- ರಾಜ್ಯ ಮುಖ್ಯಕಾರ್ಯದರ್ಶಿಗೆ ನೂರು ಪತ್ರ
- ಏ.1ರಿಂದ ಕೆಲಸ ಸ್ಥಗಿತ
- ಸಿಎಂ ಧೋರಣೆ ಖಂಡನೆ
ತುಮಕೂರು: ರಾಜ್ಯದಲ್ಲಿ ಗುತ್ತಿಗೆದಾರರಿಂದ ಕಾಮಗಾರಿಗೆ ಇಂತಿಷ್ಟು ಕಮೀಷನ್ ಪಡೆಯುವುದು ಹಿಂದಿನಿಂದಲು ನಡೆದುಕೊಂಡುಬಂದಿದೆ. ಪರ್ಸೆಂಟೇಜ್ ಹಿಂದಿನ ಕಾಲದಲ್ಲಿಯು ಇದೆ, ಈಗಲೂ ಇದೆ, ಮುಂದೆಯೂ ಇರುತ್ತದೆ. ಆದರೆ, ಈ ಹಿಂದಿನ ಸರ್ಕಾರಕ್ಕೆ ಹೋಲಿಕೆ ಮಾಡಿದರೆ ಈಗಿನ ಸರ್ಕಾರದಲ್ಲಿ ಹೆಚ್ಚಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಬಹಿರಂಗ ಪಡಿಸಿದರು.
ಸರ್ಕಾರ ಗುತ್ತಿಗೆದಾರರಿಗೆ ನೀಡಬೇಕಾಗಿರುವ ಬಾಕಿ ಕುರಿತು ರಾಜ್ಯ ಮುಖ್ಯಕಾರ್ಯದರ್ಶಿ ಅವರಿಗೆ 100 ಪತ್ರ ಬರೆಯಲಾಗಿದೆ. ಆದರೆ, ಯಾವುದಕ್ಕೂ ಸ್ಪಂದನೆ ಇಲ್ಲ. ಮುಖ್ಯಮಂತ್ರಿಗಳು ಕಾಯಿರಿ ಎಂಬ ಉತ್ತರದ ಜತೆಗೆ, ಹಿಂದಿನ ಸರ್ಕಾರದ ಬಾಕಿ ಎಂಬ ಸಬೂಬು ಹೇಳುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ನಮ್ಮ ಪರವಾಗಿ ಮಾತನಾಡುತಿದ್ದ ಸಿದ್ದರಾಮಯ್ಯ, ಈಗ ಮಾತ್ರ ಹಾರಿಕೆಯ ಉತ್ತರ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಸರ್ಕಾರದ ಈ ಧೋರಣೆ ಹೀಗೆಯೇ ಮುಂದುವರೆದರೆ ಏ.1 ರಿಂದ ಇಡೀ ರಾಜ್ಯದಲ್ಲಿ ಎಲ್ಲಾ ಗುತ್ತಿಗೆದಾರರು ತಮ್ಮ ಕೆಲಸ ಸ್ಥಗಿತಗೊಳಿಸಿ,ಅರ್ನಿಧಿಷ್ಟಾವಧಿ ಮುಷ್ಕರ ನಡೆಸುವುದು ಅನಿವಾರ್ಯ ಎಂದು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.