ಗುಬ್ಬಿ ತಾಲೂಕು ಭೂಮಾಪನಾ ಇಲಾಖೆಯಲ್ಲಿ ರಾಜ್ಯಸಭಾ ಮಾಜಿ ಸದಸ್ಯೆ ಬಿ.ಜಯಶ್ರೀ ಹಾಗೂ ರಂಗತಜ್ಞೆ ಆನಂದರಾಜ್ ಕಾಯುತ್ತಿರುವುದು.
- ಮಾಜಿ ಸಂಸೆದಗು ತಪ್ಪದ ಅಲೆದಾಟ
- ಸ್ವಯಂಪ್ರೇರಿತ ದೂರು ದಾಖಲಿಸಿದ ಲೋಕಾಯುಕ್ತ
- ಸರ್ವೇಯರ್, ತಹಸೀಲ್ದರ್, ಎಸಿ ವಿರುದ್ಧವೂ ಪ್ರಕರಣ
ಗುಬ್ಬಿ: ರಾಜ್ಯಸಭಾ ಮಾಜಿ ಸದಸ್ಯೆ ಬಿ.ಜಯಶ್ರೀ ಅವರ ಜಮೀನು ಸರ್ವೇ ಮಾಡಲು ವಿಳಂಬ ಮಾಡಿದ್ದಲ್ಲದೆ ಮೂರು ಬಾರಿ ಹಣ ಕಟ್ಟಿಸಿಕೊಂಡಿದ್ದು, ಜತೆಗೆ ಅವರಿಗೆ ಅಗೌರವ ತೋರಿದ್ದ ಭೂಮಾಪನ ಇಲಾಖೆಯ ವಿರುದ್ಧ ರಾಜ್ಯ ಲೋಕಾಯುಕ್ತ ಸುಮೋಟೋ ದೂರು ದಾಖಲಿಸಿಕೊಂಡಿದೆ. ಅಲ್ಲದೆ, ಸರ್ವೇಯರ್, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ, ತಹಸೀಲ್ದಾರ್, ತುಮಕೂರು ಉಪವಿಭಾಗಾಧಿಕಾರಿ ವಿರುದ್ಧ ಸ್ವಯಂ ಪ್ರೇರಿತ ದೂರನ್ನು ಉಪಲೋಕಾಯುಕ್ತ ಬಿ.ವೀರಪ್ಪ ದಾಖಲಿಸಲು ಆದೇಶಿಸಿದ್ದಾರೆ.
ವಿಜಯವಾಣಿ ಪತ್ರಿಕೆಯಲ್ಲಿ ಜ.30ರಂದು "ಮಾಜಿ ಸಂಸೆದಗೂ ತಪ್ಪದ ಅಲೆದಾಟ' ಶೀರ್ಷಿಕೆಯಡಿ ಪ್ರಕಟಗೊಂಡಿದ್ದ ಸುದ್ದಿಯನ್ನು ಆಧರಿಸಿ ಲೋಕಾಯುಕ್ತ ಕಾಯ್ದೆ ಕಲಂ 1984 ರ 2(2)(ಸಿ), ಕಲಂ 2(5), 2(10), ಭಾರತೀಯ ದಂಡ ಸಂಹಿತೆ ಅಧ್ಯಾಯ 9ರ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ಮುಂದಿನ ಮಾರ್ಚ್ 9ರಂದು ಆಕ್ಷೇಪ ಸಲ್ಲಿಸಲು ಎಲ್ಲ ದಾಖಲಾತಿಯೊಂದಿಗೆ ಖುದ್ದು ಹಾಜರಾಗಲು ಬಿ.ವೀರಪ್ಪ ಆದೇಶ ಹೊರಡಿಸಿದ್ದಾರೆ.
ಪ್ರಕರಣ ಹಿನ್ನೆಲೆ: ರಂಗ ಚಟುವಟಿಕೆಗೆ ಮುಡುಪಾದ ಜಿ.ವಿ.ಮಾಲತಮ್ಮ ಆರ್ಟ್ ಟ್ರಸ್ಟ್ ಹೆಸರಿನಲ್ಲಿರುವ ಜಮೀನನ್ನು ಖಾತೆ ಮಾಡಿಸಿಕೊಳ್ಳಲು ರಾಜ್ಯಸಭಾ ಮಾಜಿ ಸದಸ್ಯೆ ಬಿ.ಜಯಶ್ರೀ ಗುಬ್ಬಿ ಭೂ ಮಾಪನಾ ಇಲಾಕೆ ಕಚೇರಿಯಲ್ಲಿ ಒಂದೇ ತಿಂಗಳಲ್ಲಿ ಮೂರು ಬಾರಿ ಹಣ ಪಾವತಿಸಿದ್ದರು. ಆದರೆ, ಸಂಬಂಧಿಸಿದ ಅಧಿಕಾರಿಗಳು ಸಬೂಬು ಹೇಳಿ ಸರ್ವೇ ಮಾಡದೆ ಕಾಲಹರಣ ಮಾಡುತ್ತಿದ್ದರು. ಈ ಹಿನ್ನೆಲೆ ಗುರುವಾರ ಭೂಮಾಪನಾ ಇಲಾಖೆಗೆ ಮತ್ತೊಮ್ಮೆ ಬಂದಿದ್ದ ಜಯಶ್ರೀ ಹಾಗೂ ರಂಗತಜ್ಞೆ ಆನಂದರಾಜ್ ಅವರಿಗೆ "ನಿಮ್ಮ ಕೆಲಸಕ್ಕಿಂತ ನಮ್ಮ ಮೇಲಾಧಿಕಾರಿಗಳ ಕೆಲಸವೇ ಮುಖ್ಯ' ಉಡಾಫೆಯಾಗಿ ಸರ್ವೇಯರ್ ಶಿವಾನಂದ್ ಮಾತನಾಡಿದ್ದರು. ಈ ಸಂಬಂಧ ವಿಜಯವಾಣಿ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಂಡಿತ್ತು.