ಕೆಪಿಎಸ್ಸಿಯಲ್ಲಿ ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆ ತುಮಕೂರಿನಲ್ಲಿ ಎಬಿವಿಪಿ ಸಹಿ ಆಂದೋಲನ ನಡೆಸಿತು.
- ಪಶುವೈದ್ಯಾಧಿಕಾರಿ ನೇಮಕಾತಿ ಲೋಪ
- ಸಿಬಿಐ ತನಿಖೆಗೆ ಆಗ್ರಹ
- ತುಮಕೂರಿನಲ್ಲಿ ವಿದ್ಯಾರ್ಥಿಗಳ ಒತ್ತಾಯ
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಿದ ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಘಟಕದ ವತಿಯಿಂದ ಬುಧವಾರ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ನೇಮಕಾತಿ ಅಕ್ರಮ ಪ್ರಕರಣವನ್ನು ಉನ್ನತ ಮಟ್ಟದ ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಸಿಬಿಐ ತನಿಖೆಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಮುಖಂಡ ಎಚ್.ಆರ್.ಗುರುಪ್ರಸಾದ್, ಕೆಪಿಎಸ್ಸಿ ನೇಮಕಾತಿ ಹಗರಣ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಚಿವ ಪ್ರಿಯಾಂಕ ರ್ಖಗೆ ಉಡಾಫೆಯ ಉತ್ತರ ನೀಡುತ್ತಿರುವುದು ಖಂಡನೀಯ. ಪ್ರಕರಣ ಸತ್ಯಾಸತ್ಯತೆ ಹೊರಬಬೇಕಾದರೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದರು.
ಅಭಿಯಾನದಲ್ಲಿ ಎಬಿವಿಪಿ ನಗರ ಸಂಘಟನಾ ಕಾರ್ಯದರ್ಶಿ ಸಮನ್ವಿತ್ ಹಾಗೂ ವಿದ್ಯಾರ್ಥಿ ಮುಖಂಡರಾದ ಜೀವನ್, ಅರುಣ್, ಶಿವಕುಮಾರ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.