ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ಕರ್ನಾಟಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿದರು. ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಕೆ.ಗೋವಿಂದರಾಜು, ಟಿ.ಬಿ.ಜಯಚಂದ್ರ, ಎಸ್.ಆರ್.ಶ್ರೀನಿವಾಸ್ ಮತ್ತಿತರರು ಇದ್ದರು.
- ಸಿಎಂ ಸಿದ್ದರಾಮಯ್ಯ ಘೋಷಣೆ
- ತುಮಕೂರಿನಲ್ಲಿ "ಕರ್ನಾಟಕ ಕ್ರೀಡಾಕೂಟ'ಕ್ಕೆ ವಿದ್ಯುಕ್ತ ಚಾಲನೆ
- ಪೊಲೀಸ್, ಅರಣ್ಯ ಇಲಾಖೆ ನೇಮಕಾತಿ, ಕ್ರೀಡಾಪಟುಗಳಿಗೆ ಶೇ.3ರಷ್ಟು ಮೀಸಲು
ತುಮಕೂರು: ಅಂತಾರಾಷ್ಟ್ರೀಯ ಈಜುಕೊಳ, ಹಾಕಿ ಕ್ರೀಡಾಂಗಣವನ್ನು ತುಮಕೂರಿನಲ್ಲಿ ನಿರ್ಮಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ 7 ದಿನಗಳ "ಕರ್ನಾಟಕ ಕ್ರೀಡಾಕೂಟ 2025-26'ಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಸರ್ಕಾರವು ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಸಹಕಾರ, ಪ್ರೋತ್ಸಾಹ ನೀಡುತ್ತಾ ಬಂದಿದೆ. ಪೊಲೀಸ್, ಅರಣ್ಯ ಇಲಾಖೆ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ಶೇ.3ರಷ್ಟು ಮೀಸಲು ನೀಡಲಾಗಿದೆ. ಇನ್ನುಳಿದ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗ ನೇಮಕಾತಿಗಳಲ್ಲಿ ಶೇ.2 ರಷ್ಟು ಮೀಸಲು ಜಾರಿ ಗೊಳಿಸಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕ್ರೀಡಾಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ 25 ಕೋಟಿ ರೂ., ಅನುದಾನ ನೀಡುವಂತೆ ಸಚಿವ ಪರಮೇಶ್ವರ್ ಮಾಡಿದ ಮನವಿಯನ್ನು ಸಾರಸಗಟಾಗಿ ತಿರಸ್ಕರಿಸಿದ ಸಿದ್ದರಾಮಯ್ಯ, ಉಡುಪಿ&ಮಂಗಳೂರಿನಲ್ಲಿ ಕಳೆದ ಬಾರಿ ಕರ್ನಾಟಕ ಕ್ರೀಡಾಕೂಟಕ್ಕೆ ಹಾಗೂ ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ 6 ಕೋಟಿ ರೂ., ನೆರವು ನೀಡಿದ್ದು ಈ ಬಾರಿಯು ಅಷ್ಟೇ ಅನುದಾನವನ್ನು ನೀಡಲಾಗುವುದು. ತುಮಕೂರಿನಿಂದ ವಿಶ್ವಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಲಿ ಎಂದು ಆಶಿಸಿದರು.
ಒಲಿಂಪಿಕ್ಸ್, ಪ್ಯಾರಾ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದರೆ 6 ಕೋ., ಬೆಳ್ಳಿ ಗೆದ್ದರೆ 4 ಕೋಟಿ ಹಾಗೂ ಕಂಚಿನ ಪದಕ ಗೆದ್ದರೆ 3 ಕೋಟಿ ರೂ., ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರ ನೀಡಲಿದೆ. ಏಷ್ಯಾ, ಕಾಮನ್ವೆಲ್ತ್ , ಒಲಿಂಪಿಕ್ಸ್ ವಿಜೇತರಿಗೆ ಸರ್ಕಾರಿ ಉದ್ಯೋಗಗಳಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. ಇಷ್ಟು ಪ್ರೋತ್ಸಾಹವನ್ನು ಬೇರೆ ಯಾವುದೇ ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ನೀಡುವುದಿಲ್ಲ ಎಂದು ತಿಳಿಸಿದರು.
ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದ ರಾಜು, ದೆಹಲಿ ವಿಶೇಷ ಪ್ರತಿನಿಧಿ ಟಿ .ಬಿ ಜಯಚಂದ್ರ, ಮಾಜಿ ಸಚಿವ ಕೆ.ಎನ್ ರಾಜಣ್ಣ, ಕೆಎಸ್ಆರ್ಟಿಸಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್, ಬಿ. ಸುರೇಶ್ ಗೌಡ, ಎಂಟಿ.ಕೃಷ್ಣಪ್ಪ, ಕೆ. ಷಡಕ್ಷರಿ, ಎಚ್.ವಿ. ವೆಂಕಟೇಶ್, ಆರ್. ರಾಜೇಂದ್ರ, ರಮೇಶ್ಬಾಬು, ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಬಿ.ಎಂ.ಟಿ.ಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಕೆಒಎ ಪ್ರಧಾನ ಕಾರ್ಯದರ್ಶಿ ಟಿ. ಅನಂತರಾಜ್, ಯುವ ಸಬಲೀಕರಣ ಇಲಾಖೆಯ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತರಾದ ಚೇತನ್ ಆರ್., ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
ಕ್ರೀಡೆಯಿಂದ ಶಿಸ್ತು, ಸಂಯಮ, ಸಮಯಪ್ರಜ್ಞೆ ಪಾಲನೆಗೆ ಸಹಕಾರಿಯಾಗಲಿದೆ. ಸೋಲುಗೆಲುವುಗಿಂತ ಕ್ರೀಡಾ ಸ್ಫೂರ್ತಿ ಮುಖ್ಯ. ಪ್ರತಿಯೊಬ್ಬ ಕ್ರೀಡಾಪಟುವು ಇದನ್ನು ಪಾಲಿಸಬೇಕು. ಕ್ರೀಡಾಪಟುಗಳಿಗೆ ಉತ್ತಮಭವಿಷ್ಯವಿದ್ದು, ಕಠಿಣಶ್ರಮಅತ್ಯಗತ್ಯ. ಪರಿಶ್ರಮದಿಂದ ಗುರಿ ಸಾಧಿಸಲು ಉತ್ತಮತರಬೇತಿ ಅಗತ್ಯ. ವಿದ್ಯಾರ್ಥಿದಿಸೆಯಲ್ಲಿದ್ದಾಗ ಶಾಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ನಾನು ಭಾಗವಹಿಸಿದ್ದೆ. ುಟ್ಬಾಲ್, ಕ್ರಿಕೆಟ್ ನನಗೆ ಅಚ್ಚುಮೆಚ್ಚು. ಒನ್ಡೇ ಟಿ20 ಕ್ರಿಕೆಟ್ ಪಂದ್ಯಗಳನ್ನು ವೀಸುತ್ತೇನೆ. ಇನ್ನೂ ುಟ್ಬಾಲ್ ವಿಶ್ವಕಪ್ ಪಂದ್ಯಗಳು ರಾತ್ರಿ ವೇಳೆ ನಡೆಯಲಿದ್ದು ಆ ಸಂದರ್ಭದಲ್ಲೇ ತಪ್ಪದೇ ವಿಸುತ್ತೇನೆ. ರಾತ್ರಿ ಹೊತ್ತು ಯಾರ ರಾಜಕೀಯ ಒತ್ತಡವು ಇರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ತುಮಕೂರಿನಲ್ಲಿ ಖೇಲೋ ಇಂಡಿಯಾ !!
ಕರ್ನಾಟಕ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ತುಮಕೂರಿನಲ್ಲಿ ಆಯೋಜಿಸಲಾಗಿದ್ದು 4500 ಕ್ರೀಡಾಪಟುಗಳು ಈ ಕ್ರೀಡಾ ಹಬ್ಬದಲ್ಲಿ ಭಾಗವಹಿಸಿದ್ದಾರೆ. ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂಬುದು ನಮ್ಮಿಚ್ಛೆ. ಇನ್ನೂ ಬೇರೆ ರಾಜ್ಯಗಳಿಗೆ ಕ್ರೀಡಾಪಟುಗಳು ವಲಸೆ ಹೋಗುವುದನ್ನು ತಡೆಯಲು ಸರ್ಕಾರವು ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಖೇಲೋ ಇಂಡಿಯಾ ಕ್ರೀಡಾಕೂಟವನ್ನು ತುಮಕೂರಿನಲ್ಲಿ ಆಯೋಜಿಸುವ ಚಿಂತನೆ ಇದ್ದು ಈ ನಿಟ್ಟಿನಲ್ಲಿ ಪ್ರಯತ್ನ ಪಡಲಾಗುವುದು ಎಂದು ಕೆಒಎ ಅಧ್ಯಕ್ಷ ಕೆ.ಗೋವಿಂದರಾಜು ತಿಳಿಸಿದರು.
ಅನೂಪ್ ಶ್ರೀಧರ್, ಸುನಿಲ್ಗೆ ಗೌರವ
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್ ಹಾಗೂ ಹಾಕಿ ಆಟಗಾರ ಸುನಿಲ್ರನ್ನು ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಸನ್ಮಾನಿಸಿ ಗೌರವಿಸಿದರು. ತುಮಕೂರಿನ ಅಥ್ಲೀಟ್ ಕೃಷಿಕ್ ನೇತೃತ್ವದ ತಂಡವು ಕ್ರೀಡಾಜ್ಯೋತಿಯನ್ನು ಹೊತ್ತು ತಂದಿತು.
ನಶೆಮುಕ್ತ ಕರ್ನಾಟಕ ನಿಮಾರ್ಣದ ಸಂಕಲ್ಪದೊಂದಿಗೆ ಕರ್ನಾಟಕ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಯುವಕರು ಮಾದಕ ವ್ಯಸನಗಳಿಂದ ದೂರವಿದ್ದು ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕೆಂಬ ಮಹತ್ತರ ಉದ್ದೇಶ ಹೊಂದಲಾಗಿದೆ ಎಂದು ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿದೆ. ಕ್ರೀಡೆಯಲ್ಲಿ ಗೆಲುವೆ ಮುಖ್ಯವಲ್ಲ. ಭಾಗವಹಿಸುವುದು ಬಹಳ ಮುಖ್ಯ. ಕ್ರೀಡೆ ವಿದ್ಯಾಭ್ಯಾಸದ ಜತೆಗೆ ಯುವಕರ ಜೀವನ ರೂಪಿಸುವ ಶಕ್ತಿಯಾಗಿದೆ ಎಂದರು.