ಕರ್ನಾಟಕ ಕ್ರೀಡಾಕೂಟದ ಹ್ಯಾಂಡ್ ಬಾಲ್ ಮಹಿಳೆಯರ ವಿಭಾಗದಲ್ಲಿ ತುಮಕೂರು ತಂಡ ಉತ್ತಮ ಪ್ರದರ್ಶನ ನೀಡಿ ಚಿನ್ನ ಗೆದ್ದುಕೊಂಡಿತು.
- ಕರ್ನಾಟಕ ಕ್ರೀಡಾಕೂಟ ಸಂಪನ್ನ
- ಆತಿಥೇಯ ಯುವತಿಯರ ಶ್ರೇಷ್ಟ ಪ್ರದರ್ಶನ
- ಜ್ಯೋತಿ, ಮಾಧವಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ
ತುಮಕೂರು: ಆತಿಥೇಯ ತುಮಕೂರಿನ ಮಹಿಳಾ ತಂಡ ಕರ್ನಾಟಕ ಕ್ರೀಡಾಕೂಟ ಹ್ಯಾಂಡ್ಬಾಲ್ನಲ್ಲಿ ಹಾಸನ ತಂಡದ ವಿರುದ್ಧ ಅರ್ಹ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಪುರುಷರ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ತಂಡ ಸ್ವರ್ಣ ಪದಕ ಗೆದ್ದಿತು.
ತುಮಕೂರು ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆದ ಮಹಿಳೆಯರ ಫೈನಲ್ ಪಂದ್ಯದಲ್ಲಿ ಆತಿಥೇಯ ತುಮಕೂರು ತಂಡವು 25-20 ರಿಂದ ಹಾಸನ ವಿರುದ್ಧ ಭರ್ಜರಿ ಜಯ ದಾಖಲಿಸಿ ಬಂಗಾರದ ಬೇಟೆಯಾಡಿತು. ಪಾವಗಡ ಮೂಲದ ಗ್ರಾಮೀಣಭಾಗದ ಆಟಗಾರ್ತಿಯರನ್ನೊಳಗೊಂಡ ತುಮಕೂರು ತಂಡದಲ್ಲಿ ಉತ್ತಮ ಹೊಂದಾಣಿಕೆ ಕಂಡುಬಂತು.
ಆತಿಥೇಯರ ಪರ ಜ್ಯೋತಿ ಮತ್ತು ಮಾಧವಿ ತಲಾ 7 ಅಂಕ ಗಳಿಸಿ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದರು. ಮೊದಲಾರ್ಧದಲ್ಲಿ 12-8 ರಿಂದ ಮುನ್ನಡೆ ಹೊಂದಿದ್ದ ತುಮಕೂರು ತಂಡ ದ್ವೀತಿಯಾರ್ಧದಲ್ಲಿ ಕೆಲವು ತಪು$್ಪಗಳನ್ನು ಎಸಗಿ ಪೈಪೋಟಿ ಎದುರಿಸಿತು. ಅಂತಿಮವಾಗಿ ಮತ್ತೆ ಲಯಬದ್ಧ ಆಟಕ್ಕೆ ಮರಳಿದ ಆತಿಥೇಯರು ಮುನ್ನಡೆ ಬಿಟ್ಟುಕೊಡಲಿಲ್ಲ. ಹಾಸನ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು.
ಮಹಿಳೆಯರ ವಿಭಾಗದಲ್ಲಿ ಶಿವಮೊಗ್ಗ ಹಾಗೂ ಬೆಂಗಳೂರು ನಗರ ಜಂಟಿ 3ನೇ ಸ್ಥಾನ ಪಡೆದವು.
ಬೆಂಗಳೂರು ಗ್ರಾಮಾಂತರ ಚಾಂಪಿಯನ್: ಪುರುಷರ ವಿಭಾಗದ ಫೈನಲ್ ನಲ್ಲಿ ಬೆಂಗಳೂರು ಗ್ರಾಮಾಂತರ ತಂಡ 39-27 ರಿಂದ ಬೆಂಗಳೂರು ನಗರ ತಂಡವನ್ನು ಮಣಿಸಿ ಚಿನ್ನದ ಪದಕ ಗೆದ್ದುಕೊಂಡಿತು.
ಬೆಂಗಳೂರು ಗ್ರಾಮಾಂತರದ ತಂಡದ ಪರ ಶೇಖರ್ 14 ಮತ್ತು ಗಗನ್ 13 ಅಂಕ ಗಳಿಸಿ ಗೆಲುವಿನ ರೂವಾರಿದರು. ಗೋಲ್ ಕೀಪರ್ ಯೋಗೇಶ್ ಎದುರಾಳಿಗಳ ತಂಡದ ಆಕ್ರಮಣ ಎಸೆತಗಳನ್ನು ತಡೆಯುವಲ್ಲಿ ಯಶಸ್ವಿಯಾದರು.
ಹಾಸನ ಮತ್ತು ಮೈಸೂರು ಪುರುಷರ ತಂಡಗಳು ಜಂಟಿ ಕಂಚಿನ ಪದಕ ಪಡೆದವು.