ತುಮಕೂರಿನಲ್ಲಿ ಜನವರಿಯಲ್ಲಿ ನಡೆಯಲಿರುವ ರಾಜ್ಯ ಒಲಂಪಿಕ್ಸ್​ ಕ್ರೀಡಾಕೂಟ ಪೂರ್ವಸಿದ್ಧತೆ ಹಿನ್ನೆಲೆ ಕೆಒಎ ತಂಡು ಮಹಾತ್ಮಗಾಂಧಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಶುಭಕಲ್ಯಾಣ್​, ಡಾ.ಎನ್​.ತಿಪ್ಪೇಸ್ವಾಮಿ, ಯೋಗಾನಂದ್​, ಅನಂತರಾಜು, ಆರ್​.ಪ್ರಕಾಶ್​, ರೋಹಿತ್​ ಗಂಗಾಧರ್​, ಶಿವಪ್ರಸಾದ್​ ಮತ್ತಿತರರು ಇದ್ದರು.  
ತುಮಕೂರು

ಜ.16 ರಿಂದ 22 ರವರೆಗೆ ರಾಜ್ಯ ಒಲಂಪಿಕ್​ ಕ್ರೀಡಾಕೂಟ

ಪ್ರಮುಖ ಮುಖ್ಯಾಂಶಗಳು

  • ಸಿಎಂರಿಂದ ಉದ್ಘಾಟನೆ
  • ಕೆಒಎ ತಂಡದಿಂದ ಪರಿಶೀಲನೆ
  • ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್​
ತುಮಕೂರು: ಕರ್ನಾಟಕ ರಾಜ್ಯ ಒಲಂಪಿಕ್​ ಕ್ರೀಡಾಕೂಟದ ಆತಿಥ್ಯವನ್ನು ತುಮಕೂರುವಹಿಸಲಿದ್ದು ಜ.16 ರಿಂದ 22 ರವರೆಗೆ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್​ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಪ್ರತಿ ವರ್ಷ ರಾಜ್ಯದ ಒಂದೊಂದು ಜಿಲ್ಲಾಕೇಂದ್ರದಲ್ಲಿ ಕರ್ನಾಟಕ ಒಲಂಪಿಕ್​ ಕ್ರೀಡಾಕೂಟಗಳು ನಡೆಯಲಿದ್ದು ಪ್ರಸಕ್ತ ವರ್ಷ ತುಮಕೂರಿನಲ್ಲಿ ಆಯೋಜಿಸಲಾಗುತ್ತಿದೆ. 27 ಕ್ರೀಡೆಗಳು ತುಮಕೂರಿನ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿದ್ದು ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಲಾಗಿದೆ. ಕ್ರೀಡಾಕೂಟದ ಯಶಸ್ಸಿಗೆ ಎಲ್ಲರೂ ಸಹಕರಿಸುವಂತೆ ಕೆಒಎ ಪ್ರಧಾನ ಕಾರ್ಯದರ್ಶಿ ಅನಂತರಾಜ್​ ಹೇಳಿದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೇ ತುಮಕೂರು ಜಿಲ್ಲಾಡಳಿತದಿಂದ ವಿವಿಧ 11 ಸಮಿತಿಗಳನ್ನು ರಚಿಸಿದ್ದು ಸಮಿತಿಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿವೆ. ರಾಜ್ಯದ ಮೂಲೆ ಮೂಲೆಗಳಿಂದ 9000ಕ್ಕೂ ಹೆಚ್ಚು ಕ್ರೀಡಾಪಟುಗಳು ತುಮಕೂರಿಗೆ ಆಗಮಿಸಲಿದ್ದು ಅವರಿಗೆ ವಸತಿ, ಊಟ, ಸಾರಿಗೆ ಸೇರಿದಂತೆ ವಿವಿಧ ಮೂಲ ಸೌಲಭ್ಯಗಳನ್ನು ಒದಗಿಸಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜವಾಬ್ದಾರಿ ವಹಿಸಿಕೊಂಡಿರುವ ಸಮಿತಿ ಕ್ರೀಡಾಕೂಟ ಯಶಸ್ಸಿಗೆ ಶ್ರಮಿಸಬೇಕು ಎಂದರು.
ಸಿಎಂ ಚಾಲನೆ: ಜ.16ರಂದು ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡುವರು. ಸಮಾರೋಪ ಸಮಾರಂಭಕ್ಕೆ ರಾಜ್ಯಪಾಲ ಥಾವರಚಂದ್​ ಗೆಹ್ಲೋಟ್​ ಅವರನ್ನು ಆಹ್ವಾನಿಸಲಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳೂ ಈ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಅಲ್ಲದೆ, ಗಣ್ಯರನ್ನು ಆಹ್ವಾನಿಸುವುದರಲ್ಲಿ ಶಿಷ್ಠಾಚಾರ ಪಾಲಿಸುವಂತೆ ಸಲಹೆ ನೀಡಿದರು.
ಸಭೆಯ ನಂತರ ಮಹಾತ್ಮಗಾಂಧಿ ಕ್ರೀಡಾಂಗಣ ಸೇರಿದಂತೆ ಕ್ರೀಡಾಂಗಣಗಳು, ವಸತಿ ವ್ಯವಸ್ಥೆ ಕಲ್ಪಿಸುತ್ತಿರುವ ವಿವಿಧ ಪ್ರದೇಶಗಳು ಹಾಗೂ ಹೋಟೆಲ್​ ಇತರೆಡೆ ಕೆಒಎ ಸಂಸ್ಥೆಯ ತಂಡ ಭೇಟಿ ನೀಡಿ ವಸತಿ ಸ್ಥಳಗಳಲ್ಲಿ ಸ್ವಚ್ಛತೆ, ಸುರಕ್ಷತೆ ಮತ್ತು ಇತರೆ ಸೌಕರ್ಯಗಳು ಸಮರ್ಪಕವಾಗಿರುವುದನ್ನು ಖಚಿತಪಡಿಸಿಕೊಂಡಿತು.
ಜಿಲ್ಲಾಧಿಕಾರಿ ಶುಭಕಲ್ಯಾಣ್​, ಅಪರ ಜಿಲ್ಲಾಧಿಕಾರಿ ಡಾ.ಎನ್​.ತಿಪ್ಪೇಸ್ವಾಮಿ, ಪಾಲಿಕೆ ಆಯುಕ್ತ ಯೋಗಾನಂದ್​, ಯುವ ಸಬಲೀಕರಣ ಮತ್ತು ಕ್ರೀಡೆ ಸಹಾಯಕ ನಿರ್ದೇಶಕ ರೋಹಿತ್​ ಗಂಗಾಧರ್​, ಪಿಯುಡಿಡಿ ಡಾ.ಬಾಲಗುರುಮೂರ್ತಿ, ಕೆಒಎ ಜಂಟಿ ಕಾರ್ಯದರ್ಶಿ ಆರ್​.ಪ್ರಕಾಶ್​, ಅಥ್ಲೆಟಿಕ್​ ಕೋಚ್​ ಶಿವಪ್ರಸಾದ್​ ಮತ್ತಿತರರು ಉಪಸ್ಥಿತರಿದ್ದರು.