ಕನ್ನಡ ಮೀಸಲಾತಿ ಬೆಳ್ಳಿ ಹಬ್ಬ ಆಚರಣೆ ಕುರಿತು ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಾ.ಬರಗೂರು ರಾಮಚಂದ್ರಪ್ಪ ಅವರೊಂದಿಗೆ ಶುಭಕಲ್ಯಾಣ್ ಚರ್ಚಿಸಿದರು. ಹಿಮಂತ್ರಾಜು ಇದ್ದರು.
- ಡಾ.ಬರಗೂರು ರಾಮಚಂದ್ರಪ್ಪ ಸಾರಥ್ಯ
- ಜಿಲ್ಲಾಡಳಿತದೊಂದಿಗೆ ಪೂರ್ವಭಾವಿ ಸಭೆ
ತುಮಕೂರು: ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ವೃತ್ತಿ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ದೊರಕಿಸಿಕೊಟ್ಟ ಕನ್ನಡತನಕ್ಕೆ ಇದೀಗ 25 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಕಾರ್ಯಕ್ರಮ ಆಯೋಜಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ಜಿಲ್ಲೆಯವರೇ ಆದ ಡಾ.ಬರಗೂರು ರಾಮಚಂದ್ರಪ್ಪ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೈಗೊಂಡ ಪ್ರಾಧಿಕಾರದ ಪ್ರಮುಖ ನಿರ್ಧಾರಗಳಲ್ಲಿ 2001 ಜೂನ್ 4ರಂದು ವೃತ್ತಿಪರ ಶಿಕ್ಷಣ ಕೋರ್ಸ್ಗಳಿಗೆ ಆಯ್ಕೆಯಾಗುವ ರಾಜ್ಯದ ಅಭ್ಯರ್ಥಿಗಳಿಗೆ ಕನ್ನಡ ವ್ಯಾಸಂಗ ಮಾಡಿದಲ್ಲಿ ವಿಶೇಷ ಮೀಸಲಾತಿ ಒದಗಿಸಿ ಸರ್ಕಾರ ಆದೇಶಿಸಿತ್ತು.
ಈ ಆದೇಶದಿಂದ ರಾಜ್ಯದ ಹಲವಾರು ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ವ್ಯಾಸಂಗ ಮಾಡಿ ವೃತ್ತಿಪರ ಕೋರ್ಸ್ಗಳಿಗೆ ಆಯ್ಕೆಯಾಗಿದ್ದರು. ಈ ಕ್ರಮಕ್ಕೆ ಇದೀಗ 25 ವರ್ಷಗಳು ಸಂದಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಮೀಸಲಾತಿಗೆ 25ರ ಸಂಭ್ರಮ ಕಾರ್ಯಕ್ರಮ ಆಯೋಜನೆಗೆ ಜಿಲ್ಲಾಡಳಿತ ನಿರ್ಧರಿಸಿದ್ದು ಆರಂಭಿಕ ಸಭೆಯನ್ನು ಪೂರ್ಣಗೊಳಿಸಿದೆ.
ಕಾರ್ಯಕ್ರಮ ರೂಪುರೇಷೆ ಬಗ್ಗೆ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಾ.ಬರಗೂರು ರಾಮಚಂದ್ರಪ್ಪ ಅವರೊಂದಿಗೆ ಚರ್ಚೆ ನಡೆಸಿದ ಜಿಲ್ಲಾಧಿಕಾರಿ ಶುಭಕಲ್ಯಾಣ್, ಕಾರ್ಯಕ್ರಮ ದಿನಾಂಕದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರೊಂದಿಗೆ ಚರ್ಚಿಸಿ ತೀಮಾರ್ನಿಸುವುದಾಗಿ ಬರಗೂರು ಅವರಿಗೆ ತಿಳಿಸಿದರು.
ಬರಗೂರು ರಾಮಚಂದ್ರಪ್ಪ ಮಾತನಾಡಿ, ತಮ್ಮ ಅವಧಿಯಲ್ಲಿ 2001 ಜೂನ್ 4ರಂದು ವೃತ್ತಿಪರ ಶಿಕ್ಷಣ ಕೋರ್ಸ್ಗಳಿಗೆ ಕನ್ನಡ ಮೀಸಲಾತಿ, 2002 ಅಕ್ಟೋಬರ್ 24ರಂದು ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡ ಮೀಸಲಾತಿ ಆದೇಶವನ್ನು ಸರ್ಕಾರ ನೀಡಿದೆ. ಇದರಿಂದ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ರಾಜ್ಯದ ಅಪಾರ ಪ್ರಮಾಣದ ವಿದ್ಯಾರ್ಥಿಗಳು ಸೌಲಭ್ಯಗಳನ್ನು ಪಡೆದು ಉತ್ತಮ ಸ್ಥಾನ ಹೊಂದಲು ಅವಕಾಶವಾಯಿತು. ಇದಲ್ಲದೆ, ಸಾಕಷ್ಟು ಕನ್ನಡಪರ ನಿರ್ಧಾರಗಳನ್ನು ತೆಗೆದುಕೊಂಡು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಅಂತೆಯೇ ಸರ್ಕಾರ ತಮ್ಮ ವರದಿಯನ್ನು ಅಂಗೀಕರಿಸಿ ಸರ್ಕಾರಿ ಆದೇಶಗಳನ್ನು ಹೊರಡಿಸಿ ಕನ್ನಡಿಗರಿಗೆ ನೆರವಾಗಿದೆ ಎಂದು ಸ್ಮರಿಸಿದರು.
ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು ಇದ್ದರು.
ವೃತ್ತಿಪರ ಕೋರ್ಸ್ಗಳಿಗೆ ಕನ್ನಡ ಮೀಸಲಾತಿ ಆದೇಶವನ್ನು ತಂದು 25 ವರ್ಷಗಳು ಸಂದಿರುವ ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾಡಳಿತದಿಂದ ಕನ್ನಡ ಮೀಸಲಾತಿ ಬೆಳ್ಳಿ ಹಬ್ಬ ಆಚರಿಸಲು ಮುಂದಾಗುತ್ತಿರುವುದು ಪ್ರಶಂಸನೀಯ. ಇದು ಕನ್ನಡಿಗರ ಮುಂಬರುವ ಪೀಳಿಗೆಗೆ ಅತ್ಯಂತ ಸ್ಫೂರ್ತಿಯ ಗುರುತಾಗಲಿದೆ.