ತುಮಕೂರಿನಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಸಿದ್ಧತೆ.
- ಪ್ರಗತಿಯತ್ತ ಕರ್ನಾಟಕ 3 ವರ್ಷಗಳ ಸಾಧನಾ ಸಮಾವೇಶ
- ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್
- ಗಿನ್ನಿಸ್ ದಾಖಲೆಯೊಂದು ನಿರ್ಮಾಣ
ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ 3 ವರ್ಷ ತುಂಬುತ್ತಿರುವ ಸಂಭ್ರಮದಲ್ಲಿ "ಪ್ರಗತಿಯತ್ತ ಕರ್ನಾಟಕ' ಸಾರ್ಥಕ ಸೇವೆಗಳ ಸಮರ್ಪಣೆ ಮಾಡುವ ಐತಿಹಾಸಿಕ ಸಮಾವೇಶಕ್ಕೆ ತುಮಕೂರು ಸಾಕ್ಷೀಕರಿಸಲಿದೆ.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮೇ 19 ರಂದು ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಜನತೆಗೆ ಸಮರ್ಪಣೆ ಮಾಡುವ ಈ ವಿಶೇಷ ಸಮಾವೇಶದಲ್ಲಿ "ಗಿನ್ನಿಸ್ ದಾಖಲೆ'ಯೊಂದು ನಿರ್ಮಾಣವಾಗಲಿದೆ. 1.52 ಲಕ್ಷ ಲಾನುಭವಿಗಳು ಭಾಗವಹಿಸಲಿರುವ ಈ ಸಮಾವೇಶವನ್ನು ಸಾರ್ಥ್ಯಕ್ಯಗೊಳಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಕಳೆದ 3 ವರ್ಷಗಳು ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ರಾಜ್ಯದ ಜನತೆಗೆ ಅರ್ಪಿಸಲಾಗಿದೆ. ಈ ಸುಸಂದರ್ಭದಲ್ಲಿ ಉತ್ತರದಾಯಿತ್ವವಾಗಿ ತುಮಕೂರು ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಆಗಿರುವ ಅಭೂತಪೂರ್ವ ಅಭಿವೃದ್ಧಿ ಕಾರ್ಯಕ್ರಮವನ್ನು ಈ ಸಮಾವೇಶದ ಮೂಲಕ ಫಲಾನುಭವಿಗಳಿಗೆ ಹಕ್ಕುಪತ್ರ ಸವಲತ್ತುಗಳನ್ನು ನೀಡುವ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಈ ಸಾಧನೆಯಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ಈ ಸಾಧನೆಗಾಗಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಿರ್ಮಿಸಲಿದ್ದು, ಸಮಾವೇಶದಲ್ಲೇ ಈ ಸಾಧನೆಯ ಪ್ರಶಸ್ತಿಯನ್ನು ಪ್ರಧಾನ ಮಾಡಲು ಇಂಗ್ಲೇಂಡ್ನಿಂದ ಗಿನ್ನಿಸ್ ಸಂಸ್ಥೆಯವರು ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಜಿಲ್ಲೆಯ ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳಡಿ ಇ-ಪೌತಿ ಆಂದೋಲನಾ - 1,06,000; ದರಖಾಸ್ತು ಪೋಡಿ - 24,256; ಕಂದಾಯ ಗ್ರಾಮ ಹಕ್ಕು ಪತ್ರ - 20,666 ಮತ್ತು ಪೋಡಿ ಮುಕ್ತ ಅಭಿಯಾನ 1570 ಸೇರಿದಂತೆ ಒಟ್ಟು 1,52,492 ಫಲಾನುಭವಿಗಳಿಗೆ ಹಕ್ಕು ಪತ್ರ/ಆದೇಶ ಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ಅಲ್ಲದೆ, ರಾಜ್ಯದಲ್ಲಿಯೇ ದೊಡ್ಡ ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಒಟ್ಟು 600 ಹುದ್ದೆಗಳ ನೇಮಕಾತಿ ಆದೇಶವನ್ನು ಕಾರ್ಯಕ್ರಮದಲ್ಲಿ ನೀಡಲಾಗುತ್ತಿದೆ ಎಂದರು.
ಸುರಕ್ಷತೆ ದೃಷ್ಟಿಯಿಂದ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಹಾಗೂ ಕಾರ್ಯಕ್ರಮದ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 15 ಅಂಬುಲೆನ್ಸ್ಗಳನ್ನು ನುರಿತ ವೈದ್ಯಕಿಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿರುತ್ತದೆ. ಅಗ್ನಿಶಾಮಕ ವಾಹನಗಳನ್ನು ನಿಯೋಜನೆ ಮಾಡಲಾಗಿರುತ್ತದೆ. ಕಾರ್ಯಕ್ರಮದ ಸ್ಥಳದಲ್ಲಿ ಆಯಾ ಗ್ಯಾಲರಿಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಮತ್ತು ಮಜ್ಜಿಗೆಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಅದರ ನಿರ್ವಹಣೆಗಾಗಿ ವಿವಿಧ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿನಿಯೋಜಿಸಲಾಗಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿಯ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್ ಗೌಡ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಒ ಬಿ.ವಿ.ಆಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಉಪಸ್ಥಿತರಿದ್ದರು.