ತುಮಕೂರಿನಲ್ಲಿ ವಿದ್ಯುತ್​ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಹಾಗೂ ವಿದ್ಯುತ್​ ಸರಬರಾಜು ನಿರ್ವಹಣೆಯನ್ನು ಖಾಸಗಿ ಕಂಪನಿಗೆ ಕೊಡುವ ಸರ್ಕಾರದ ಕ್ರಮ ವಿರೋಧಿಸಿ ರಾಜ್ಯ ರೈತ ಸಂದ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.  
ತುಮಕೂರು

ವಿದ್ಯುತ್​ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರೈತ ಸಂಘದ ಪ್ರತಿಭಟನೆ
  • ಜಿಲ್ಲಾಧಿಕಾರಿ ಕಚೇರಿ ಮುಂಭಾಗ
  • ಖಾಸಗೀಕರಣ ಹುನ್ನಾರ
ತುಮಕೂರು: ಸಂಸತ್ತಿನಲ್ಲಿ ಮಂಡನೆಯಾಗಿರುವ ವಿದ್ಯುತ್​ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಹಾಗೂ ಕರ್ನಾಟಕದ 19 ಜಿಲ್ಲೆಗಳ ವಿದ್ಯುತ್​ ಸರಬರಾಜು ನಿರ್ವಹಣೆಯನ್ನು ಟಾಟಾ ಪವರ್​ ಕಂಪನಿಗೆ ವಹಿಸಿಕೊಡಲು ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುರುವಾರ ರೈತ ಸಂಘನೇತೃತ್ವದಲ್ಲಿ ನೂರಾರು ರೈತರು, ವಿದ್ಯುತ್ ಗುತ್ತಿಗೆದಾರರ ಸಂಘ, ವಿದ್ಯುತ್ ಬಕೆದಾರರ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ಕ್ರಮವನ್ನು ವಿರೋಧಿಸಿದ್ದಲ್ಲೆ ವಿದ್ಯುತ್​ ಖಾಸಗೀಕರಣ ಹುನ್ನಾರ ಕೈಬಿಡುವಂತೆ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಹಿತವನ್ನು ಮರೆತು ಲಾಂತರ ಕೋಟಿ ರೂ., ಬೆಲೆ ಬಾಳುವ ವಿದ್ಯುತ್​ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿದೆ. ಇದರಿಂದ ರೈತರು ವಿದ್ಯುತ್​ ಬಿಲ್​ ಕಟ್ಟಲಾಗದೆ ಆತ್ಮಹತ್ಯೆಯ ದಾರಿ ತುಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಅಲ್ಲದೆ ಮನೆ ಬಳಕೆಯ ವಿದ್ಯುತ್​ಗೆ ಮನಬಂದಂತೆ ಬೆಲೆ ಹೆಚ್ಚಳ ಮಾಡಿ,ಶೋಷಣೆಗೆ ಒಳಪಡಿಸುವ ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಹಾಗಾಗಿ, ಸರ್ಕಾರ ವಿದ್ಯುತ್​ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವ ಕ್ರಮದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದಲ್ಲಿ ಇಡೀ ರಾಜ್ಯದ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಹಿಂದೆ ಸಾವಿರ ದಿನಕ್ಕು ಹೆಚ್ಚು ಕಾಲ ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ 2019ರಲ್ಲಿ ಜಾರಿಗೆ ತರಲು ಹೊರಟಿದ್ದ ರೈತ ವಿರೋಧಿ ಕಾಯ್ದೆಗಳನ್ನು ಕೈಬಿಟ್ಟಿತ್ತು. ಆದರೆ, ವಿದ್ಯುತ್​ ಖಾಸಗಿ ಕಾಯ್ದೆ ಹಿಂಪಡೆದಿರಲಿಲ್ಲ. ಮತ್ತೆ ಸಂಸತ್ತಿನಲ್ಲಿ ವಿದ್ಯುತ್​ ಖಾಸಗೀಕರಣ ತಿದ್ದುಪಡಿ ಕಾಯ್ದೆ ಮಂಡಿಸುವ ಮೂಲಕ ಜನರಿಗೆ ಬರೆ ಎಳೆಯಲು ಹೊರಟಿದೆ. ಕೃಷಿ ಬಂಡವಾಳ ಹೆಚ್ಚಾಗಿ ರೈತರು ಪರದಾಡುತ್ತಿರುವ ಕಾಲದಲ್ಲಿ ಐಪಿ ಸೆಟ್​ಗಳಿಗೆ ಸ್ಮಾರ್ಟ್​ ಮೀಟರ್​ ಅಳವಡಿಸಿ ಮತ್ತಷ್ಟು ಹೊರೆಹೊರಿಸಿ ಕೃಷಿಯಿಂದ ವಿಮುಖಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಹಾಗಾಗಿ ಸರ್ಕಾರ ಕೂಡಲೇ ಸಂಸತ್ತಿನಲ್ಲಿ ಮಂಡಿಸಿರುವ ಬಿಲ್​ ಹಿಂಪಡೆಯಬೇಕು. ಹಾಗೆಯೇ 19 ಜಿಲ್ಲೆಗಳಲ್ಲಿರುವ ಚೆಸ್ಕಾಂ ನಿರ್ವಹಣೆಯನ್ನು ಟಾಟಾ ಪವರ್​ ಕಂಪನಿಗೆ ವಹಿಸಲು ಮುಂದಾಗಿರುವುದರಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ಮಾತನಾಡಿ, ಸರ್ಕಾರ ರಾಜ್ಯದ ಜನರ ತೆರಿಗೆ ಹಣದಲ್ಲಿ ಸುಮಾರು 5.50 ಲಕ್ಷ ಕೋಟಿ ರೂ.,ಗಳ ಮೌಲ್ಯ ಆಸ್ತಿ ಹೊಂದಿರುವ ವಿದ್ಯುತ್​ ಇಲಾಖೆಯನ್ನು ಕಟ್ಟಿದೆ. ಹಗಲಿರುಳು ಬೆವರು ಸುರಿಸಿ, ಚಳಿ, ಮಳೆ ಎನ್ನದೆ ನಿರ್ವಹಣೆ ಮಾಡಿ ರೈತರಿಗೆ, ಜನರಿಗೆ ಸೇವೆ ಒದಗಿಸುತ್ತಿದ್ದಾರೆ. ಈಗ ಸರ್ಕಾರ ಮೈಸೂರು ಸೇರಿದಂತೆ 19 ಜಿಲ್ಲೆಗಳಲ್ಲಿರುವ ಚೆಸ್ಕಾಂ ನಿರ್ವಹಣೆಯನ್ನು ಟಾಟಾ ಪವರ್​ ಲಿಮಿಟೆಡ್​ಗೆ ನೀಡಲು ಮುಂದಾಗಿದೆ. ಇದಕ್ಕೆ ಎಂದಿಗೂ ರೈತ ಸಂ ಅವಕಾಶ ನೀಡುವುದಿಲ್ಲ. ಒಮ್ಮೆ ಖಾಸಗಿಯವರ ನಿರ್ವಹಣೆಗೆ ಹೋದರೆ ವಿದ್ಯುತ ದರ ಹೆಚ್ಚಳದ ಜತೆಗೆ, ರೈತರ ಪಂಪ್​ ಸೆಟ್​ಗಳಿಗೆ ಸ್ಮಾರ್ಟ್​ ಮೀಟರ್​ ಅಳವಡಿಸಿ, ದುಪ್ಪಟ್ಟು ದರ ವಿಧಿಸುವುದು ಖಂಡಿತ. ಅಲ್ಲದೆ, ಸರ್ಕಾರದ ವಿವಿಧ ಉಚಿತ ಯೋಜನೆಗಳು ನೆಲಕಚ್ಚಲಿವೆ ಎಂದರು.
ವಿದ್ಯುತ್​ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್​ ಮಾತನಾಡಿ, ರಾಜ್ಯದಲ್ಲಿ 32 ಸಾವಿರ ವಿದ್ಯುತ್​ ಗುತ್ತಿಗೆದಾರರು ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಸೇವೆ ಒದಗಿಸುತ್ತಾ ಬಂದಿದ್ದಾರೆ. ಒಂದು ವೇಳೆ ಖಾಸಗಿಯರ ನಿರ್ವಹಣೆಗೆ ವಹಿಸಿದರೆ 32 ಸಾವಿರ ಕುಟುಂಬಗಳು ಬೀದಿಗೆ ಬೀಳಲಿವೆ. ಹಾಗೆಯೇ ವಿದ್ಯುತ್​ ಇಲಾಖೆಯಲ್ಲಿ ಕೆಲ ಮಾಡುವ ನೌಕರರು ಸಹ ಅತಿ ಕಡಿಮೆ ವೇತನಕ್ಕೆ ಖಾಸಗಿಯರ ಬಳಿ ಗುಲಾಮಂತೆ ಕೆಲ ಮಾಡಬೇಕಾಗುತ್ತದೆ. ಹಾಗಾಗಿ, ವಿದ್ಯುತ್​ ಖಾಸಗೀಕರಣಕ್ಕೆ ಸರ್ಕಾರ ಎಂದಿಗೂ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ತುಮಕೂರು ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ, ದೊಡ್ಡ ಮಲ್ಲಯ್ಯ, ಎಚ್​.ಸಿ.ನಾಗೇಶ್​, ಈಶ್ವರಯ್ಯ, ಭಾನುಪ್ರಕಾಶ್​, ರಂಗಸ್ವಾಮಯ್ಯ, ಕೆ.ಎಚ್​.ರಂಗಯ್ಯ, ಉದಯಕುಮಾರ್​ ನಂದಿಹಳ್ಳಿ, ಕೊರಟಗೆರೆ ಶಬ್ಬೀರ್​ ಪಾಷ, ಗುಬ್ಬಿ ಲೋಕೇಶ್​ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.