಬಂದ್ಗೆ ಕನ್ನಡ ಪರ ಸಂಘಟನೆಗಳ ಒಕ್ಕೂಟ ಬೆಂಬಲ ನೀಡದ ಹಿನ್ನೆಲೆ ಜನಜೀವನ ಎಂದಿನಂತಿತ್ತು. ಶಾಲಾ-ಕಾಲೇಜುಗಳು, ಖಾಸಗಿ, ಸಾರಿಗೆ ವಾಹನಗಳ ಸಂಚಾರ, ಹೋಟೆಲ್, ಅಂಗಡಿ ಮುಗ್ಗಟ್ಟುಗಳು ಸೇರಿದಂತೆ ಯಾವುದಕ್ಕು ಬಂದ್ ಬಿಸಿ ತಟ್ಟಲಿಲ್ಲ.
ಮೇಕೆದಾಟು ಯೋಜನೆ ಅನುಷ್ಠಾನ, ಕನ್ನಡ ಶಾಲೆಗಳಿಗೆ ಹೆಚ್ಚಿನ ಅನುದಾನ, ಉದ್ದಿಮೆ, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಕನ್ನಡಿಗರಿಗೆ ಉದ್ಯೋಗ, ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ಮ ವಸಂತನರಸಾಪುರ, ಎಚ್ಎಎಲ್ ಹೆಲಿಕ್ಯಾಪ್ಟರ್ ಟಕಕ್ಕೆ ನಮ್ಮ ರೈತರು ಜಮೀನು ಕೊಟ್ಟಿದ್ದಾರೆ. ಆದರೆ, ಇಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಟ್ಟಿಲ್ಲ, ಪರಭಾಷಿಗರೇ ತುಂಬಿಕೊಂಡಿದ್ದಾರೆ. ಕನ್ನಡಿಗರಿಗೆ ಆದ್ಯತೆ ನೀಡಬೇಕೆಂಬ ಸರ್ಕಾರದ ಆದೇಶವಿದ್ದರು ಅದರ ಪಾಲನೆ ಆಗುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಲ್ಲು ಕನ್ನಡಿಗರ ಕೊರತೆ ಇದೆ ಎಂದರು.
ಮೇಕೆದಾಟು ಯೋಜನೆ ಅನುಷ್ಠಾನ ಆಗಬೇಕು, ಕನ್ನಡ ರಾಜ್ಯೋತ್ಸವದಂದು ಕಪ್ಪು ಬಾವುಟ ಪ್ರದರ್ಶಿಸಿ ಕನ್ನಡಿಗರಿಗೆ ಅವಮಾನ ಮಾಡುವ ಬೆಳಗಾವಿಯ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು. ಸರ್ಕಾರದ ಆದೇಶದಂತೆ ಕೈಗಾರಿಕೆಗಳಲ್ಲಿ ಶೇಕಡ 80ರಷ್ಟು ಕನ್ನಡಿಗರಿಗೆ ಉದ್ಯೋಗ ನೀಡಬೇಕು. ನಾಮಫಲಕಗಳಲ್ಲಿ ಶೇಡಕ 60ರಷ್ಟು ಕನ್ನಡ ಅಕ್ಷರಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕನ್ನಡ ಮಾಧ್ಯಮ ಶಾಲೆಗಳಿಗೆ ಹೆಚ್ಚು ಅನುದಾನ ನೀಡಬೇಕು, ಕನ್ನಡ ಶಾಲೆ ಮುಚ್ಚಕೂಡದು. ಬಿಡದಿ ಟೌನ್ಶಿಪ್ ರದ್ದು ಮಾಡಬೇಕು, ಅಲ್ಲಿನ ರೈತರ ಮೇಲಿನ ಕೇಸುಗಳನ್ನು ವಾಪಸ್ ಪಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯ ಮಾತನಾಡಿ, ವರ್ಷದಿಂದವರ್ಷಕ್ಕೆ ಕನ್ನಡ ಶಾಲೆಗಳು ಮುಚ್ಚಿಹೋಗುತ್ತಿವೆ. ಶಾಲೆಗಳನ್ನು ಉಳಿಸಿ ಬೆಳೆಸುವ ಬಗ್ಗೆ ಸರ್ಕಾರ ಕಾಳಜಿವಹಿಸುತ್ತಿಲ್ಲ. ಐಎಎಸ್, ಐಪಿಎಸ್ ಅಧಿಕಾರಿಗಳು, ನ್ಯಾಯಾಧೀಶರು, ರಾಜಕಾರಣಿಗಳು, ಸರ್ಕಾರಿ ನೌಕರರು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಮಾದರಿಯಾಗಬೇಕು. ಅದರೊಂದಿಗೆ ಕನ್ನಡ ಶಾಲೆಗಳು ತಾನಾಗೇ ಬೆಳವಣಿಗೆಯಾಗುತ್ತವೆ ಎಂದರು.
ಕಾರ್ಖಾನೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಶೇ.60ರಷ್ಟು ಉದ್ಯೋಗ ಮೀಸಲಿಡಬೇಕು. ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಿ ಕನ್ನಡಿಗರು ಉದ್ಯೋಗ ಪಡೆಯಲು ಅನುವು ಮಾಡಿಕೊಡಬೇಕು ಎಂದು ಕರ್ನಾಟಕ ಸಂಸತಿ ರಕ್ಷಣಾ ವೇದಿಕೆ ಅಧ್ಯಕ್ಷ ಹೊಸಕೋಟೆ ನಟರಾಜ್ ಒತ್ತಾಯಿಸಿದರು.
ಕನ್ನಡ ಮತ್ತು ಸಂಸ್ಕತಿ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜು ಮಾತನಾಡಿ, ಕನ್ನಡಿಗರ ಉದ್ಯೋಗಕ್ಕೆ ಮನ್ನಣೆ ನೀಡಲು ಸರ್ಕಾರ ಬದ್ಧವಾಗಿರಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಕಡೆಗಣಿಸದೆ ಆದ್ಯತೆಮೇಲೆ ಅಭಿವೃದ್ಧಿ ಮಾಡಿ ಪೋಷಕಸ್ನೇಹಿಗೊಳಿಸಬೇಕು. ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ಕನ್ನಡ ಸೇನೆ ಗೌರವಾಧ್ಯಕ್ಷ ಆರ್.ಎ. ವೆಂಕಟಾಚಲ, ನಗರಾಧ್ಯಕ್ಷ ಜೆ.ವಿಠಲ್, ರೈತ ಸಂಘದ ಬಸವರಾಜು, ಅಖಿಲ ಕರ್ನಾಟಕ ಕಾರ್ಮಿಕರ ಪ್ರಜಾವೇದಿಕೆ ಅಧ್ಯಕ್ಷ ಮೀಸೆ ಸತೀಶ್, ಜಿಲ್ಲಾ ಕಾರ್ಯದರ್ಶಿ ಪುರುಷೋತ್ತಮ್, ವಿವಿಧ ಸಂಘಟನೆಗಳ ಮುಖಂಡರಾದ ಮಲ್ಲಸಂದ್ರ ಶಿವಣ್ಣ, ಶಬ್ಬೀರ್ ಅಹ್ಮದ್, ಮೀಸೆ ಸತೀಶ್, ನಟರಾಜಶೆಟ್ಟಿ, ದಿಬ್ಬೂರು ಗಿರೀಶ್, ಮಧು, ಬೆಸ್ಟೆಕ್ಸ್ ರಾಮರಾಜ್, ಮಾರುತಿ, ಪ್ರಸನ್ನಕುಮಾರ್, ರಫಿ ಅಹ್ಮದ್, ಸುಕನ್ಯಾ, ಕೆಎಸ್ಆರ್ಟಿಸಿ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅದ್ಯಕ್ಷ ಭೀಮಾನಾಯ್ಕ, ಉಮೇಶ್ಕುಮಾರ್, ವಿ.ಡಿ. ರಾಯ್, ರಂಗಸ್ವಾಮಿ ಮತ್ತಿತರರು ಭಾಗವಹಿಸಿದ್ದರು.