ಕರ್ನಾಟಕ ಸ್ಟೇಟ್​ ಕಂಟ್ರಾಕ್ಟರ್​ ಅಸೋಸಿಯೇಷನ್​ ಅಧ್ಯಕ್ಷ ಆರ್​.ಮಂಜುನಾಥ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 
ತುಮಕೂರು

38 ಸಾವಿರ ಕೋಟಿ ಗುತ್ತಿಗೆ ಬಾಕಿ

ಪ್ರಮುಖ ಮುಖ್ಯಾಂಶಗಳು

  • ಕೈ ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರು
  • ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್​ ಆಕ್ರೋಶ
  • 16 ಗುತ್ತಿಗೆದಾರರು ಸಾವಿಗೆ ಶರಣು
ತುಮಕೂರು: ಸರ್ಕಾರದ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ 38 ಸಾವಿರ ಕೋಟಿ ರೂ.,ಗಳ ಬಾಕಿ ಬರಬೇಕಿದ್ದು ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಸಿಡಿದೆದ್ದಿದೆ. ಬಾಕಿ ಬಿಡುಗಡೆ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಮಾ,6 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್​) ಬೃಹತ್​ ಪ್ರತಿಭಟನಾಧರಣಿ ಹಮ್ಮಿಕೊಂಡಿರುವುದಾಗಿ ಕರ್ನಾಟಕ ಸ್ಟೇಟ್​ ಕಂಟ್ರಾಕ್ಟರ್​ ಅಸೋಸಿಯೇಷನ್​ ಅಧ್ಯಕ್ಷ ಆರ್​.ಮಂಜುನಾಥ್​ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರ ಬಾಕಿ ಬಿಲ್​ ಪಾವತಿಸದ ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯಿಂದ ಈವರೆಗೆ 16 ಗುತ್ತಿಗೆದಾರರುಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲವರು ಸಾಲಗಾರರಿಗೆ ಹೆದರಿ ತಲೆಮೆರಸಿಕೊಂಡು ಓಡಾಡುತ್ತಿದ್ದಾರೆ. ಮನೆ, ಜಮೀನು, ಒಡವೆ ವಸ್ತ್ರ ಅಡವಿಟ್ಟು ಹಣತಂದು ಹಾಕಿ ಮಾಡಿದ ಕಾಮಗಾರಿಗಳ ಬಿಲ್​ ಬಾಕಿ ಇದೆ. ಸರ್ಕಾರದ ಧೋರಣೆ ಇದೇರೀತಿ ಮುಂದುವರೆದರೆ ಮತ್ತಷ್ಟು ಗುತ್ತಿಗೆದಾರರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಎಂದರು.
ಗುತ್ತಿಗೆದಾರರಿಗೆ ಬರಬೇಕಿರುವ ಬಾಕಿ ಕುರಿತಂತೆ ಹಲವು ಬಾರಿ ಹಣಕಾಸು ಇಲಾಖೆ ಜವಾಬ್ದಾರಿ ಹೊತ್ತಿರುವ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಪ್ರಯೋಜವಾಗಿಲ್ಲ. ಕನಿಷ್ಠ ಸೌರ್ಜನ್ಯಕ್ಕೂ ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿಲ್ಲ. 38 ಸಾವಿರಕೋಟಿ ಬಾಕಿಯ ಜತೆಗೆ, ಜಿಎಸ್ಟಿ ಸರಳೀಕರಣ,ವ್ಯಾಟ್​, ಪ್ಯಾಕೇಜ್​ಗುತ್ತಿಗೆ ವಿರೋಧಿಸಿ ರಾಜ್ಯದಲ್ಲಿರುವ 1.50 ಲಕ್ಷ ಗುತ್ತಿಗೆದಾರರು ಒಗ್ಗೂಡಿ ಸರ್ಕಾರದ ಮೇಲೆ ಒತ್ತಡ ಹೇರಲು ಈ ಹೋರಾಟ ರೂಪಿಸಲಾಗಿದೆ ಎಂದು ಮಂಜುನಾಥ್​ ತಿಳಿಸಿದರು.
ಗುತ್ತಿಗೆದಾರರಿಗೆ ಕಳೆದ ಮೂರು ವರ್ಷಗಳಿಂದ ಲೋಕೋಪಯೋಗಿ ಇಲಾಖೆಯಿಂದ 8380 ಕೋಟಿ, ನೀರಾವರಿ ಇಲಾಖೆಯಿಂದ 13 ಸಾವಿರ ಕೋಟಿ, ಪಂಚಾಯತ್​ ರಾಜ್​ಇಲಾಖೆಯಿಂದ 3800 ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ 3000 ಕೋಟಿ, ವಸತಿ ಇಲಾಖೆಯಿಂದ 2600 ಕೋಟಿ, ನಗರಾಭಿವೃದ್ದಿ ಇಲಾಖೆಯಿಂದ 2000 ಕೋಟಿ, ಕಾರ್ಮಿಕ ಇಲಾಖೆಯಿಂದ 2000 ಕೋಟಿ, ಬಿಬಿಎಂಪಿ (ಗ್ರೆಟರ್​ಬೆಂಗಳೂರು)1600 ಕೋಟಿ ರೂ., ಬಾಕಿ ಬರಬೇಕಿದೆ. ನಮ್ಮ ಪರವಾಗಿ ಮಾಜಿ ಸಹಕಾರ ಸಚಿವ ಕೆ.ಎನ್​.ರಾಜಣ್ಣ ದ್ವನಿ ಎತ್ತಿದ್ದು ಬಿಟ್ಟರೆ, ಉಳಿದ ಸಚಿವರ್ಯಾ ಸಹ ಮಾತನಾಡುತ್ತಿಲ್ಲ. ಬಿಲ್​ ಬಿಡುಗಡೆಗೆ ಸಿನಿಯಾರಿಟಿ ಪರಿಗಣಿಸುತ್ತಿಲ್ಲ. ಅಧಿಕಾರಿಗಳೇ ಕೆಲವರ ಪರ ಲಾಬಿ ಮಾಡಿ, ವಿಶೇಷ ಎನ್​ಒಸಿ ನೀಡುತ್ತಿದ್ದಾರೆ. ಇನ್ನೂ ಹಣ ಬಿಡುಗಡೆ ಸಂದರ್ಭದಲ್ಲಿ ಶೇ.80 ರಷ್ಟು ಜ್ಯೇಷ್ಠತೆಗೆ ಆದ್ಯತೆ ನೀಡಬೇಕೆಂಬ ನಿಯಮವಿದ್ದರೂ ಅದನ್ನು ಅಧಿಕಾರಿಗಳು ಗಾಳಿಗೆ ತೂರಿದ್ದಾರೆ ಎಂದು ಮಂಜುನಾಥ್​ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರ ಸಂದ ಜಿಲ್ಲಾಧ್ಯಕ್ಷ ಎ.ಡಿ.ಬಲರಾಮಯ್ಯ, ಕಾರ್ಯಾಧ್ಯಕ್ಷ ಹನುಮಂತಯ್ಯ, ಉಪಾಧ್ಯಕ್ಷ ಸಿ.ಡಿ.ಕೃಷ್ಣ ಶ್ರೀನಿವಾಸ್​, ಹೇಮಂತ್​, ಹನುಮಂತರಾಜು, ಸಿ.ಆರ್​.ಹರೀಶ್​, ರವಿ, ಸುರೇಶಕುಮಾರ್​ ಮತ್ತಿತರರು ಹಾಜರಿದ್ದರು.